ಮೆರವಣಿಗೆ ವೇಳೆ ರಾಸಾಯನಿಕ ಎರಚಿದ ಪ್ರಕರಣ: ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ ಬಾಲಕ

7
ಕಾರ್ಪೊರೇಟರ್ ಸಂಭ್ರಮಾಚರಣೆಯ ಮೆರವಣಿಗೆ ಘಟನೆ ಕುರಿತು ಎಸ್‌ಪಿ ದಿವ್ಯಾ ಗೋಪಿನಾಥ್ ಹೇಳಿಕೆ

ಮೆರವಣಿಗೆ ವೇಳೆ ರಾಸಾಯನಿಕ ಎರಚಿದ ಪ್ರಕರಣ: ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ ಬಾಲಕ

Published:
Updated:

ತುಮಕೂರು: ‘16ನೇ ವಾರ್ಡ್‌ನಲ್ಲಿ ಗೆಲುವು ಕಂಡ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಉಲ್ಲಾ ಖಾನ್ ಅವರ ಸಂಭ್ರಮಾಚರಣೆಯ ಮೆರವಣಿಗೆ ವೇಳೆ ರಾಸಾಯನಿಕ ಬಿದ್ದು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನೊಬ್ಬನ ವಿಚಾರಣೆ ನಡೆಸಿದ್ದು ಆತ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಡಿಯೊ ದೃಶ್ಯಾವಳಿ ಆಧರಿಸಿ ಬಾಲಕನೊಬ್ಬನನ್ನು ವಿಚಾರಣೆಗೆ ಒಳಪಡಿಸಲಾಯಿತು. ಬಾಲಕ ವಿಜೇತ ಅಭ್ಯರ್ಥಿಯ ಬೆಂಬಲಿಗ. ಘಟನೆ ನಡೆದ ಸ್ಥಳದ ಸಮೀಪದ ಮನೆಯೊಂದರ ಹೊರಭಾಗದ ಕಿಟಕಿಯಲ್ಲಿ ಶೌಚಾಲಯ ಸ್ವಚ್ಛಗೊಳಿಸಲು ಹಸಿರು ಬಣ್ಣದ ಬಾಟಲಿ ಇಡಲಾಗಿತ್ತು. ಈ ಬಾಟಲಿಗೆ ನೀರು ತುಂಬಿಕೊಂಡು ಅದನ್ನು ತಿರುಗಿಸುತ್ತ ದ್ರಾವಣ ಮಿಶ್ರಿತ ನೀರನ್ನು ಗುಂಪಿನಲ್ಲಿದ್ದ ಜನರ ಮೇಲೆ ಚುಮುಕಿಸುವಂತೆ ಬಾಲಕ ನೃತ್ಯ ಮಾಡಿದ್ದಾನೆ’ ಎಂದು ಮಾಹಿತಿ ನೀಡಿದರು.

‘ನೃತ್ಯ ಮಾಡುವ ವೇಳೆ ಬಾಲಕನ ಮೇಲೆಯೂ ದ್ರಾವಣ ಬಿದ್ದಿದೆ. ವಿಚಾರಣೆಯಲ್ಲಿ ಆತ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ ಎಂದು ಹೇಳಿದ್ದಾನೆ. ಉದ್ದೇಶಪೂರ್ವಕವಾಗಿ ದಾಳಿ ಮಾಡುವಂತೆ ದ್ರಾವಣವನ್ನು ಮತ್ತೊಬ್ಬರ ಮೇಲೆ ಎರಚಿಲ್ಲ ಎನ್ನುವುದು ವಿಡಿಯೊದಲ್ಲಿ ಕಾಣುತ್ತದೆ’ ಎಂದು ವಿವರಿಸಿದರು.

‘ಈ ಪ್ರಕರಣದ ಬಗ್ಗೆ ಕುತೂಹಲ ಇತ್ತು. ಆದ ಕಾರಣ ತಾಂತ್ರಿಕ ಸೇರಿದಂತೆ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಬಾಟಲಿಯಲ್ಲಿ ಯಾವ ದ್ರಾವಣ ಇತ್ತು ಎನ್ನುವುದನ್ನು ಪತ್ತೆ ಮಾಡಲು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ’ ಎಂದರು.

ಸಿಪಿಐ ಕೆ.ಆರ್.ಚಂದ್ರಶೇಖರ್, ಪಿಎಸ್‌ಐ ವಿಜಯಲಕ್ಷ್ಮಿ, ಸಿ.ಆರ್.ಭಾಸ್ಕರ್ ಅವರನ್ನು ಒಳಗೊಂಡ ತಂಡ ಈ ಪತ್ತೆ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಗೋಷ್ಠಿಯಲ್ಲಿ ಇದ್ದರು.


ದಿವ್ಯಾ ಗೋಪಿನಾಥ್

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !