ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಿನ ಒಗಟು; ಪರಮೇಶ್ವರ್‌ಗೆ ಇಕ್ಕಟ್ಟು

ರಾಜಕೀಯ ಪಕ್ಷಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಒಳ ಮೀಸಲಿನ ರಾಜಕಾರಣ
Last Updated 15 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಇತರ ಕ್ಷೇತ್ರಗಳಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಒಳಮೀಸಲಾತಿ ಪ್ರಶ್ನೆ ರಾಜಕೀಯ ಪಕ್ಷಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ವಿಶೇಷವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಾದಿಗ ಮುಖಂಡರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲರೂ ಒಳಮೀಸಲಾತಿ ಪ್ರಶ್ನೆ ಮುಂದು ಮಾಡುತ್ತಿದ್ದಾರೆ. ಕಡ್ಡಿ ತುಂಡಾದಂತೆ ತಮ್ಮ ವಿರೋಧ ದಾಖಲಿಸುತ್ತಿದ್ದಾರೆ ಎಂದು ಪರಮೇಶ್ವರ್ ಅವರ ಆಪ್ತರೊಬ್ಬರು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿರುವುದರಿಂದ ಈ ವಿಷಯ ಆ ಪಕ್ಷಕ್ಕೆ ಅಷ್ಟಾಗಿ ಬಾಧಿಸುತ್ತಿಲ್ಲ.

ಕಾಂಗ್ರೆಸ್ ಸರ್ಕಾರ ಮಾದಿಗರಿಗೆ ಒಳ ಮೀಸಲಾತಿ ನೀಡಲಿಲ್ಲ ಎಂಬ ಕಾರಣಕ್ಕಾಗಿಯೇ ವಿಧಾನಸಭಾ ಚುನಾವಣೆಯಲ್ಲಿ ಮಾದಿಗರು ಕಾಂಗ್ರೆಸ್‌ನಿಂದ ದೂರ ಉಳಿದಿದ್ದರು. ಇದು ಆ ಪಕ್ಷಕ್ಕೆ ಚುನಾವಣೆಯಲ್ಲಿ ಮಾರಕವಾಗಿ ಪರಿಣಮಿಸಿತ್ತು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಮೇಶ್ವರ್ ಸೋಲಿನ ಅನುಕಂಪದ ಕಾರಣ ಮಾದಿಗರು ಪರಮೇಶ್ವರ್ ಅವರನ್ನು ಬೆಂಬಲಿಸಿದ್ದರು. ಮತ್ತೊಮ್ಮೆ ಸರ್ಕಾರ ಬಂದರೆ, ಮೀಸಲಾತಿ ನೀಡುವುದಾಗಿ ಪರಮೇಶ್ವರ್ ಮಾತುಕೊಟ್ಟಿದ್ದರು. ಆದರೆ ಈಗ ಈ ಪ್ರಶ್ನೆಯನ್ನೇ ಪರಮೇಶ್ವರ್ ಎತ್ತದಿರುವುದು ಜಿಲ್ಲೆಯ ಮಾದಿಗರಲ್ಲಿ ಮತ್ತೆ ಕೋಪಕ್ಕೆ ಕಾರಣವಾಗಿದೆ.

ಆಂಧ್ರಪ್ರದೇಶದಲ್ಲಿ ಗಟ್ಟಿಯಾಗಿದ್ದ ಮಾದಿಗರ ಒಳಮೀಸಲಾತಿ ಆಂದೋಲನ ಕರ್ನಾಟದಲ್ಲಿ ತುಮಕೂರು ಜಿಲ್ಲೆಯಲ್ಲಿ ಆರಂಭಗೊಂಡಿತ್ತು. ಇಲ್ಲಿಂದ ಸಾಕಷ್ಟು ಹೋರಾಟಗಳು ನಡೆದಿವೆ. ತುತ್ತ ತುದಿಗೆ ಹೋಗಿದ್ದ ಹೋರಾಟವನ್ನು ಪರಮೇಶ್ವರ್ ಮುರಿದರು ಎಂಬ ಕೋಪ ಸಹ ಈ ವರ್ಗದಲ್ಲಿ ಕಾಣತೊಡಗಿದೆ.

ಮಾದಿಗರಿಗೆ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಅನ್ಯಾಯ ಮಾಡಿವೆ. ಚುನಾವಣೆ ಬಳಿಕ ಇಡೀ ಹೋರಾಟವನ್ನೇ ಮುರಿದು ಹಾಕಿವೆ. ಒಳ ಮೀಸಲಾತಿ ವಿರೋಧಿಸುವ ಎರಡೂ ಪಕ್ಷಗಳನ್ನು ಹೇಗೆ ಬೆಂಬಲಿಸಲು ಸಾಧ್ಯ. ಮೊದಲಿನಿಂದಲೂ ಮಾದಿಗರು ಕಾಂಗ್ರೆಸ್ ಜತೆ ಇಲ್ಲ. ನಮ್ಮ ರಾಜಕೀಯವೇ ಬೇರೆ ಎಂದು ಹೆಸರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಮಾದಿಗ ಸಮುದಾಯದ ಹಿರಿಯ ಮುಖಂಡರೊಬ್ಬರು ತಿಳಿಸಿದರು. ಈ ಮುಖಂಡರು ತಮ್ಮ ಹೆಸರು ಬಹಿರಂಗಪಡಿಸದಂತೆ ಹೇಳಿದರು.

ಮಾಯಾವತಿ ಬೆಂಬಲಿಗರು ಸಿಟ್ಟು: ಕಾಂಗ್ರೆಸ್ ಜತೆ ಮುನಿಸಿಕೊಂಡಿರುವ ಮಾಯಾವತಿ ಅವರ ಪ್ರಭಾವೂ ಜಿಲ್ಲೆಯಲ್ಲಿದ್ದು ಮೈತ್ರಿ ಪಕ್ಷದ ನಿದ್ದೆಗೆಡಿಸುತ್ತಿದೆ. ಕ್ಷೇತ್ರದಲ್ಲಿ ಬಿಎಸ್‌ಪಿ ಸಂಘಟನೆ ಸ್ವಲ್ಪ ಚುರುಕಾಗಿದೆ. ಮಧುಗಿರಿ, ಕೊರಟಗೆರೆ, ತುಮಕೂರು ಗ್ರಾಮಾಂತರ, ಗುಬ್ಬಿ ತಾಲ್ಲೂಕಿನಲ್ಲಿ ಸಂಘಟನೆ ಬಲವಾಗಿದೆ. ಬಿಎಸ್‌ಪಿ ಅಂಶ ಯಾವ ರೀತಿ ಕೆಲಸ ಮಾಡಲಿದೆ ಎಂಬ ಕುತೂಹಲವೂ ಇದೆ.

ಪಕ್ಷದ ಅಧ್ಯಕ್ಷರಾದ ಮಾಯಾವತಿ ಅವರು ಕಾಂಗ್ರೆಸ್ ನಿಂದ ದೂರ ಉಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಮಾಯಾವತಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಸಫಲವಾಗಿಲ್ಲ. ಅಂಥ ಪಕ್ಷವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್ಪಿಯ ಜಿಲ್ಲಾ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT