ಮಂಗಳವಾರ, ಮಾರ್ಚ್ 2, 2021
29 °C

ಸಾಕ್ಷರ ಕ್ರಾಂತಿಗೆ ಶಿಕ್ಷಕರೇ ಕಾರಣ:ಜಿ.ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: '130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶ ಶೇ 80ರಷ್ಟು ಸಾಕ್ಷರತೆ ಸಾಧಿಸಿದೆ ಎಂದರೆ ಅದಕ್ಕೆ ಶಿಕ್ಷಕರೇ ಕಾರಣ. ಶಿಕ್ಷಕರ ಕೊಡುಗೆಗೆ ಬೆಲೆ ಕಟ್ಟಲಾಗದು' ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 131ನೇ ಜನ್ಮದಿನಾಚರಣೆ ಮತ್ತು ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

'ಜಗತ್ತಿನ ಒಟ್ಟಾರೆ ಸರಾಸರಿ ಸಾಕ್ಷರತೆ ಪ್ರಮಾಣ ಶೇ 84 ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಶೇ 12ರಷ್ಟು ಮಾತ್ರ ಸಾಕ್ಷರತೆ ಹೊಂದಿತ್ತು. 72 ವರ್ಷದ ಬಳಿಕ ಶೇ 80ರಷ್ಟು ಸಾಕ್ಷರತೆ ಪ್ರಮಾಣ ಸಾಧನೆಯಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗೆ ಶಿಕ್ಷಣ ಕೊಡುಗೆ ಅಪಾರವಾಗಿದೆ' ಎಂದು ಹೇಳಿದರು.

'ತಾಂತ್ರಿಕ ಮಾನವಸಂಪನ್ಮೂಲ ಕೊಡುಗೆಯಲ್ಲಿ ನಮ್ಮ ದೇಶ ಮಹತ್ವದ ಸಾಧನೆ ಮಾಡಿದೆ. ತಾಂತ್ರಿಕ ಕಾಲೇಜುಗಳಲ್ಲಿ ಪ್ರತಿ ವರ್ಷ 5 ಲಕ್ಷ ಎಂಜಿನಿಯರ್, ವೈದ್ಯಕೀಯ ಕಾಲೇಜುಗಳಿಂದ 80 ಸಾವಿರ ವೈದ್ಯರು, ಲಕ್ಷಾಂತರ ಶಿಕ್ಷಕರು ಹೊರ ಬರುತ್ತಿದ್ದಾರೆ. ಇದೆಲ್ಲವೂ ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ ಕೊಡುಗೆಯೇ ಆಗಿದೆ' ಎಂದು ಹೇಳಿದರು.

'ಮೈಸೂರು ಮಹಾರಾಜರು ಶಿಕ್ಷಣದಿಂದಲೇ ಏಳಿಗೆ ಎಂಬುದನ್ನು ಅರಿತು ಆ ಕಾಲದಲ್ಲಿಯೇ ಶಿಕ್ಷಣ ಕ್ರಾಂತಿಯನ್ನು ಮಾಡಿದರು. ಅವರು ಅನುಸರಿಸಿದ ಮಾರ್ಗವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ನಂತರ ಅನುಸರಿಸಿವೆ. ಈಗ ಶಿಕ್ಷಣ ಜಾಗೃತಿ ಎಲ್ಲರಿಗೂ ಬಂದಿದೆ' ಎಂದು ಹೇಳಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಮರ್ಪಕ ರೀತಿ ಮೂಲಸೌಕರ್ಯ ಕಲ್ಪಿಸಬೇಕು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು' ಎಂದು ಹೇಳಿದರು.

'ಶಿಕ್ಷಕರಿಗೆ ಅನುಕೂಲವಾಗುವ ಪ್ರದೇಶದ ಶಾಲೆಗಳಿಗೆ ವರ್ಗಾವಣೆ ಮಾಡಬೇಕು. ದೂರದ ಶಾಲೆಗಳಿಗೆ ಮಾಡಿದರೆ ಅವರ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು' ಎಂದು ಹೇಳಿದರು.

ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಶಿಕ್ಷಕಿಯರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು. ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ.ಗೋವಿಂದರಾಯ ಉಪನ್ಯಾಸ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜ್, ಚೌಡರೆಡ್ಡಿ ತೂಪಲ್ಲಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್, ಎಸ್ಪಿ ಡಾ.ದಿವ್ಯಾ ಗೋಪಿನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಚ್.ಲೋಕೇಶ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಪ್ರೌಢ ಶಾಲಾ ಮತ್ತು ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ತಾಲ್ಲೂಕು ಪ್ರೌಢ ಶಾಲಾ ಮತ್ತು ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರ ಸಂಘದ ಅಧ್ಯಕ್ಷ ಗುರುಸ್ವಾಮಿ, ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ರಾಮಸ್ವಾಮಿ, ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಪರಮೇಶ್ , ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ  ಭೂತಯ್ಯ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಎಚ್.ಸಿ.ಸತ್ಯಪ್ರಕಾಶ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಿ.ಚಂದ್ರಶೇಖರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು