ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ, ಶಿಕ್ಷಣಕ್ಕೆ ಒತ್ತು: ವಿ. ಸೋಮಣ್ಣ ಭರವಸೆ

Published 26 ಮಾರ್ಚ್ 2024, 4:24 IST
Last Updated 26 ಮಾರ್ಚ್ 2024, 4:24 IST
ಅಕ್ಷರ ಗಾತ್ರ

ತುಮಕೂರು: ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ಭರವಸೆ ನೀಡಿದರು.

ನಗರದಲ್ಲಿ ಸೋಮವಾರ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.

ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು. ಹೆದ್ದಾರಿಗಳು, ಶಾಲಾ- ಕಾಲೇಜುಗಳ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆಯಾದ ಹಣ ಬಿಡುಗಡೆ ಮಾಡದಿರಲು ಏನು ಕಾರಣ ಎಂಬುವುದರ ಬಗ್ಗೆಯೂ ಸಂಬಂಧಪಟ್ಟವರ ಜತೆಗೆ ಚರ್ಚಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಗ್ರಾಮೀಣ ಭಾಗದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗುವುದು. ಕೊರಟಗೆರೆ, ಮಧುಗಿರಿ‌ ಭಾಗದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು. ಕೇಂದ್ರ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಯಾವ ಕ್ಷೇತ್ರದಲ್ಲಿ ಏನು ಕೆಲಸಗಳಾಗಬೇಕು ಎಂಬ ಅರಿವಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇಎಸ್ಐ ಆಸ್ಪತ್ರೆಯಂತಹ ಯೋಜನೆಗಳು ಇನ್ನೂ ಪುಸ್ತಕದಲ್ಲಿವೆ. ಅವುಗಳ ಅನುಷ್ಠಾನಕ್ಕೆ ಶ್ರಮಿಸಲಾಗುವುದು. ಹೆದರಿಕೊಂಡು ಓಡಿಹೋಗಲು ಬಂದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಸಿದರು.

‘ಹೊರಗಿನವ’ ಎಂಬ ವಿಚಾರ ದೊಡ್ಡದು ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಗೂ ಬಳ್ಳಾರಿಗೂ, ರಾಹುಲ್‌ ಗಾಂಧಿಗೂ ವಯನಾಡಿಗೂ ಏನು ಸಂಬಂಧ. ಜಿ.ಪರಮೇಶ್ವರ, ಕೆ.ಎನ್‌.ರಾಜಣ್ಣ, ಎಸ್‌.ಪಿ.ಮುದ್ದಹನುಮೇಗೌಡ ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿಯವರು. ಅಲ್ಲಿಂದ ಜಿಲ್ಲೆಗೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನವರು ಜಾತಿ ರಾಜಕಾರಣದ ಪಿತಾಮಹರು. ನಾನು ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೇನೆ‌. ಮತ ಬ್ಯಾಂಕ್‌ಗಾಗಿ ಜಾತಿ ಹೆಸರು ಬಳಸಿಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಶಾಸಕ‌ ಬಿ.ಸುರೇಶ್‌ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ಅನಿಲ್‌ಕುಮಾರ್‌, ಎಸ್.ಪಿ.ಚಿದಾನಂದ್‌, ಶಿವಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT