ತುಮಕೂರು: ಬಂದ್‌ಗೆ ಬಲ ನೀಡಿದ ನಾಗರಿಕರು

7
‘ಭಾರತ್ ಬಂದ್‌’ ಬೆಂಬಲಿಸಿ ವಿವಿಧ ಪಕ್ಷಗಳು ಕಾರ್ಯಕರ್ತರ ಮೆರವಣಿಗೆ; ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ

ತುಮಕೂರು: ಬಂದ್‌ಗೆ ಬಲ ನೀಡಿದ ನಾಗರಿಕರು

Published:
Updated:
Deccan Herald

ತುಮಕೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿಯೇತರ ಪಕ್ಷಗಳು ಸೋಮವಾರ ಕರೆ ನೀಡಿದ್ದ ‘ಭಾರತ್ ಬಂದ್‌’ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ಸಿಪಿಎಂ, ಎಸ್‌ಡಿಪಿಐ, ಎಐಡಿಎಸ್‌ಒ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಟೌನ್‌ಹಾಲ್ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಬಿ.ಎಚ್‌.ರಸ್ತೆಯಲ್ಲಿ ಧರಣಿ ಕುಳಿತರು. ನಂತರ ಮೆರವಣಿಗೆ ನಡೆಸಿದರು. ಪಕ್ಷದ ಮುಖಂಡರಾದ ನರಸೀಯಪ್ಪ, ಮುರಳೀಧರ ಹಾಲಪ್ಪ, ಕೆಂಚಮಾರಯ್ಯ, ತು.ಬಿ.ಮಲ್ಲೇಶ್, ನಿರಂಜನ್, ನಯಾಜ್ ಅಹಮ್ಮದ್ ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ಎಸ್‌.ಎಸ್.ಪುರಂ ಮುಖ್ಯರಸ್ತೆಯ ಅಂಗಡಿಗಳನ್ನು ಬಂದ್ ಮಾಡಿಸಿದರು. ಅಲ್ಲದೆ ನಗರದ ವಿವಿಧ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಚೌಕದ ಮೂಲಕ ಬಿಎಸ್‌ಎನ್‌ಎಲ್ ಕಚೇರಿ ಬಳಿ ಬಂದ ಸಿಪಿಎಂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಬಿಎಸ್‌ಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿದರು. 

ಬಿಎಸ್‌ಪಿ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸಹ ಟೌನ್‌ಹಾಲ್‌ ಬಳಿ ಪ್ರತಿಭಟಿಸಿದರು. ‘ಕೇಂದ್ರ ಸರ್ಕಾರ ಬೆಲೆ ಹೆಚ್ಚಳದ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಈ ಹಿಂದೆ ಬೆಲೆ ಹೆಚ್ಚಳವನ್ನು ವಿರೋಧಿಸಿದ್ದ ಬಿಜೆಪಿ ಈಗ ಅದನ್ನು ಸಮರ್ಥಿಸುತ್ತಿದೆ’ ಎಂದು ಆರೋಪಿಸಿದರು.

ಬಾಗಿಲು ಮುಚ್ಚಿದ ಅಂಗಡಿಗಳು: ಬೆರಳೆಣಿಕೆಯ ಮೆಡಿಕಲ್ ಸ್ಟೋರ್ಸ್‌ಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಮಧ್ಯಾಹ್ನದ ನಂತರ ಒಂದೊಂದಾಗಿ ಬಾಗಿಲು ತೆರೆಯುತ್ತಿದ್ದವು. ಸಂಜೆಯ ವೇಳೆಗೆ ಈ ಪ್ರಮಾಣ ಹೆಚ್ಚಿತ್ತು. ಬಸ್‌ಗಳು ಸಂಚರಿಸದ ಕಾರಣ ಸಿಗ್ನಲ್‌ಗಳಲ್ಲಿ ಸಂಚಾರ ಮುಕ್ತ ಸ್ಥಿತಿ ಇತ್ತು. ಎಂ.ಜಿ.ರಸ್ತೆ, ಎಸ್‌.ಎಸ್‌.ಪುರಂ, ಬಸ್‌ನಿಲ್ದಾಣದ ಆಸುಪಾಸು ಸೇರಿದಂತೆ ಜನನಿಬಿಡ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

ಬಸ್‌ಗಳನ್ನು ಹೊರತುಪಡಿಸಿದರೆ ನಗರದ ಸಂಚಾರ ಸಾಮಾನ್ಯವಾಗಿತ್ತು. ಕೆಲವು ಆಟೊಗಳವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಬೆರಳೆಣೆಕೆಯ ಪ್ರಯಾಣಿಕರು ಇದ್ದರು. ನಿಲ್ದಾಣವೂ ಬಿಕೋ ಎನ್ನುತ್ತಿತ್ತು. ಆದರೆ ಬಂದ್ ಬಿಸಿ ಅಂತರ ಸಂತನಹಳ್ಳಿ ಮಾರುಕಟ್ಟೆಗೆ ತೀವ್ರವಾಗಿಯೇನೂ ತಟ್ಟಲಿಲ್ಲ. ನಿತ್ಯದಂತೆ ಜನದಟ್ಟಣೆ ಇಲ್ಲದಿದ್ದರೂ ವಹಿವಾಟು ನಡೆಯಿತು.

ಎತ್ತು, ಕುದುರೆಗಳ ಜುಗಲ್‌ಬಂದಿ

ಪ್ರತಿಭಟನೆಯಲ್ಲಿ ಕುದುರೆ ಸವಾರಿ ಮತ್ತು ಎತ್ತಿನ ಬಂಡಿ ಸವಾರಿ ಗಮನ ಸೆಳೆಯಿತು. ಕಾಂಗ್ರೆಸ್ ಕಚೇರಿಯ ಎದುರು ಕಾರ್ಯಕರ್ತರು ಕುದುರೆಗಾಡಿ ಏರಿ ವಿನೂತನವಾಗಿ ಬೆಲೆ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಿ.ಎಚ್‌.ರಸ್ತೆಯಲ್ಲಿ ಕುದುರೆಗಾಡಿಯನ್ನು ಏರಿ ಕಾರ್ಯಕರ್ತರು ಹೊರಟರು. ಜೆಡಿಎಸ್ ಮತ್ತು ಸಿಪಿಎಂ ಕಾರ್ಯಕರ್ತರು ಸಹ ಎತ್ತಿನಗಾಡಿಯ ಮೆರವಣಿಗೆ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !