ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಅಧಿಕಾರಿಗಳ ನಿರ್ಲಕ್ಷ್ಯ, ನಗರಸಭೆಗೆ ನಷ್ಟ

ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Published 4 ಅಕ್ಟೋಬರ್ 2023, 13:19 IST
Last Updated 4 ಅಕ್ಟೋಬರ್ 2023, 13:19 IST
ಅಕ್ಷರ ಗಾತ್ರ

ಶಿರಾ: ನಗರದ ಹೃದಯ ಭಾಗದಲ್ಲಿ ಗ್ಯಾಸ್‌ ಪೈಪ್‌ಲೈನ್ ಹಾದು ಹೋಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಸಭೆಗೆ ₹25 ಲಕ್ಷ ನಷ್ಟವಾಗುತ್ತಿದೆ ಎಂದು ನಗರಸಭೆ ಸದಸ್ಯ ಆರ್.ರಾಮು ಆರೋಪಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಪಿ.ಪೂಜಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಹಳೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆ ಪಕ್ಕದಲ್ಲಿ ಅರ್ಧ ಅಡಿ ಜಾಗ ಬಿಡದೆ ಪೈಪ್‌ಲೈನ್ ಹಾಕಲಾಗುತ್ತಿದೆ. ಮುಂದೆ ರಸ್ತೆ ರಿಪೇರಿ ಮಾಡಲು ಹೋದಾಗ ಅನಾಹುತವಾದರೆ ಯಾರು ಹೊಣೆ. ಜತೆಗೆ ನಗರದೊಳಗೆ ಪೈಪ್‌ಲೈನ್ ಮಾಡುವ ಅವಶ್ಯಕತೆ ಇರಲಿಲ್ಲ. ನಗರದ ನಾಲ್ಕು ದಿಕ್ಕಿನಲ್ಲಿರುವ ವರ್ತುಲ ರಸ್ತೆಯ ಮೂಲಕ ಮಾಡಬೇಕಿತ್ತು ಎಂದು ಹೇಳಿದರು.

ನಗರಸಭೆ ಅಧಿಕಾರಿಗಳು ಕೇವಲ ₹ 5 ಲಕ್ಷ ಪಡೆದು ಅನುಮತಿ ನೀಡಿದ್ದಾರೆ. ಅವರು ನಗರಸಭೆಗೆ ₹30 ಲಕ್ಷ ನೀಡಿರುವುದಾಗಿ ಹೇಳುತ್ತಿದ್ದಾರೆ. ಅವ್ಯವಹಾರ ನಡೆದಿರಬೇಕು ಎಂದು ಸದಸ್ಯ ರಾಮು ಹೇಳಿದಾಗ ಉಳಿದ ಸದಸ್ಯರು ಧ್ವನಿಗೂಡಿಸಿದರು. ದರ ಪರಿಷ್ಕರಿಸಿ ಹೊಸದಾಗಿ ಹಣ ಕಟ್ಟಿಸಿ ಪೈಪ್‌ಲೈನ್ ಆಳವಡಿಕೆಗೆ ಅವಕಾಶ ನೀಡುವುದಾಗಿ ಅಧ್ಯಕ್ಷೆ ಪಿ.ಪೂಜಾ ಭರವಸೆ ನೀಡಿದರು.

ಅಂಗಡಿ ಮಾಲೀಕರಿಗೆ ಬಾಕಿ ಹಣ ಕಟ್ಟಲು ಸಮಯ ನಿಗದಿ ಮಾಡಬೇಕು ಎಂದು ಸದಸ್ಯ ಅಜೇಯ್ ಹೇಳಿದರು. ಅಂಗಡಿ ಮಾಲೀಕರು ನ್ಯಾಯಾಲಯಕ್ಕೆ ಹೋದರೂ ಪರವಾಗಿಲ್ಲ. ಕಟ್ಟುನಿಟ್ಟಾಗಿ ಬಾಡಿಗೆ ವಸೂಲಿ ಮಾಡಿ. ಅಕ್ಟೋಬರ್ ಅಂತ್ಯದೊಳಗೆ ಬಾಡಿಗೆ ಕಟ್ಟದಿದ್ದರೆ ಅಂಗಡಿಗೆ ಬೀಗ ಹಾಕಿ ಎಂದು ಶಾಸಕ ಟಿ.ಬಿ.ಜಯಚಂದ್ರ ಸೂಚಿಸಿದರು.

ವರ್ಗಾವಣೆಗೆ ತೀರ್ಮಾನ: ನಗರಸಭೆ ಕಂದಾಯ ಅಧಿಕಾರಿ ನಟರಾಜು ಅವರು ಸತತವಾಗಿ ಮೂರು ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದಾರೆ. ಅವರಿಗೆ ಸದಸ್ಯರ ಬಗ್ಗೆ ಯಾವುದೇ ಗೌರವ ಇಲ್ಲ. ಖಾತೆ ವಿಭಾಗದಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಚರ್ಚೆ ಮಾಡಲು ಅವರ ಸಭೆಗೆ ಬರುವುದಿಲ್ಲ. ಇಂತಹ ಅಧಿಕಾರಿ ನಮಗೆ ಬೇಕಿಲ್ಲ ಎಂದು ಸದಸ್ಯರು ಪಟ್ಟು ಹಿಡಿದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ ನಿಮಗೆ ಅವರು ಬೇಡದಿದ್ದರೆ ವರ್ಗಾವಣೆ ಮಾಡುವಂತೆ ನಿರ್ಣಯ ತೆಗೆದುಕೊಳ್ಳಿ ಎಂದರು.

ಒಳಚರಂಡಿ ಸಂಪರ್ಕದಲ್ಲಿ ಅಕ್ರಮ: ನಗರದಲ್ಲಿ ಅಕ್ರಮವಾಗಿ ₹ 5ರಿಂದ ₹8 ಸಾವಿರ ಪಡೆದು ಸದಸ್ಯರ ಗಮನಕ್ಕೆ ತರದೆ ಖಾಸಗಿಯವರು ಒಳಚರಂಡಿ ಸಂಪರ್ಕ ನೀಡುತ್ತಿದ್ದಾರೆ ಎಂದು ಸದಸ್ಯ ಅಜೇಯ್ ಆರೋಪಿಸಿದರು.

ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ. ಈ ಬಗ್ಗೆ ನಗರಸಭೆ ಕ್ರಮ ತೆಗೆದುಕೊಂಡು ಉಚಿತವಾಗಿ ಮೊದಲು ಸಂಪರ್ಕ ನೀಡಿ ಎಂದು ಶಾಸಕ ಟಿ‌‌.ಬಿ‌.ಜಯಚಂದ್ರ ಸೂಚಿಸಿದರು.

ಅಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಕೇವಲ ಚರ್ಚೆ ಮಾಡುತ್ತೇವೆ. ಯಾವುದೇ ಕೆಲಸ ಆಗುತ್ತಿಲ್ಲ ಎಂದು ಸದಸ್ಯೆ ಸಾನಿಯಾ ಖಾದರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಾತಿನ ಚಕಮುಖಿ: ನಗರಸಭೆ ಅಧ್ಯಕ್ಷೆ ಪಿ.ಪೂಜಾ ಹಾಗೂ ಅವರದೇ ಪಕ್ಷದ ಸದಸ್ಯ ಅಜೇಯ್ ಕುಮಾರ್ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕಳೆದ ಸಭೆಯಲ್ಲಿ ನಡೆದ ಚರ್ಚೆಯ ಅಜೆಂಡಾದಲ್ಲಿ ಕೇವಲ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಹಿ ಮಾತ್ರ ಇದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಸಹಿ ಇಲ್ಲ. ವೇದಿಕೆ ಮೇಲೆ ಅವರನ್ನು ಕುಳ್ಳರಿಸಿ ಅಪಮಾನ ಮಾಡಲಾಗಿದೆ. ಇದಕ್ಕೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು.

ಅಧ್ಯಕ್ಷರು ಉತ್ತರ ನೀಡಲು ಬಂದಾಗ ಅಧಿಕಾರಿಗಳು ಉತ್ತರ ನೀಡಬೇಕು ನೀವಲ್ಲ ಎಂದಾಗ ಕೆರಳಿದ ಅಧ್ಯಕ್ಷೆ ಪೂಜಾ ಸಭೆ ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ನನ್ನ ಇಷ್ಟದಂತೆ ನಡೆಯಬೇಕು ಎಂದು ಏರು ಧ್ವನಿಯಲ್ಲಿ ಹೇಳಿದರು. ಈ ಸಮಯದಲ್ಲಿ ಇಬ್ಬರ ನಡುವೆ ಬಿರುಸಿನ ಚರ್ಚೆ ನಡೆಯಿತು.

ಆಡಳಿತ ಪಕ್ಷದವರೇ ಕಿತ್ತಾಡುತ್ತಿರುವುದನ್ನು ಕಂಡು ಜೆಡಿಎಸ್, ಬಿಜೆಪಿ ಸದಸ್ಯರು ಮೂಕ ಪ್ರೇಕ್ಷಕರಾದರು. ಮಧ್ಯೆ ಪ್ರವೇಶಿಸಿದ ಪೌರಾಯುಕ್ತೆ ಪಲ್ಲವಿ ಮುಂದೆ ಈ ರೀತಿಯಾಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.

ಸ್ಥಾಯಿ ಸಮಿತಿ ಸದಸ್ಯ ಎಸ್.ಎಲ್.ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT