ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನ ಪ್ರಗತಿ: ಪ್ರಧಾನಿ ಜಪ

ಸಿರಿ ಧಾನ್ಯ ಮಹತ್ವ ವಿಶ್ವಮಟ್ಟಕ್ಕೆ ಸಾರಿದ ಮುಂಚೂಣಿ ಜಿಲ್ಲೆ: ನರೇಂದ್ರ ಮೋದಿ ಶ್ಲಾಘನೆ
Last Updated 7 ಫೆಬ್ರುವರಿ 2023, 5:13 IST
ಅಕ್ಷರ ಗಾತ್ರ

ತುಮಕೂರು: ಎಚ್‌ಎಎಲ್ ಘಟಕದ ಆರಂಭದೊಂದಿಗೆ ಜಿಲ್ಲೆಯು ಕೈಗಾರಿಕಾ ಕ್ಷೇತ್ರದ ಭೂಪಟದಲ್ಲಿ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ ಬಳಿ ನಿರ್ಮಿಸಿರುವ ಎಚ್‌ಎಎಲ್ ಹೆಲಿಕಾಫ್ಟರ್ ಉತ್ಪಾದನಾ ಘಟಕವನ್ನು ಸೋಮವಾರ ದೇಶಕ್ಕೆ ಸಮರ್ಪಿಸಿದರು. ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕಿಗೆ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೈಗಾರಿಕಾ ಟೌನ್‌ಶಿಪ್ ಯೋಜನೆಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಎಚ್‌ಎಎಲ್ ಘಟಕದ ಜತೆಗೆ ‘ತುಮಕೂರು ಕೈಗಾರಿಕಾ ಟೌನ್‌ಶಿಪ್’ ಯೋಜನೆಗೂ ಚಾಲನೆ ನೀಡಲಾಗಿದೆ. ಬೆಂಗಳೂರು– ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯಲ್ಲಿ ಕೈಗಾರಿಕಾ ಕ್ಷೇತ್ರವನ್ನೂ ಅಭಿವೃದ್ಧಿಪಡಿಸಲಾಗಿದೆ. ಹೆದ್ದಾರಿ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲಿದ್ದು, ಬಂಡವಾಳವೂ ಹರಿದು ಬರಲಿದೆ. ಯುವಕರಿಗೆ ಉದ್ಯೋಗ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರ್ ಭಾರತ್’ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ತುಮಕೂರು ಹೆಲಿಕಾಪ್ಟರ್ ಘಟಕ ಆರಂಭಿಸಲಾಗಿದೆ. ಇದರಿಂದ ಭಾರತೀಯ ಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ. ದೇಶದ ಹೆಲಿಕಾಫ್ಟರ್ ಬೇಡಿಕೆ ಪೂರೈಸುವ ಸಲುವಾಗಿ ಈ ಘಟಕ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಎಚ್‍ಎಎಲ್ ಕಾರ್ಖಾನೆಯಿಂದಾಗಿ ಅಕ್ಕ-ಪಕ್ಕದ ಗ್ರಾಮದ ಜನರಿಗೆ ಉದ್ಯೋಗದ ಅವಕಾಶ ಹೆಚ್ಚಳವಾಗುತ್ತದೆ. ಕಳೆದ 8 ವರ್ಷಗಳಲ್ಲಿ ಸರ್ಕಾರದ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಹಿಂದೆ ಶೇ 90ರಷ್ಟು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ಅದು ಶೇ 60ಕ್ಕೆ ಇಳಿದಿದೆ. ಹೊರ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ದೇಶ ಪ್ರಗತಿ ಸಾಧಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭೆ ಸದಸ್ಯ ಜಗ್ಗೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ರಾಜೇಶ್‍ಗೌಡ, ಮಸಾಲೆ ಜಯರಾಂ, ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT