ಶನಿವಾರ, ಮೇ 15, 2021
24 °C

‘ಅಂಬೇಡ್ಕರ್ ತತ್ವ ಪ್ರಚಾರಕ್ಕೆ ಹಿನ್ನಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ತುಮಕೂರು: ಸಂವಿಧಾನದ ಲಾಭ ಪಡೆದು ಸರ್ಕಾರಿ ನೌಕರಿಗೆ ಸೇರಿ ಹಣ ಸಂಪಾದಿಸುತ್ತಿರುವ ಶೋಷಿತ ಸಮುದಾಯಗಳ ಜನರು ತಮ್ಮ ಮುಂದಿನ ಪೀಳಿಗೆಗೆ ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಹಸ್ತಾಂತರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್ ವಿಷಾದಿಸಿದರು.

ನಗರದ ಜಯಪುರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ‘ಮಹಾನಾಯಕ’ ಫ್ಲೆಕ್ಸ್ ಅನಾವರಣ, ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನದ ಲಾಭ ಪಡೆದವರೇ
ತಮ್ಮ ಪುರೋಭಿವೃದ್ಧಿಗೆ ಕಾರಣರಾದವರನ್ನು ಮರೆಯುತ್ತಿದ್ದಾರೆ ಎಂದರು.

ಸಂವಿಧಾನದಿಂದ ಎಲ್ಲಾ ವರ್ಗದ ಜನರು ಅನುಕೂಲ ಪಡೆದುಕೊಳ್ಳುತ್ತಿದ್ದರೂ, ಅಂಬೇಡ್ಕರ್‌ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ. ಪ್ರಪಂಚದ ವಿವಿಧೆಡೆ ಅವರು ಜ್ಞಾನದ ಸಂಕೇತವಾಗಿ ಆರಾಧಿಸಲ್ಪಡುತ್ತಿದ್ದರೆ, ಭಾರತದಲ್ಲಿ ಮಾತ್ರ, ದೀನ, ದಲಿತರ, ಶೋಷಿತರ ಪ್ರತಿನಿಧಿಯಾಗಿ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಎಸ್.ಸಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು, ‘ಪ್ರಸ್ತುತ ಜಗತ್ತಿನಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ವಿಷಯಗಳು ಪ್ರಮುಖವಾಗಿ ಚರ್ಚೆಯಾಗುತ್ತಿವೆ. ಸಂವಿಧಾನದ ಅನ್ವಯ ರಚಿತವಾದ ರಿಸರ್ವ್ ಬ್ಯಾಂಕ್‍ನ ಕಟ್ಟುನಿಟ್ಟಾದ ಆರ್ಥಿಕ ನೀತಿಗಳ ಫಲವಾಗಿ ಪ್ರಪಂಚವೇ ಆರ್ಥಿಕ ಸಂಕಷ್ಟಕ್ಕೆ ಒಳಗಾದರೂ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಇದು ಅವರ ಮೇಧಾವಿತನಕ್ಕೆ ಸಾಕ್ಷಿಯಾಗಿದೆ. ಸಂವಿಧಾನಕ್ಕೆ ಧಕ್ಕೆ ಉಂಟಾಗುವ ಸಂದರ್ಭ ಎದುರಾದರೆ, ಅಂತಹ ಪ್ರಯತ್ನಗಳನ್ನು ಒಗ್ಗೂಡಿ ಹಿಮ್ಮೆಟ್ಟಿಸಬೇಕಾಗಿದೆ’ ಎಂದು ಸಲಹೆ ಮಾಡಿದರು.

ಸಮಿತಿ ಮುಖಂಡ ಪಿ.ಶಿವಾಜಿ, ‘ಮೀಸಲಾತಿ ಉಳಿಯಬೇಕಾದರೆ ಸಂವಿಧಾನ ಜಾರಿಯಾಗಬೇಕು. ಆದರೆ ಮೀಸಲಾತಿ ಇನ್ನೆಷ್ಟು ದಿನ ಮುಂದುವರೆಯಬೇಕು ಎಂದು ಪ್ರಶ್ನಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅದರ ಎಲ್ಲಾ ಆಶಯಗಳು ಇಂದಿಗೂ ಈಡೇರಿಲ್ಲ. ಈ ಬಗ್ಗೆ ಯುವಜನರಿಗೆ, ಶೋಷಿತ ಸಮುದಾಯದವರಿಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಹೋರಾಟಗಾರರಾದ ಹೆಗ್ಗೆರೆ ಕೃಷ್ಣಪ್ಪ, ಕೆ.ಗೋವಿಂದರಾಜು, ಎನ್.ಕೆ.ನಿಧಿಕುಮಾರ್, ಕೆಸರುಮಡು ಗೋಪಾಲ್, ಎ.ಎಸ್.ರಾಜು, ಸಿದ್ದಲಿಂಗಯ್ಯ, ಮಧುಗಿರಿ ರಂಗಸ್ವಾಮಿ, ಶಿರಾಗೇಟ್ ರವಿಕುಮಾರ್, ಜೆಸಿಬಿ ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು. ಜಯಪುರ ಬಡಾವಣೆ ಮುಖಂಡರಾದ ಟಿ.ಆರ್.ಗುರುಪ್ರಸಾದ್, ಚಂದ್ರಶೇಖರ್, ರುದ್ರೇಶ್, ಟಿ.ಆರ್.ನಾಗೇಶ್ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು