ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್ ಗೋಡ್ಖಿಂಡಿ ಸೇರಿ ಮೂವರಿಗೆ ತುಮಕೂರು ವಿ.ವಿಯಿಂದ ಗೌರವ ಡಾಕ್ಟರೇಟ್

Last Updated 4 ಜುಲೈ 2022, 10:08 IST
ಅಕ್ಷರ ಗಾತ್ರ

ತುಮಕೂರು: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ಬೆಂಗಳೂರಿನ ಯದುಗಿರಿ ಯತಿರಾಜ ಮಠದ ಯತಿರಾಜ ಜೀಯರ್ ಸ್ವಾಮೀಜಿ ಹಾಗೂ ಕೃಷಿ ವಿಜ್ಞಾನಿ ಛತ್ತೀಸ್‌ಗಡದ ರಾಮ್ ಶಂಕರ್ ಕುರೀಲ್ ಅವರನ್ನು ತುಮಕೂರು ವಿಶ್ವವಿದ್ಯಾನಿಲಯ 2021ನೇ ಸಾಲಿನ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ.

ಮಂಗಳವಾರ ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.

ಪ್ರವೀಣ್ ಗೋಡ್ಖಿಂಡಿ (ಸಂಗೀತ ಕ್ಷೇತ್ರ): ಮೂಲತಃ ಧಾರವಾಡದವರಾದ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ತಮ್ಮ ಆರನೇ ವಯಸ್ಸಿಗೆ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದವರು. 8 ಅಡಿ ಉದ್ದದ ಕೊಳಲನ್ನು ನುಡಿಸಿದ ಮೊದಲ ಭಾರತೀಯ. ಅರ್ಜೆಂಟೀನಾದಲ್ಲಿ ನಡೆದ ವಿಶ್ವ ಕೊಳಲು ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲಿಗರು. ದೇಶವಷ್ಟೇ ಅಲ್ಲದೆ ಹಲವು ಹೊರ ರಾಷ್ಟ್ರಗಳಲ್ಲೂ ತಮ್ಮ ಕೊಳಲು ವಾದನದ ಮೂಲಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.

‘ಬೇರು’ ಹಾಗೂ ‘ವಿಮುಕ್ತಿ’ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಸ್ತಾದ್ ಜಾಕೀರ್ ಹುಸೇನ್, ಡಾ.ಬಾಲಮುರಳಿಕೃಷ್ಣ, ಪಂಡಿತ್ ವಿಶ್ವಮೋಹನ್ ಭಟ್, ಡಾ.ಕದ್ರಿ ಗೋಪಾಲನಾಥ್, ಶಿವಮಣಿ ಸೇರಿದಂತೆ ಹಲವು ಕಲಾವಿದರೊಂದಿಗೆ ಕಾರ್ಯಕ್ರಮ ನೀಡಿದ ಹಿರಿಮೆ.

ಯತಿರಾಜ ಜೀಯರ್ ಸ್ವಾಮೀಜಿ (ಸಮಾಜ ಸೇವೆ):

ಮೇಲುಕೋಟೆಯವರಾದ ಸ್ವಾಮೀಜಿ ಬೆಂಗಳೂರಿನಲ್ಲಿರುವ ಯದುಗಿರಿ ಯತಿರಾಜ ಮಠದ ಮುಖ್ಯಸ್ಥರಾಗಿದ್ದಾರೆ. ರಾಷ್ಟ್ರೋತ್ಥಾನ ಪ್ರಕಾಶನದ ಮೂಲಕ ‘ಭಾರತ– ಭಾರತಿ’ ಸರಣಿಯಲ್ಲಿ ‘550 ಶ್ರೇಷ್ಠ ಭಾರತೀಯರು’ ಕುರಿತು ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯ ನೇತೃತ್ವ ವಹಿಸಿದ್ದರು. ಇಸ್ಕಾನ್, ರಾಮಾನುಜ ಸೇವಾ ಟ್ರಸ್ಟ್ ಮೂಲಕ ಸಮಾಜ ಸೇವೆ ಸಲ್ಲಿಸಿದ್ದಾರೆ.

ರಾಮಾನುಜಾಚಾರ್ಯರು ಸ್ಥಾಪಿಸಿದ ಯದುಗಿರಿ ಯತಿರಾಜ ಮಠದ ನೇತೃತ್ವವನ್ನು 2014ರಲ್ಲಿ ವಹಿಸಿಕೊಂಡಿದ್ದು, ರಾಮಾನುಜಾಚಾರ್ಯರ ತತ್ವಗಳ ಪ್ರಸಾರಕ್ಕಾಗಿ ದೇಶದಾದ್ಯಂತ 2.50 ಲಕ್ಷ ಕಿ.ಮೀ ಪ್ರವಾಸ ಮಾಡಿದ್ದಾರೆ. ಗೋಶಾಲೆ ಸ್ಥಾಪಿಸಿ ಗೋ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಮ್ ಶಂಕರ್ ಕುರೀಲ್ (ಕೃಷಿ ವಿಜ್ಞಾನ): ಛತ್ತೀಸ್‍ಗಡದ ‘ಮಹಾತ್ಮ ಗಾಂಧಿ ಯೂನಿವರ್ಸಿಟಿ ಆಫ್ ಹಾರ್ಟಿಕಲ್ಚರ್ ಅಂಡ್ ಫಾರೆಸ್ಟ್ರಿ ಡ್ರಗ್’ ಕುಲಪತಿ. ರಾಂಚಿಯ ಬಿರ್ಸಾ ಕೃಷಿ ವಿಶ್ವವಿದ್ಯಾಲಯ, ಇಂದೋರ್ ಡಾ.ಬಿ.ಆರ್.ಅಂಬೇಡ್ಕರ್ ಸಮಾಜ ವಿಜ್ಞಾನಗಳ ವಿಶ್ವವಿದ್ಯಾಲಯ, ಅಯೋಧ್ಯೆ ಆಚಾರ್ಯ ಎನ್ ಡಿ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಪ್ರಕಟಿಸಿದ್ದು, 46 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಆರ್.ಎಸ್.ಕುರೀಲ್ ಗಣನೀಯ ಕೊಡುಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT