ಶುಕ್ರವಾರ, ಡಿಸೆಂಬರ್ 3, 2021
26 °C

ಗುಂಡಿಗಳಿಲ್ಲದ ರಸ್ತೆ ತೋರಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ನಗರದಲ್ಲಿ ಗುಂಡಿಗಳಿಲ್ಲದ ರಸ್ತೆ (ಸ್ಮಾರ್ಟ್ ಸಿಟಿ ವ್ಯಾಪ್ತಿ ಹೊರತುಪಡಿಸಿ) ತೋರಿಸಿದರೆ ನಾನೇ ಬಹುಮಾನ ಕೊಡುತ್ತೇನೆ. ಇಲ್ಲವಾದರೆ ಮಹಾನಗರ ಪಾಲಿಕೆಯವರು ಏನು ಮಾಡಿಸಿಕೊಳ್ಳುತ್ತಾರೆ’ ಎಂದು ಸದಾಶಿವನಗರದ ಪಾಲನೇತ್ರ ಸವಾಲು ಹಾಕುತ್ತಾರೆ.

ಇದು ಇವರೊಬ್ಬರ ಮಾತಲ್ಲ. ನಗರದ ಬಹುತೇಕರು ಇದೇ ಮಾತು ಹೇಳುತ್ತಾರೆ. ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ, ರಸ್ತೆಗಳನ್ನು ಗಮನಿಸಿದವರಿಗೆ ಇಡೀ ನಗರ ಪ್ರಗತಿ ಕಾಣುತ್ತಿದೆ, ‘ಸುಂದರವಾಗಿ’ ಕಾಣುತ್ತದೆ ಎಂದು ಭಾಸವಾಗುತ್ತದೆ. ನಗರದ ಶೇ 20ರಿಂದ 30ರಷ್ಟು ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದ ಬಡಾವಣೆಗಳು ಇನ್ನೂ ಹಳ್ಳಿ ಸ್ವರೂಪದಲ್ಲೇ ಇವೆ. ಇತ್ತ ಹಳ್ಳಿಗಳೂ ಅಲ್ಲ, ಅತ್ತ ನಗರ ಪ್ರದೇಶವೂ ಅಲ್ಲ ಎಂಬ ಸ್ಥಿತಿಯಲ್ಲಿ ಅಡಕತ್ತರಿಗೆ ಸಿಲುಕಿಕೊಂಡು ಬಳಲುತ್ತಿವೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಡೀ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ನಗರದ ಹೃದಯ ಭಾಗದ ಪ್ರದೇಶಗಳನ್ನು ಮಾತ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಭಾಗದ ರಸ್ತೆಗಳನ್ನೇ ಪದೇಪದೇ ಕೀಳುವುದು, ಮತ್ತೆಮತ್ತೆ ಡಾಂಬರು ಹಾಕುವ ಕೆಲಸ ನಡೆದಿದೆ. ‘ಸ್ಮಾರ್ಟ್ ಅಭಿವೃದ್ಧಿ’ ಕೆಲ ಭಾಗಕ್ಕೆ ಸೀಮಿತ ಎಂಬ ವಿಚಾರ ಜನರಿಗೆ ಈಗ ಅರ್ಥವಾಗುತ್ತಿದೆ. ಕೆಲವು ಬೆರಳೆಣಿಕೆಯಷ್ಟು ರಸ್ತೆಗಳನ್ನು ಸರಿಪಡಿಸಿದರೆ ಉಳಿದ ಪ್ರದೇಶಗಳ ಜನರು ಏನು ಮಾಡಬೇಕು. ನಗರದ ಹೃದಯ ಭಾಗದಲ್ಲಿ ಇರುವವರು ಮಾತ್ರ ಮನುಷ್ಯರು. ಇತರೆಡೆ ವಾಸಿಸುತ್ತಿರುವವರು ಮನುಷ್ಯರಲ್ಲವೆ ಎಂದು ಜನರು ಪ್ರಶ್ನಿಸುವುದು ಸಾಮಾನ್ಯವಾಗಿದೆ.

ಹಲವು ಬಡಾವಣೆಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಬಹುತೇಕರು ಕಚ್ಚಾ ರಸ್ತೆಗಳು, ಗುಂಡಿಗಳಿಂದ ತುಂಬಿರುವ ಮಣ್ಣು ರಸ್ತೆಗಳಲ್ಲೇ ಪ್ರತಿ ದಿನವೂ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಬಡಾವಣೆಗಳು, ಲೇಔಟ್‌ಗಳ ರಸ್ತೆಗಳು ಡಾಂಬರು ಕಂಡು ಎಷ್ಟೋ ವರ್ಷಗಳಾಗಿವೆ. ಡಾಂಬರು ಹಾಕುವುದು ಹೋಗಲಿ, ಕನಿಷ್ಠ ಪಕ್ಷ ಗುಂಡಿಗಳನ್ನಾದರೂ ಮುಚ್ಚಿ, ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ನಾಗರಾಜಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈ ಸಮಯದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಇಂತಹ ಸಂದರ್ಭದಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ರಸ್ತೆ ಕಾಣದೆ ವಾಹನಗಳನ್ನು ಗುಂಡಿಗೆ ಇಳಿಸಿ ಕೆಳಗೆ ಬೀಳುತ್ತಾರೆ. ಮೊದಲೇ ಮಣ್ಣು ರಸ್ತೆಯಾಗಿದ್ದು, ಜಾರುವುದರಿಂದ ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಾರೆ. ಕೆಸರಿಗೆ ಬಿದ್ದು ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಮೈಗೆ ಕೆಸರು ಮೆತ್ತಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಸ್ಮಾರ್ಟ್ ಸಿಟಿ ರಸ್ತೆಗಳ ಬಗ್ಗೆಯೇ ಮಾತನಾಡುತ್ತಾರೆ. ಗುಂಡಿಗಳಿರುವ, ಹಾಳಾಗಿರುವ, ಓಡಾಡಲು ಸಾಧ್ಯವಾಗದ ರಸ್ತೆ ಹಾಗೂ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮಹಾನಗರ ಪಾಲಿಕೆ ಸಭೆಗಳಲ್ಲಿ, ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲೂ ಈ ವಿಚಾರ ಸಾಕಷ್ಟು ಚರ್ಚೆಯಾಗುತ್ತದೆ. ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಹಣ ಮೀಸಲಿಡಲಾಗಿದೆ, ಟೆಂಡರ್ ಕರೆಯಲಾಗುತ್ತಿದೆ, ಶೀಘ್ರ ಗುಂಡಿ ಮುಚ್ಚಿಸಲಾಗುವುದು. ಮುಂದೆ ಸಮಸ್ಯೆಗಳಾಗುವುದಿಲ್ಲ ಎಂಬ ಭರವಸೆಗಳು ಸಿಗುತ್ತವೆ. ತೀವ್ರ ಒತ್ತಡಗಳು ಬಂದಾಗ ಅಲ್ಲಲ್ಲಿ ಗುಂಡಿ ಮುಚ್ಚುವಂತೆ ಮಾಡಲಾಗುತ್ತದೆ. ಆದರೆ ರಸ್ತೆ ಸ್ಥಿತಿ ಮಾತ್ರ ಸುಧಾರಿಸಿಲ್ಲ.

ಮಾಜಿ ಶಾಸಕ ರಫೀಕ್ ಅಹಮ್ಮದ್ ಅವರು ರಸ್ತೆಗಳಲ್ಲಿರುವ ಗುಂಡಿಗಳ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ರಸ್ತೆಗಳ ಅವ್ಯವಸ್ಥೆ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು. ಸ್ಮಾರ್ಟ್ ಸಿಟಿ ಎಂದರೆ ಇದೇನಾ, ಗುಂಡಿ ಮುಚ್ಚುವಷ್ಟು ಹಣವೂ ಮಹಾನಗರ ಪಾಲಿಕೆಯಲ್ಲಿ ಇಲ್ಲವೆ. ಜನರು ಓಡಾಡುವುದಾರೂ ಹೇಗೆ ಎಂದು ಪ್ರಶ್ನಿಸಿದ್ದರು.

ಗುಂಡಿ ಬೀಳುತ್ತಲೇ ಇವೆ

ಈಗಾಗಲೇ ಒಂದು ಸುತ್ತು ರಸ್ತೆ ಗುಂಡಿಗಳನ್ನು ಮುಚ್ಚಿಸಲಾಗಿತ್ತು. ಈಗ ಮಳೆ ಆಗುತ್ತಿರುವುದರಿಂದ ಮತ್ತೆ ಗುಂಡಿಗಳು ಬಿದ್ದಿವೆ. ಇನ್ನೊಮ್ಮೆ ರಸ್ತೆ ಗುಂಡಿಗಳನ್ನು ಮುಚ್ಚಿಸಲಾಗುವುದು.

ಬಿ.ಜಿ.ಕೃಷ್ಣಪ್ಪ, ಮೇಯರ್

***

ಕೈ, ಕಾಲು ಮುರಿದುಕೊಂಡಿದ್ದಾರೆ

ನಗರದ ಕಾಲ್‌ಟ್ಯಾಕ್ಸ್‌ ವೃತ್ತದಿಂದ ಎಸ್‌ಎಸ್‌ಐಟಿ ಕಾಲೇಜುವರೆಗೆ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಇಡೀ ರಸ್ತೆ ಗುಂಡಿಗಳಿಂದ ತುಂಬಿಕೊಂಡಿದ್ದು, ಜನರು, ವಾಹನ ಓಡಾಡಲು ಸಾಧ್ಯವಾಗುತ್ತಿಲ್ಲ. ಗುಂಡಿಗಳಲ್ಲಿ ಬಿದ್ದು ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ಪ್ರಾಣ ಕಳೆದುಕೊಳ್ಳುವ ಮುನ್ನ ರಸ್ತೆ ಗುಂಡಿ ಮುಚ್ಚಿಸಿ.

ಸಿದ್ದರಾಜು, ತುಮಕೂರು

***

ಹಾಳಾಗಿವೆ

ಮೆಳೆಕೋಟೆ ರಸ್ತೆ ಹಾಳಾಗಿದ್ದು, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಓಡಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಸರಿಪಡಿಸಿ ನಾಲ್ಕು ಜನರಿಗೆ ಸಹಾಯಮಾಡಿ.

ಇಸ್ಮಾಯಿಲ್, ತುಮಕೂರು

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.