ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ತಂಗುದಾಣದಲ್ಲಿ ಬಳುಕುವ ಬಳ್ಳಿ, ವೈ–ಫೈ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಪ್ರಯಾಣಿಕರಿಗೆ ನವೀನ ಸೌಕರ್ಯ
Last Updated 30 ಜೂನ್ 2019, 20:15 IST
ಅಕ್ಷರ ಗಾತ್ರ

ತುಮಕೂರು: ನಗರವನ್ನು ಮತ್ತಷ್ಟು ‘ಸ್ಮಾರ್ಟ್‌’ ಮಾಡುತ್ತ ಪ್ರಯಾಣಿಕರ ಸ್ನೇಹಿಯಾದ ಐದು ನವೀನ ತಂಗುದಾಣಗಳ ನಿರ್ಮಾಣ ಕೆಲಸ ಭರದಿಂದ ಸಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಈ ಆಕರ್ಷಕ ತಂಗುದಾಣಗಳಲ್ಲಿ ಪ್ರಯಾಣಿಕರ ಪ್ರಾಥಮಿಕ ಆದ್ಯತೆಗಳಾದ ಆಸನ ಮತ್ತು ಆಸರೆಯ ವ್ಯವಸ್ಥೆ ಮಾತ್ರವಲ್ಲದೆ ಬಸ್‌ ಬರುವ ಸಮಯದ ಮಾಹಿತಿಯ ಡಿಜಿಟಲ್‌ ಫಲಕ, ಶೌಚಾಲಯ ವ್ಯವಸ್ಥೆಯೂ ಇರಲಿದೆ. ಅದಲ್ಲದೇ ವೈ–ಫೈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ವಿಶೇಷತೆ: ಆಯತ ಆಕಾರದ ಮತ್ತು ಇಳಿಜಾರಿನ ಚಾವಣಿಯ ರಚನೆಯನ್ನು ತಂಗುದಾಣ ಹೊಂದಿರಲಿದೆ. ಪರಿಸರ ಕಾಳಜಿ ಮತ್ತು ಆಕರ್ಷಣೆಗಾಗಿ ಆ ಇಳಿಜಾರಿನಲ್ಲಿ ಬಣ್ಣದ ಬಳ್ಳಿಗಳನ್ನು ಬೆಳೆಸಲಾಗುತ್ತದೆ. ತಂಗುದಾಣದಲ್ಲಿನ ಡಿಜಿಟಲ್‌ ಪರದೆಯಲ್ಲಿ ಮಾರ್ಗದ ಮೂಲಕ ಹಾದು ಹೋಗುವ ಬಸ್‌ಗಳ ಪಟ್ಟಿ, ತಂಗುದಾಣಕ್ಕೆ ಬಸ್‌ ಬಂದು ತಲುಪುವ ಸರಾಸರಿ ಸಮಯದ ಮಾಹಿತಿ ಬಿತ್ತರಗೊಳ್ಳುತ್ತಿರುತ್ತದೆ. ರಾತ್ರಿವೇಳೆ ಎಲ್‌ಇಡಿ ಬಲ್ಬ್‌ಗಳು ಬೆಳಕು ಬೀರುತ್ತಿರುತ್ತವೆ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಆರ್‌.ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗಡಿ ಮಾಲೀಕರಿಂದ ನಿರ್ವಹಣೆ: ಇಳಿಜಾರಿನ ರಚನೆಯ ಕೆಳಭಾಗದಲ್ಲಿ ಅಂಗಡಿಯೊಂದನ್ನು ರೂಪಿಸುತ್ತೇವೆ. ಅದನ್ನು ಪಾಲಿಕೆಯ ಕಂದಾಯ ವಿಭಾಗದಿಂದ ಹಂಚಿಕೆ ಮಾಡಲಾಗುತ್ತದೆ. ಅದಕ್ಕೆ ಕನಿಷ್ಟ ಮೊತ್ತದ ಬಾಡಿಗೆ ನಿಗದಿ ಪಡಿಸಲಾಗುತ್ತದೆ. ಅಲ್ಲಿ ವ್ಯಾಪಾರ ಮಾಡಲು ಒಪ್ಪಂದ ಮಾಡಿಕೊಂಡವರು ಪ್ರಯಾಣಿಕರ ತಂಗುದಾಣವನ್ನು ನಿರ್ವಹಣೆ ಮಾಡಬೇಕು. ಅಲ್ಲಿನ ಸ್ವಚ್ಛತೆ ಕಾಪಾಡಬೇಕು. ರಚನೆಗಳಿಗೆ ಸಾರ್ವಜನಿಕರಿಂದ ಧಕ್ಕೆ ಆಗದಂತೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ತಂಗುದಾಣದಲ್ಲಿ ಗರಿಷ್ಟ ಹತ್ತು ಜನ ಕೂರಲು ಆಸನದ ವ್ಯವಸ್ಥೆ ಇರುತ್ತದೆ. ಹಸಿ ಮತ್ತು ಒಣ ಕಸ ಹಾಕಲು ಪ್ರತ್ಯೇಕ ಬುಟ್ಟಿಗಳು ಇರುತ್ತವೆ. ಇ–ಶೌಚಾಲಯಗಳ ವ್ಯವಸ್ಥೆ ಇರುತ್ತದೆ. ಸುತ್ತಲಿನ ನಿರ್ದಿಷ್ಟ ವ್ಯಾಪ್ತಿಯ ವರೆಗೂ ವೈ–ಫೈ ಸೌಲಭ್ಯ ಇರುತ್ತದೆ. ಮುಂದಿನ ದಿನಗಳಲ್ಲಿ ಸೌರಶಕ್ತಿಯನ್ನು ಬಳಸಲು ಚಾವಣಿಯ ಮೇಲ್ಭಾಗದಲ್ಲಿ ರಚನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಎಲ್ಲೆಲ್ಲಿ ನಿರ್ಮಾಣ: ನಗರದ ಐದು ಕಡೆ ‘ಸ್ಮಾರ್ಟ್‌’ ತಂಗುದಾಣ ನಿರ್ಮಾಣಕ್ಕೆ ಯೋಜಿಸಲಾಗಿದೆ. ಬಿ.ಎಚ್‌.ರಸ್ತೆಯ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಮುಂಭಾಗದಲ್ಲಿ, ಸಿದ್ಧಗಂಗಾ ಆಸ್ಪತ್ರೆಯ ಎದುರಿನಲ್ಲಿ, ಶೆಟ್ಟಿಹಳ್ಳಿ ರಸ್ತೆಯ ಎಚ್‌ಎಂಎಸ್‌ ಕಾಲೇಜಿನ ಸಮೀಪ ತಂಗುದಾಣಗಳು ಎದ್ದು ನಿಲ್ಲಲಿವೆ. ಕುಣಿಗಲ್‌ ರಸ್ತೆ ಬದಿಯೂ ಎರಡು ತಂಗುದಾಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಇನ್ನೂ ಸ್ಥಳಗುರುತು ಮಾಡಲಾಗಿಲ್ಲ.

ಸ್ಮಾರ್ಟ್‌ ತಂಗುದಾಣಗಳ ನಿರ್ಮಾಣದ ಗುತ್ತಿಗೆಯನ್ನು ಎ–ಒನ್‌ ಕನ್‌ಸ್ಟ್ರಕ್ಷನ್‌ ಕಂಪನಿ ಪಡೆದಿದೆ. ನಿರ್ಮಾಣಕ್ಕೆ ಜುಲೈ ಮೊದಲ ವಾರದ ಗಡುವನ್ನು ನಿಗದಿ ಪಡಿಸಲಾಗಿದೆ. ಈ ರಚನೆಯನ್ನು ಕಟ್ಟಿದ ಕಂಪನಿಯೇ ಒಂದು ವರ್ಷ ಕಾಲ ನಿರ್ವಹಣೆ ಮಾಡುತ್ತದೆ. ಬಳಿಕ ಪಾಲಿಕೆಗೆ ವರ್ಗಾಹಿಸುತ್ತದೆ.

‘ಯಶಸ್ವಿಯಾಗದ ಪಿಪಿಪಿ ಮಾದರಿ’
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕ–ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಈ ಹಿಂದೆ ತಂಗುದಾಣಗಳನ್ನು ನಿರ್ಮಿಸಿತ್ತು. ಅದನ್ನು ನಿರ್ಮಿಸಿದ ಖಾಸಗಿ ಕಂಪನಿ ಜಾಹೀರಾತು ಪ್ರದರ್ಶಿಸಿ ಆದಾಯ ಗಳಿಸಿ, ನಿರ್ವಹಣೆಯ ಹೊಣೆ ಹೊತ್ತುಕೊಳ್ಳಬೇಕಿತ್ತು ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಾಹೀರಾತುಗಳನ್ನು ನೀಡಲು ಯಾರೂ ಮುಂದೆ ಬರದ ಕಾರಣ ಪಿಪಿಪಿ ಮಾದರಿ ಯಶಸ್ವಿಯಾಗಲಿಲ್ಲ. ತಂಗುದಾಣಗಳ ನಿರ್ಮಾಣ ಮತ್ತು ನಿರ್ವಹಣೆಗೆ ಕಂಪನಿಗಳು ಹಿಂದೇಟು ಹಾಕಿದವು. ಹಾಗಾಗಿ ಎಂಜಿನಿಯರಿಂಗ್‌ ಪ್ರೊಕ್ಯೂರ್‌ಮೆಂಟ್‌ ಕನ್‌ಸ್ಟ್ರಕ್ಷನ್‌(ಇಪಿಸಿ) ಮಾದರಿಯಲ್ಲಿ ‘ಸ್ಮಾರ್ಟ್‌’ ತಂಗುದಾಣಗಳನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಅಂಕಿ–ಅಂಶ
₹ 7 ಲಕ್ಷ:
ಒಂದು ತಂಗುದಾಣ ನಿರ್ಮಾಣದ ವೆಚ್ಚ
6x2 ಮೀಟರ್‌:ತಂಗುದಾಣದ ಅಳತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT