ಶನಿವಾರ, ಅಕ್ಟೋಬರ್ 19, 2019
27 °C
ಮಹಾನಗರ ಪಾಲಿಕೆಯ ಲೋಪಕ್ಕೆ ಬಲಿಯಾಯಿತೆ ಜೀವ?

ವಿದ್ಯುತ್‌ ತಗುಲಿ ಪೌರಕಾರ್ಮಿಕ ಸಾವು

Published:
Updated:
Prajavani

ತುಮಕೂರು: ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದ ಪೌರಕಾರ್ಮಿಕ ನರಸಿಂಹಮೂರ್ತಿ (35) ವಿದ್ಯುತ್‌ ತಗುಲಿ ಗುರುವಾರ ಮೃತಪಟ್ಟರು.

ಪುರಭವನ ವೃತ್ತ ಸಮೀಪದ ಪೂರ್ವಿಕಾ ಮೊಬೈಲ್‌ ಸೆಂಟರ್‌ ಮುಂಭಾಗ ಅಳವಡಿಸಿದ್ದ ಬಂಟಿಂಗ್ಸ್‌ಗಳನ್ನು (ಕೇಸರಿ ಬಣ್ಣದ ಬಟ್ಟೆಯ ತೋರಣ) ತೆರವು ಮಾಡುವ ಸೂಚನೆ ಪಾಲಿಕೆಯ ಅಧಿಕಾರಿಗಳಿಂದ ಬಂದಿತ್ತು. ಅದರಿಂದಾಗಿ ನರಸಿಂಹ ಹಾಗೂ ಮತ್ತೊಬ್ಬ  ಪೌರಕಾರ್ಮಿಕರಾದ ರಾಜು ಈ ಕೆಲಸಕ್ಕಾಗಿ ಬೆಳಗಿನ ಜಾವ 5.30ಕ್ಕೆ ಮನೆ ಬಿಟ್ಟಿದ್ದರು.

‘ಬೆಳಿಗ್ಗೆ 7 ಗಂಟೆ ಹೊತ್ತಿಗೆ ಅವಘಡ ನಡೆದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೆವು. ನರಸಿಂಹ ಮೇಲೆ ಹತ್ತಿ ಬಂಟಿಂಗ್ಸ್‌ಗಳನ್ನು ತೆರವು ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ವಿದ್ಯುತ್‌ ಸ್ಪರ್ಶವಾಗಿ ನೆಲಕ್ಕೆ ಬಿದ್ದರು. ವಿದ್ಯುತ್‌ನಿಂದಾಗಿ ಉಸಿರಾಟಕ್ಕೆ ತೊಂದರೆ ಆಗಿತ್ತು. ಬಿದ್ದ ರಭಸಕ್ಕೆ ತಲೆಗೂ ತೀವ್ರ ಪೆಟ್ಟಾಗಿತ್ತು’ ಎಂದು ಪ್ರತ್ಯಕ್ಷದರ್ಶಿ ರಾಜು ತಿಳಿಸಿದರು.

ತೀವ್ರ ಅಸ್ವಸ್ಥಗೊಂಡ ನರಸಿಂಹ ಅವರನ್ನು ಸ್ಥಳದಲ್ಲಿ ಇದ್ದವರ ಸಹಾಯದಿಂದ ರಾಜು ಸಮೀಪದಲ್ಲಿದ್ದ ಜಿಲ್ಲಾಸ್ಪತ್ರೆಗೆ ಆಟೊದಲ್ಲಿ ಸಾಗಿಸಿದರು. ಅಷ್ಟು ಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು.

ಸುರಕ್ಷತಾ ಕ್ರಮಕ್ಕೆ ಒತ್ತಾಯ: ಸಾವಿನ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿದ ಪೌರಕಾರ್ಮಿಕರು ‘ಮಹಾನಗರ ಪಾಲಿಕೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ದುಡಿಸಿಕೊಳ್ಳುತ್ತಿದೆ. ಈ ಸಾವಿಗೆ ಪಾಲಿಕೆಯೇ ನೇರ ಹೊಣೆ’ ಎಂದು ಆರೋಪಿಸಿದರು.

ಮೃತರ ಕುಟುಂಬಕ್ಕೆ ₹ 20 ಲಕ್ಷ ಪರಿಹಾರ ನೀಡುವಂತೆ ಬೆಳಿಗ್ಗೆ 8.30ರಿಂದ 10.30ರ ವರೆಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಸುರಕ್ಷತಾ ಸಲಕರಣೆ ನೀಡುವಂತೆ ಎರಡು ಬಾರಿ ಪತ್ರ ಬರೆದರೂ ಪಾಲಿಕೆ ಕ್ರಮ ವಹಿಸಿಲ್ಲ. ಗಮ್‌ಬೂಟ್‌ ಮತ್ತು ಕೈಗವಸು ನೀಡಿದ್ದರೆ ಅವಘಡ ತಪ್ಪಿಸಬಹುದಿತ್ತು ಎಂದರು.

ತರಬೇತಿ ನೀಡದೆ ಮ್ಯಾನ್‌ಹೋಲ್‌, ಚರಂಡಿ ಸಚ್ಛತೆ, ಹಂದಿ–ದನ ಹಿಡಿಯುವುದು, ವಿದ್ಯುತ್‌ ಕಂಬ ಹತ್ತಿ ಬ್ಯಾನರ್‌ ತೆರವು ಮಾಡುವ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಕಾರ್ಮಿಕರ ಜೀವಕ್ಕೆ ಕುತ್ತು ಬರುತ್ತಿದೆ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮೇಯರ್‌ ಲಲಿತಾ ರವೀಶ್‌, ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಸಂತೈಸಿದರು. ಸೂಕ್ತ ಪರಿಹಾರ ನೀಡುವುದಾಗಿ ಪ್ರತಿಭಟನಾಕಾರರ ಮನವೊಲಿಸಿದರು.

*

ಮಕ್ಕಳ ಅಳುವಿಗೆ ಮರುಗಿದ ಜನ
ಶಾಂತಿನಗರದ ಜೈ ಭೀಮ್‌ ರಸ್ತೆಯ ನಿವಾಸಿಯಾಗಿದ್ದ ನರಸಿಂಹಮೂರ್ತಿ ಪತ್ನಿ ರತ್ನಮ್ಮ ಮತ್ತು ಇಬ್ಬರು ಮಕ್ಕಳು ಆಸ್ಪತ್ರೆಯ ಆವರಣದಲ್ಲಿ ರೋದಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

4ನೇ ತರಗತಿ ಓದುತ್ತಿರುವ ನರಸಿಂಹ ಅವರ ಮಗ ಹಾಗೂ 7ನೇ ತರಗತಿ ಓದುತ್ತಿರುವ ಮಗಳು ಬಿಕ್ಕಿ–ಬಿಕ್ಕಿ ಅಳುತ್ತಿರುವುದನ್ನು ಕಂಡು ಸುತ್ತ ನಿಂತವರ ಕಣ್ಣುಗಳಲ್ಲೂ ನೀರು ಜಿನುಗಿದವು.

*

ಪರಿಹಾರ ನಿಗದಿಗೆ ಇಂದು ಸಭೆ

‘ಮೃತರ ಕುಟುಂಬಕ್ಕೆ ಎಷ್ಟು ಪರಿಹಾರ ನೀಡಬೇಕು ಎಂಬುದನ್ನು ಅ.11ರಂದು ನಡೆಯುವ ಪಾಲಿಕೆ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಮೇಯರ್‌ ಲಲಿತಾ ರವೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

₹ 10 ಲಕ್ಷ ಪರಿಹಾರ ನೀಡಬೇಕು. ಜತೆಗೆ ರತ್ನಮ್ಮ ಅವರಿಗೆ ಪಾಲಿಕೆಯಲ್ಲಿ ಉದ್ಯೋಗ ನೀಡಬೇಕು. ದಿಬ್ಬೂರಿನ ಸರ್ಕಾರಿ ವಸತಿ ಸಮುಚ್ಛಯದಲ್ಲಿ ಮನೆಯೊಂದನ್ನು ಕೊಡಬಹುದು ಎಂದು ಬಹುತೇಕ ಸದಸ್ಯರು ಹೇಳುತ್ತಿದ್ದಾರೆ. ಈ ಕುರಿತು ಅಂತಿಮ ತೀರ್ಮಾನವನ್ನು ಶುಕ್ರವಾರವೇ ತಳೆಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

*

ಪಾಲಿಕೆಯಿಂದ ‍ಪೌರಕಾರ್ಮಿಕರಿಗೆ ಎರಡು ಬಾರಿ ಬೂಟು ಮತ್ತು ಗ್ಲೌಸ್‌ಗಳು ವಿತರಣೆ ಮಾಡಲಾಗಿದೆ. ಅವುಗಳನ್ನು ಧರಿಸಿದ್ದರೆ ನರಸಿಂಹ ಅವರು ಬದುಕಿ ಉಳಿಯುತ್ತಿದ್ದರು.

ಲಲಿತಾ ರವೀಶ್‌, ಮೇಯರ್‌

Post Comments (+)