ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಜ್ಞಾನ ಸಂಪತ್ತು ಅಗತ್ಯ

ಪ್ರತಿಭಾಪುರಸ್ಕಾರ ಹಾಗೂ ಭಗೀರಥ ಜಯಂತ್ಯುತ್ಸವದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿಕೆ
Last Updated 24 ಜೂನ್ 2018, 11:01 IST
ಅಕ್ಷರ ಗಾತ್ರ

ತುಮಕೂರು: ಮಾನವನ ಅಭಿವೃದ್ಧಿಗೆ ವಿದ್ಯೆ ಬಹಳ ಮುಖ್ಯವಾದುದು. ಹಾಗಾಗಿ ಪೋಷಕರು ಮಕ್ಕಳಿಗೆ ಹಣ, ಆಸ್ತಿಗಿಂತ ಗುಣಮಟ್ಟದ ಶಿಕ್ಷಣದಿಂದ ಜ್ಞಾನಸಂಪತ್ತನ್ನು ನೀಡಿ ಎಂದು ಹೊಸದುರ್ಗದ ಭಗೀರಥಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ನಗರದ ಮೆಳೆಕೋಟೆಯ ಭಗೀರಥ ವೃತ್ತದಲ್ಲಿ ಭಾನುವಾರ ಉಪ್ಪಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೊಂದಣಿ, ಪ್ರತಿಭಾ ಪುರಸ್ಕಾರ ಹಾಗೂ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯೆಯಿಂದ ಎಲ್ಲವನ್ನೂ ಪಡೆಯಲು ಸಾಧ್ಯವಾಗುತ್ತದೆ. ವಿದ್ಯೆ ಮನುಷ್ಯನಿಗೆ ಅವಿಭಾಜ್ಯ ಅಂಗವಿದ್ದಂತೆ ವಿದ್ಯೆ ಕಲಿಯುವುದರಿಂದ ಧಾರ್ಮಿಕ ಮೌಲ್ಯಗಳನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಜ್ಞಾನ ಶಾಶ್ವತವಾಗಿ ಉಳಿಯುವ ಸಾಧನವಾಗಿರುವುದರಿಂದ ಸಮುದಾಯದವರು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಬದುಕು ಕಟ್ಟಿಕೊಡಬೇಕು ಎಂದು ತಿಳಿಸಿದರು.

ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ, ಉಪ್ಪಾರ ಸಮುದಾಯ ಸಮಾಜದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಸಮುದಾಯದ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯ ಹಲವಾರು ಸಮಸ್ಯೆಗಳನ್ನು ನಿತ್ಯ ಎದುರಿಸುತ್ತಿದೆ ಎಂದರು.

ಸಮುದಾಯದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಗ್ರಾಮೀಣ ಭಾಗದಲ್ಲಿ ಬರುತ್ತಿರುವುದರಿಂದ ನಗರದಲ್ಲಿ ವಸತಿ ಸೌಲಭ್ಯ ಇಲ್ಲದಂತಾಗಿದೆ. ಇಂತಹ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸ ವೃದ್ಧಿಸಲು ಸಮುದಾಯದ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ಸರಕಾರದ ಸಹಾಯೋಗದೊಂದಿಗೆ ವಿದ್ಯಾರ್ಥಿ ನಿಲಯಗಳನ್ನು ತೆರೆಯುವಂತೆ ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಉಪ್ಪಾರ ಸಮುದಾಯದ ಮುಖಂಡರಾದ ಪುಟ್ಟರಂಗಶೆಟ್ಟಿ ಅವರನ್ನು ಕ್ಯಾಬಿನೇಟ್ ಸದಸ್ಯರನ್ನಾಗಿ ನೇಮಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರನ್ನಾಗಿ ನೇಮಕ ಮಾಡುವ ಮೂಲಕ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಲಾಗಿದೆ. ಇನ್ನೂ ಹಲವಾರು ಚುನಾಯಿತ ಕ್ಷೇತ್ರಗಳಲ್ಲಿ ಸಮುದಾಯದವರು ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆ ಆಗಬೇಕು ಎಂದರು.

ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ, ಸಮುದಾಯದ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಲು ನಗರದಲ್ಲಿ ವಿದ್ಯಾರ್ಥಿನಿಲಯಗಳನ್ನು ತೆರೆಯಲು ಶಾಸಕರ ಅನುದಾನದಿಂದ ಹಣವನ್ನು ನೀಡಲಾಗುವುದು. ಸಮುದಾಯದವರು ಮುಂದೆ ಬಂದು ವಿದ್ಯಾರ್ಥಿ ನಿಲಯ ನಿರ್ಮಿಸುವಂತೆ ತಿಳಿಸಿದರು.

ಮಹಾನಗರ ಪಾಲಿಕೆಯ ಸದಸ್ಯ ಎಂ.ಎನ್ ವೆಂಕಟೇಶ್, ಉಪ್ಪಾರ ಸಂಘದ ಅಧ್ಯಕ್ಷ ಎಂ.ಕೆ ಕನಕರಾಜು, ಕಾರ್ಯದರ್ಶಿ ಎಂ.ಬಿ.ಗಿರಿಯಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಎಂ.ಮಾರುತಿ, ಡಾ.ವೆಂಕಟೇಶ್‌ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT