ಸೋಮವಾರ, ಜನವರಿ 27, 2020
26 °C
ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಸಿ ಜಾಥಾ; ಕಲ್ಲಡ್ಕ ಪ್ರಭಾಕರ ಭಟ್ ಅಭಿಮತ

‘ಯಾರ ಪೌರತ್ವ ಕಸಿಯದ ಕಾಯ್ದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಷ್ಟ್ರೀಯ ನಾಗರಿಕ ವೇದಿಕೆಯ ತುಮಕೂರು ಜಿಲ್ಲಾ ಘಟಕವು ಪೌರತ್ವ(ತಿದ್ದುಪಡಿ) ಕಾಯ್ದೆ ಬೆಂಬಲಿಸಿ ಮಂಗಳವಾರ ಹಮ್ಮಿಕೊಂಡಿದ್ದ ‘ಜನ ಜಾಗೃತಿ ಜಾಥಾ’ದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳು ಮತ್ತು ನಗರದ ವಿವಿಧ ಪ್ರದೇಶಗಳಿಂದ ಬಂದಿದ್ದ ಜನರು ಕಾಯ್ದೆ ಪರವಾದ ಸಂದೇಶ ಫಲಕಗಳನ್ನು ಹಿಡಿದು ರಸ್ತೆಯಲ್ಲಿ ಶಿಸ್ತಿನಿಂದ ಸಾಗಿದರು. ವೇದಿಕೆಯ ಕಾರ್ಯಕರ್ತರಿಂದ ಭಾರತ್ ಮಾತಾ ಕೀ ಜೈ, ಬೋಲೊ ಭಾರತ್ ಮಾತಾ ಕೀ ಜೈ, ಬೋಲೊ–ಬೋಲೋ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ದೇಶದಲ್ಲಿ ಇರಬೇಕೆಂದರೆ–ನೆಲದ ಕಾನೂನನ್ನು ಗೌರವಿಸಿ ಎಂಬ ಘೋಷಣೆಗಳು ಮೊಳಗಿದವು.

ಕಾರ್ಯಕರ್ತರ ಕೈಯಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜಗಳು, ಓಂ ಚಿಹ್ನೆಯುಳ್ಳ ತ್ರಿಕೋನಾಕಾರದ ಕೇಸರಿ ಬಣ್ಣದ ಧ್ವಜಗಳು ರಾರಾಜಿಸುತ್ತಿದ್ದವು. ವೇದಿಕೆ ಸದಸ್ಯರು ಕಾಯ್ದೆ ಕುರಿತು ಕಿರು ಮಾಹಿತಿ ಇದ್ದ ಕರಪತ್ರಗಳನ್ನು ಎದುರಾದ ಜನರಿಗೆ ಹಂಚುತ್ತ ಮಾಹಿತಿ ನೀಡಿದರು.

ಸಂಘಟಕರ ಜಾಥಾದ ಕರೆಗೆ ಓಗೊಟ್ಟು ಪುರಭವನದ ಪಕ್ಕದಲ್ಲೆ ಇರುವ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನಡಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರೇ ನಡೆಸುತ್ತಿರುವ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಬಸ್‌ನಿಂದ ಇಳಿದು ಜಾಥಾದಲ್ಲಿ ಹೆಜ್ಜೆ ಹಾಕಿದರು.

ಕಾಯ್ದೆ ಯಾರ ಪೌರತ್ವವೂ ಕಸಿಯಲ್ಲ 

ಜಾಥಾದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಭಾರತ ಕ್ಷೇತ್ರಿಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಈ ಕಾಯ್ದೆಯು ಯಾರ ಪೌರತ್ವವನ್ನು ಕಸಿಯುವುದಿಲ್ಲ. ಬದಲಿಗೆ ವಿದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂಗಳಿಗೆ ರಕ್ಷಣೆ ನೀಡುತ್ತದೆ ಎಂದು ತಿಳಿ ಹೇಳಿದರು.

ಭಾರತವು ಹಿಂದೂಗಳ ತವರು. ಬೇರೆ ದೇಶಗಳಲ್ಲಿ ಹಲ್ಲೆಗಳಿಗೆ ಒಳಗಾಗುತ್ತಿರುವ ಹಿಂದೂಗಳಿಗೆ ಈ ಕಾಯ್ದೆ ಆಶ್ರಯ ನೀಡುತ್ತದೆ. ಇದಕ್ಕೂ ಕಾಂಗ್ರೆಸ್, ಕಮ್ಯುನಿಸ್ಟ್‌ರು ಕಲ್ಲು ಹಾಕುತ್ತಿದ್ದಾರೆ. ಹೊರಗಿನಿಂದ ಬರುವ ಮುಸಲ್ಮಾನರಿಗೆ ಯಾಕೆ ಪೌರತ್ವ ನಿರಾಕರಿಸುತ್ತಿರಿ ಎಂದು ಕೇಳುತ್ತಿದ್ದಾರೆ. ಅವರಿಗೆ ಮುಸಲ್ಮಾನರ ಮೇಲೆ ಅತೀವ ಕಾಳಜಿ ಇದ್ದರೆ, ಪಾಕಿಸ್ತಾನದವರನ್ನು ಸಹ ಬಂಧುಗಳು ಎಂದು ಹೇಳಲಿ ನೋಡೋಣ ಎಂದರು.

ಮುಸಲ್ಮಾನರು ಯಾರೂ ಅಮಾಯಕರಲ್ಲ. ಹಾಗಿದ್ದರೇ ಅವರು ಹೆಚ್ಚು ಮಕ್ಕಳನ್ನು ಹೇಗೆ ಮಾಡುತ್ತಿದ್ದರು. ಲಕ್ಷಾಂತರ ಮಸೀದಿಗಳನ್ನು ಹೇಗೆ ಕಟ್ಟುತ್ತಿದ್ದರು ಎಂದು ಹೇಳಿದರು.

ನಮ್ಮ ನಡುವಿನ ಒಬ್ಬ ಮಹಮ್ಮದ್‌ ಹೋದರೆ, ಅವನಿಗೆ ಪೌರತ್ವ ನೀಡಲು 60 ರಾಷ್ಟ್ರಗಳು ಮುಂದೆ ಬರುತ್ತವೆ. ಒಬ್ಬ ರಾಬರ್ಟ್‌ ಹೋದರೆ, ಅವನಿಗೆ 70 ದೇಶಗಳು ಪೌರತ್ವ ನೀಡಲು ಸಿದ್ಧವಿರುತ್ತವೆ. ಆದರೆ, ನಮ್ಮಂತ ಹಿಂದೂಗಳು ಹೋದರೆ, ಯಾರಾದರೂ ಆ ದೇಶಗಳ ಪೌರತ್ವ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ವಿದೇಶಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಆ ಅತ್ಯಾಚಾರ ಮಾಡಿದ ಅಯೋಗ್ಯರಿಗೂ ನಮ್ಮ ದೇಶದ ಪೌರತ್ವ ಕೊಡಬೇಕು ಎಂದು ಕಾಂಗ್ರೆಸ್‌ ಬಯಸುತ್ತಿದೆ ಎಂದು ಕಿಡಿ ಕಾರಿದರು.

ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ, ಬಾಂಗ್ಲಾದೇಶದಿಂದ ಬಂದಿದ್ದ ಹಿಂದೂಗಳಿಗೆ ಇಂದಿರಾ ಗಾಂಧಿ ಪೌರತ್ವ ನೀಡಿದ್ದರು. ವಿ.ಪಿ.ಸಿಂಗ್‌, ಐ.ಕೆ.ಗುಜ್ರಾಲ್‌, ಎಚ್‌.ಡಿ.ದೇವೇಗೌಡ ಅವರು ಸಹ ಆಡಳಿತ ನಡೆಸುತ್ತಿದ್ದಾಗ ವಿದೇಶದಲ್ಲಿನ ಹಿಂದೂಗಳಿಗೆ ಪೌರತ್ವ ನೀಡುವ ಕುರಿತು ಚರ್ಚೆಗಳು ಆಗಿದ್ದವು. ಇತಿಹಾಸ ಮರೆತಿರುವ ಕಾಂಗ್ರೆಸ್‌ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸುತ್ತಿದೆ. ಕಾಂಗ್ರೆಸ್‌ಗೆ ರೋಹಿಂಗ್ಯಾ ಮುಸ್ಲಿಂಮರಿಗೆ ಪೌರತ್ವ ನೀಡುವುದನ್ನು ಒಪ್ಪಿಕೊಳ್ಳುತ್ತದೆಯೇ ಎಂದು ಕೇಳಿದರು.

ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶರವೇಶಕ್ಕಿಂತ ಉದ್ವೇಗ ಅಪಾಯಕಾರಿ. ಅಮಾಯಕ ಜನರನ್ನು ಉದ್ವೇಗಕ್ಕೆ ಒಳಗಾಗಿಸುತ್ತಿರುವುದು ಖಂಡನೀಯ ಎಂದರು.

ಜಾಥಾದಲ್ಲಿ ಸಂಸದ ನಾರಾಯಣಸ್ವಾಮಿ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌, ಮಸಾಲಾ ಜಯರಾಮ್‌, ಮುಖಂಡರಾದ ಹುಲಿನಾಯ್ಕರ್, ಸುರೇಶ್‌ ಗೌಡ, ಜಿ.ಪಂ.ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಭಾಗವಹಿಸಿದ್ದರು.

‘ಕಡ್ಡಿ ಎಸ್ಪಿಗೆ ಕಾಂಗ್ರೆಸ್‌ ಮನಸ್ಥಿತಿ’

ಮಂಗಳೂರಿನಲ್ಲಿ ನಡೆದ ಗಲಭೆಯನ್ನು ಅಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿ ಸರಿಯಾಗಿ ನಿಭಾಯಿಸಿದರು. ನಮ್ಮೆಲ್ಲರ ಜೀವಗಳನ್ನು ಉಳಿಸಿದರು. ಆದರೆ, ಕೋಲಾರದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಕಡ್ಡಿಯಂತಿರುವ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ನಿರ್ದಿಷ್ಟ ವೃತ್ತದಲ್ಲಿ ಹೋಗಲು ತಡೆಯೊಡ್ಡಿದರು ಎಂದು ಪ್ರಭಾಕರ್‌ ಹೇಳಿದರು.

ಕಾಂಗ್ರೆಸ್ ಮನಸ್ಥಿತಿಯ ಅಧಿಕಾರಿಗಳು ಇರುವ ತನಕ ನಮಗೆ ಅಡೆ–ತಡೆ ಸಹಜ. ಅವುಗಳನ್ನು ಎದುರಿಸಬೇಕು ಎಂದರು.

ಡ್ರೋನ್‌ ಕಣ್ಗಾವಲು

ಜಾಥಾ ನಡೆಯುವ ದಾರಿಯುದ್ದಕ್ಕೂ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಡ್ರೋನ್ ಕ್ಯಾಮರಾ ಕಣ್ಗಾವಲು ಹಾಕಿದ್ದರು.

ಅದು ಹಕ್ಕಿಯಂತೆ ಹಾರಾಡುತ್ತ, ರಸ್ತೆಯಲ್ಲಿ ನಡೆಯುತ್ತಿದ್ದ ಚಲನವಲನಗಳನ್ನು ಸೆರೆಹಿಡಿದು ನಿರ್ದಿಷ್ಟ ಸಾಧನದಲ್ಲಿ ಬಿತ್ತರಿಸುತ್ತಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು