ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಿತ ಪ್ಲಾಸ್ಟಿಕ್ ವಸ್ತು ನಿರಂತರ ಮಾರಾಟ

ರಾಮನಗರದಲ್ಲಿ ಎರಡು ಮೂರು ದಿನಕ್ಕೊಮ್ಮೆ ಕಸ ವಿಲೇವಾರಿ – ಬೀದಿ, ಗಲ್ಲಿಗಳಲ್ಲಿ ತ್ಯಾಜ್ಯದ ಸಮಸ್ಯೆ
Last Updated 11 ಜೂನ್ 2018, 6:46 IST
ಅಕ್ಷರ ಗಾತ್ರ

ರಾಮನಗರ: ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ, ನಗರಸಭೆ ನೀಡುವ ಎಚ್ಚರಿಕೆಗಳು ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಮಾರಾಟವಾಗುತ್ತಲೇ ಇವೆ.

ಕಸ ವಿಲೇವಾರಿಗೆ ನಗರದಲ್ಲಿ ನಿಗಧಿತ ಸ್ಥಳ ಇಲ್ಲದಿರುವುದರಿಂದ ಬೆಂಗಳೂರು–ಮೈಸೂರು ಹೆದ್ದಾರಿ ಬದಿ ತ್ಯಾಜ್ಯವಿಲೇವಾರಿ ತಾಣವಾಗಿ ಪರಿಣಮಿಸಿದೆ. ಒಂದೆಡೆ ನಿರ್ಲಕ್ಷವಹಿಸಿರುವ ಅಧಿಕಾರಿಗಳು ಇನ್ನೊಂದೆಡೆ ಬದಲಾಗದ ಜನಸಮುದಾಯದಿಂದಾಗಿ ಪರಿಸರ ನರಳುತ್ತಿದೆ.

ಕಸ ವಿಲೇವಾರಿಯದೇ ಸಮಸ್ಯೆ: ರಾಮನಗರ ನಗರಸಭೆಗೆ ಕಸವಿಲೇವಾರಿಗೆ ಸ್ಥಳವಿಲ್ಲ. ಜಿಲ್ಲಾಡಳಿತದ ವತಿಯಿಂದ ಕಣ್ವ ಗ್ರಾಮದ ಬಳಿ ಕಸ ವಿಲೇವಾರಿಗೆ ಸ್ಥಳ ಗುರುತಿಸಲಾಗಿತ್ತು. ಚನ್ನಪಟ್ಟಣ ಮತ್ತು ರಾಮನಗರ ನಗರಸಭೆಗಳು ಇಲ್ಲಿ ಟನ್‍ ಗಟ್ಟಲೆ ತ್ಯಾಜ್ಯ ಸುರಿಯುತ್ತಿದ್ದವು.
ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯನ್ನು ಅಳವಡಿಸಿಕೊಳ್ಳದ ಕಾರಣ ಟನ್ ಗಟ್ಟಲೆ ತ್ಯಾಜ್ಯ ಕೊಳೆತು ಪಕ್ಕದ ಕಣ್ವ ಜಲಾಶಯದ ಹಿನ್ನೀರನ್ನು ಮಲಿನಗೊಳಿಸಲಾರಂಭಿಸಿತು. ಆ ಭಾಗದ ಗ್ರಾಮಸ್ಥರು ನಿರಂತರ ಹೋರಾಟ ನಡೆಸಿ ಅಲ್ಲಿ ಕಸ ವಿಲೇವಾರಿಯನ್ನು ತಡೆಹಿಡಿದರು.

ಹೀಗಾಗಿ ಚನ್ನಪಟ್ಟಣ ಮತ್ತು ರಾಮನಗರ ನಗರ ವ್ಯಾಪ್ತಿಯ ಬೀದಿಗಳು, ಗಲ್ಲಿಗಳು ಕಸಮಯವಾಗಿದೆ. ರಾಮನಗರದಲ್ಲಿ ಎರಡು ಮೂರು ದಿನಕ್ಕೊಮ್ಮೆ ಕಸ ವಿಲೇವಾರಿಯಾಗುತ್ತಿದೆ.

ಭಾಷಣಕ್ಕೆ ಸೀಮಿತವಾದ ಭರವಸೆ: ಕಣ್ವ ಗ್ರಾಮಸ್ಥರ ಹೋರಾಟದ ನಂತರ ಕಸವಿಲೇವಾರಿ ಸಮಸ್ಯೆ ಬಿಗಡಾಯಿಸಿದ್ದರಿಂದ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಗಂಭೀರ ಚರ್ಚೆ ನಡೆಸಿದರು.

ಜಿಲ್ಲೆಯಲ್ಲಿ ಒಂದು ದೊಡ್ಡದಾದ ಮತ್ತು ಕನಿಷ್ಠ ನಾಲ್ಕು ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ನಿರ್ಧರಿಸಿದರು. ಸ್ಥಳ ಗುರುತಿಸು
ವಂತೆ ಅಧಿಕಾರಿಗಳಿಗೂ ಸೂಚಿಸಲಾಯಿತು. ವೈಜ್ಞಾನಿಕ ಕಸವಿಲೇವಾರಿ ಭರವಸೆಯನ್ನು ಆಡಳಿತಗಳು ಪಾಲಿಸುತ್ತವೆ ಎಂಬ ವಿಶ್ವಾಸವನ್ನು ಜಸಮಾನ್ಯರು ಕಳೆದುಕೊಂಡಿರುವುದರಿಂದ ಕಸವಿಲೇವಾರಿ ಘಟಕಗಳಿಗೆ ವಿರೋಧ ವ್ಯಕ್ತವಾಗುತ್ತಿವೆ.

ಎರಡು ವರ್ಷಗಳ ಹಿಂದೆ ರಾಮನಗರ ನಗರಸಭೆ ಪ್ಲಾಸ್ಟಿಕ್ ವಿರುದ್ದ ಸಮರವನ್ನೇ ಸಾರಿತ್ತು. ವಾರಗಟ್ಟಲೆ ದಾಳಿ ನಡೆಸಿ ಕಾನೂನು ಉಲ್ಲಂಘಿಸಿದವರ ವಿರುದ್ದ ಹಲವಾರು ಪ್ರಕರಣಗಳನ್ನು ಹಾಕಲಾಗಿತ್ತು. ನಿಷೇಧಿತ ಪ್ಲಾಸ್ಟಿಕ್ ದಾಸ್ತಾನು ಸಾಗಿಸುವ ಲಾರಿಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿತ್ತು.

ತದನಂತರ ನಗರಸಭೆಯ ಅಧಿಕಾರಿಗಳು ಈ ವಿಚಾರದಲ್ಲಿ ಉತ್ಸಾಹ ಕುಂದಿದೆ. ನಿರಂತರ ದಾಳಿಯಿಂದ ಹೆದರಿದ್ದ ವ್ಯಾಪಾರಿಗಳು ಈಗ 40 ಮೈಕ್ರಾನ್ ಗಳಿಗಿಂತಲೂ ಕಡಿಮೆ ದರ್ಜೆಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ ಗಳು ಇತ್ಯಾದಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ನಿರಂತರವಾಗಿ ನಡೆಸುತ್ತಿದ್ದಾರೆ ಎಂದು ಪರಿಸರಪ್ರಿಯರ ಆರೋಪ.

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಜನಸಾಮಾನ್ಯರು ಸ್ವಯಂ ನಿರ್ಧಾರ ತೆಗೆದುಕೊಳ್ಳುವವರೆಗೂ ನಿರಂತರ ಜನಜಾಗೃತಿ, ಕಾನೂನು ಮುರುಕರ ವಿರುದ್ಧ ನಿರಂತರ ದಾಳಿ ನಡೆಸಿದರೆ ಮಾತ್ರ ಒಂದಿಷ್ಟು ಶಿಸ್ತು ಬರಲು ಸಾಧ್ಯ ಎಂದು ವಿವೇಕಾನಂದನಗರದ ಎಂ.ಎಸ್. ಚನ್ನವೀರಪ್ಪ ತಿಳಿಸಿದರು.

ನಗರಸಭೆಯಿಂದ ಒಂದಿಷ್ಟು ಪ್ರಯತ್ನ: ಕಸ ವಿಲೇವಾರಿ ಸಮಸ್ಯೆ ಬಗ್ಗೆ ಎಚ್ಚೆತ್ತಿರುವ ರಾಮನಗರ ನಗರಸಭೆ ಕಸ ವಿಲೇವಾರಿಗೆ ಒಂದರೆಡು ಪೂರಕ ಹೆಜ್ಜೆಗಳನ್ನು ಇಟ್ಟಿದೆ.

ವಾರ್ಡ್ ಒಂದರಲ್ಲಿ ಹಸಿಕಸವನ್ನು ಬಳಸಿ ಬಯೋಗ್ಯಾಸ್ ಉತ್ಪಾದಿಸುವ ಘಟಕವನ್ನು ₹20 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿದೆ. ರಾಮನಗರದಲ್ಲಿ ದಿನನಿತ್ಯ 25 ರಿಂದ 30 ಟನ್ ಹಸಿಕಸ, 10 ರಿಂದ 20 ಟನ್ ಒಣಕಸ ಸಂಗ್ರಹವಾಗುತ್ತಿದೆ. ಸದರಿ ಬಯೋಗ್ಯಾಸ್ ಘಟಕದಲ್ಲಿ ದಿನನಿತ್ಯ ಕೇವಲ 1 ಟನ್ ಹಸಿತ್ಯಾಜ್ಯ ಬಳಕೆಯಾಗುತ್ತಿದೆ. ಪರಿಸರ ರಕ್ಷಣೆಯತ್ತ ಸ್ಥಳೀಯ ನಗರಸಭೆಯ ಒಂದಿಷ್ಟು ಪ್ರಯತ್ನ ಆರಂಭವಾಯಿತಾದರೂ, ಮುದುವರೆಯದೆ ಅದು ಅಲ್ಲೇ ಉಳಿದುಬಿಟ್ಟಿದೆ.

ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಟ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ ನಿಂದ ತಯಾರಾದಂತಹ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜ್ ‘ಪ್ರಜಾವಾಣಿ’ ಗೆ ತಿಳಿಸಿದರು.

ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ, ಮುಜರಾಯಿ ದೇವಾಲಯಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲ ಆವರಣಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಈ ಬಗ್ಗೆ ದೂರು ದಾಖಲಿಸಲು ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ದೂ.ಸಂ. 080-–27271229 ಆಗಿದ್ದು, ಸಾರ್ವಜನಿಕರು ದೂರು ದಾಖಲಿಸಬಹುದು ಎಂದರು.

–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT