ಶನಿವಾರ, ಅಕ್ಟೋಬರ್ 31, 2020
20 °C

ಶಿರಾದಲ್ಲಿ ಒಳ ಒಪ್ಪಂದದ ಸದ್ದು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು‌ ಹಣಿಯಲು ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ ಎಂಬ ಸುದ್ದಿ ಶಿರಾ ಕ್ಷೇತ್ರದಾದ್ಯಂತ ದಟ್ಟವಾಗಿ ಹರಡಿದೆ. ಒಳಒಪ್ಪಂದದ ಕಾರಣಕ್ಕಾಗಿಯೇ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿಸಲಾಗಿರುವ ಡಾ.ಸಿ.ಎಂ.ರಾಜೇಶ್ ಗೌಡ ಪಕ್ಷ ಸೇರಿ ಹತ್ತು ದಿನವಾದರೂ ಟಿಕೆಟ್‌ ಘೋಷಿಸಿಲ್ಲ. ಮೂರು ದಿನದಲ್ಲಿ ಅಭ್ಯರ್ಥಿ ಘೋಷಿಸುತ್ತೇವೆ ಎಂದು ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಘೋಷಿಸಿ ವಾರವಾದರೂ ಟಿಕೆಟ್‌ ಸುದ್ದಿ ಇಲ್ಲ.

ಜೆಡಿಎಸ್‌ ಜತೆ ಒಳಒಪ್ಪಂದಕ್ಕಾಗಿಯೇ ಬಿಜೆಪಿ ಚುನಾವಣಾ ರಣತಂತ್ರ ಬದಲಿಸಿದೆ ಎಂದು ಹೇಳಲಾಗುತ್ತಿದೆ. ಶಿರಾದಲ್ಲಿ ಗೆಲುವು ಕಷ್ಟ ಎಂದು ಅರಿತ ಬಿಜೆಪಿ, ರಾಜೇಶ್‌ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೆಸಿದೆ. ಆ ಮೂಲಕ ಜೆಡಿಎಸ್‌ಗೆ ಬೆಂಬಲ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಮೂಲ ಬಿಜೆಪಿಗರಿಗೆ ಟಿಕೆಟ್ ನೀಡಬೇಕು ಎನ್ನುವ ಬಂಡಾಯದ ಧ್ವನಿ ಜೋರಾಗಿದೆ. ಇದುವರೆಗೂ ಬಂಡಾಯ ಶಮನ ಸಾಧ್ಯವಾಗಿಲ್ಲ. ಈ ಹಿಂದಿನ ವಿಧಾನಸಭಾ ಚುನಾವಣೆ ಗಮನಿಸಿದರೆ ಶಿರಾದಲ್ಲಿ ಬಿಜೆಪಿ ಪಡೆದ ಗರಿಷ್ಠ ಮತ 24,025 ಮಾತ್ರ.

ರಾಜರಾಜೇಶ್ವರಿಯತ್ತ ಚಿತ್ತ: ಈ ಹಿಂದಿನ ಚುನಾವಣೆಗಳಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿತ್ತು. ಹಾಗಾಗಿ ಅಲ್ಲಿ ಜೆಡಿಎಸ್‌ ಬೆಂಬಲ ಪಡೆದರೆ ಗೆಲುವು ಸುಲಭವಾಗಬಹುದು ಎಂಬ ಲೆಕ್ಕಾಚಾರ ಪಕ್ಷದ್ದು ಎಂದು ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಹೇಳುತ್ತಿದ್ದಾರೆ. 

ಶಿರಾದಲ್ಲಿ ಗೆಲುವು ಕಷ್ಟ. ಆದರೆ, ನೆಲೆ ಮತ್ತು ಬಲ ಹೆಚ್ಚಿಸಿಕೊಳ್ಳಬಹುದು. ಒಳಒಪ್ಪಂದ ಮಾಡಿಕೊಳ್ಳದಿದ್ದರೆ ಎರಡೂ ಕ್ಷೇತ್ರಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.

ಪಕ್ಷಾಂತರಿಗಳ ಲೆಕ್ಕಾಚಾರ: ಶಿರಾ ನಗರಸಭೆಗೆ ಇನ್ನೂ ಚುನಾವಣೆ ನಡೆದಿಲ್ಲ. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಸರ್ಕಾರ ಐವರನ್ನು ನಾಮನಿರ್ದೇಶನ ಮಾಡಬಹುದು. ಈ ನಾಮನಿರ್ದೇಶನದ ಮೇಲೆ ಕಣ್ಣಿಟ್ಟು ಕೆಲವರು ಬಿಜೆಪಿ ಸೇರುತ್ತಿದ್ದಾರೆ ಎನ್ನಲಾಗಿದೆ.

ಮಾಧುಸ್ವಾಮಿ ಗೈರು, ಕಾರಣ ಏನು?: ಶಿರಾದಲ್ಲಿ ಮೊದಲು ಚುನಾವಣಾ ಪ್ರಚಾರ ಆರಂಭಿಸಿದ್ದೇ ಬಿಜೆಪಿ. ಆದರೆ ಈ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಕ್ರಿಯವಾಗಿ ಪಾಲ್ಗೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಹೊಂದಿಕೊಂಡು ಶಿರಾ ಇದೆ. ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಮಾಧುಸ್ವಾಮಿ ಮರಳಿದ್ದರೂ ಚುನಾವಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿಲ್ಲ. ಸೋಂಕು ತಗಲುವ ಮುನ್ನ ಕೂಡ ಒಮ್ಮೆಯೂ ಅವರು ಚುನಾವಣಾ ಸಭೆಗಳಲ್ಲಿ ಭಾಗಿ ಆಗಿರಲಿಲ್ಲ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ಹಾಗೂ ಮಾಧುಸ್ವಾಮಿ ಸಂಬಂಧ ಉತ್ತಮವಾಗಿಲ್ಲ. ಹಾಗಾಗಿ ಸಚಿವರು ಸಕ್ರಿಯವಾಗಿಲ್ಲ ಎನ್ನುವ ಮಾತು ಹರಿದಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.