ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಆವಿಷ್ಕಾರ ಲೋಕದಲ್ಲೊಂದು ಸುತ್ತ

ವಿದ್ಯಾರ್ಥಿಗಳ ತಾಂತ್ರಿಕ ಕುಶಲತೆ, ಜ್ಞಾನ, ಸಂಶೋಧನೆ ಆಸಕ್ತಿ ಒರೆಗೆ ಹಚ್ಚುವ ವೇದಿಕೆಯಲ್ಲಿ ಅರಳಿದ ಆವಿಷ್ಕಾರಗಳು
Last Updated 26 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ತುಮಕೂರು: ಭವಿಷ್ಯದಲ್ಲಿ ವಿಶ್ವಕ್ಕೆ ಒಂದಲ್ಲ ಒಂದು ರೀತಿ ಅನುಕೂಲವಾಗಬಲ್ಲ ತಂತ್ರಜ್ಞಾನ ಆವಿಷ್ಕಾರಗಳ ಲೋಕ ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ತೆರೆದಿದೆ.

ರಾಜ್ಯ ಮಟ್ಟದ ವೈಜ್ಞಾನಿಕ ಆವಿಷ್ಕಾರಗಳ ಪ್ರದರ್ಶನ ಹಾಗೂ ಸ್ಪರ್ಧೆ ಶುಕ್ರವಾರ ಮತ್ತು ಶನಿವಾರ ನಡೆಯುತ್ತಿದ್ದು, ಈ ಸಂಶೋಧನಾ ಆವಿಷ್ಕಾರಗಳು ನೋಡುಗರನ್ನು ಒಂದಿಷ್ಟು ಬೆರಗಾಗಿಸುವಂತಿವೆ.

ವಿದ್ಯಾರ್ಥಿ–ವಿದ್ಯಾರ್ಥಿನಿಯರಲ್ಲಿರುವ ತಾಂತ್ರಿಕ ಕುಶಲತೆ, ಜ್ಞಾನ, ಸಂಶೋಧನಾ ಆಸಕ್ತಿ, ಪ್ರಯೋಗ ಶೀಲತೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಕಾಲೇಜಿನ ಆವರಣದಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳೇ ರೂಪಿಸಿದ ಆವಿಷ್ಕಾರದ ಮಾದರಿಗಳ ಪ್ರದರ್ಶನವನ್ನು ಆಯೋಜಿಸಿಕೊಂಡು ಬಂದಿದ್ದು, ಈ ವರ್ಷವೂ ನಡೆಯುತ್ತಿದೆ.

ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಪಟ್ಟ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಸೇರಿದಂತೆ 9 ವಿಭಾಗಗಳ (ಬ್ರ್ಯಾಂಚ್) ವಿಷಯಕ್ಕೆ ಸಂಬಂಧಪಟ್ಟಂತೆ ಆಯಾ ವಿಭಾಗಕ್ಕೆ ಸಂಬಂಧಪಟ್ಟ ಆಯ್ದ ವಿದ್ಯಾರ್ಥಿಗಳ ಗುಂಪು ಆವಿಷ್ಕಾರದ ಮಾದರಿಗಳನ್ನು ಪ್ರದರ್ಶಿಸಿದೆ.

ಆವಿಷ್ಕಾರದ ಮಾದರಿ ಪ್ರದರ್ಶನ ಆರಂಭದಲ್ಲಿ ಒಂದು ಸುತ್ತು ಹಾಕಿದಾಗ ಕೆಲ ಮಾದರಿಗಳು ಕಂಡಿದ್ದು ಹೀಗೆ.

ಅಗ್ನಿ ಶಾಮಕ ರೊಬೊಟ್: ಮಕ್ಕಳ ಆಟಿಕೆಯ ರಿಮೋಟ್ ಕಾರಿನಂತಿದ್ದ ಆ ಕಾರು ಸರ ಸರನೆ ಸುತ್ತಾಡುವುದು, ನೀರು ಚಿಮ್ಮಿಸುತ್ತಿದ್ದುದು ಗಮನ ಸೆಳೆಯಿತು. ಏನಿದು ಎಂದು ಕಣ್ಣು ಹಾಯಿಸಿದಾಗ ಕಂಡಿದ್ದು ಅಗ್ನಿ ಶಾಮಕ ರೊಬೊಟ್.

ಇದರ ವಿಶೇಷ ಏನೆಂದರೆ ರಾಸಾಯನಿಕ ಕೈಗಾರಿಕಾರಿಕೆಗಳು, ಪ್ಲಾಸ್ಟಿಕ್ ಫ್ಯಾಕ್ಟರಿಗಳು, ಅರಣ್ಯ ಪ್ರದೇಶದಲ್ಲಿ, ಮನುಷ್ಯರು ಹೋಗಿ ಬೆಂಕಿ ನಂದಿಸಲಾಗದ ಸ್ಥಳಗಳಲ್ಲಿ ಸ್ವಯಂ ಚಾಲಿತವಾಗಿ ನುಗ್ಗಿ ಬೆಂಕಿ ನಂದಿಸುವುದು! ಅದಕ್ಕಾಗಿಯೇ ಇದರ ಹೆಸರು ಫೈಯರ್ ಫೈಟಿಂಗ್ ರೊಬೊಟ್.

ಎಸ್ಎಸ್‌ಐಟಿ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ರಾಜಾ ಹುಸೇನ್ ಮತ್ತು ಕೆ.ಪಿ.ಲಿಖಿತ್ ಅವರು ತಮ್ಮ ಪರಿಕಲ್ಪನೆಯಡಿ ಕೇವಲ ₹ 6 ಸಾವಿರ ಮೊತ್ತದಲ್ಲಿ ಈ ಮಾದರಿ ರೂಪಿಸಿದ್ದಾರೆ.

ಹೊಗೆ ಮಂಜು ನಿಯಂತ್ರಣ ಮತ್ತು ನಿರ್ವಹಣಾ ಘಟಕ (ಸ್ಮಾಗ್): ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದರಿಂದ ಹೊಗೆ ಮಿಶ್ರಿತ ಮಂಜು (ಸ್ಮಾಗ್) ಆವರಿಸುವುದನ್ನು ಕಂಡಿದ್ದೇವೆ. ಜನಜೀವನದ ಮೇಲೆ ಅದರ ದುಷ್ಪರಿಣಾಮಗಳು ಆಗುತ್ತಿವೆ.

ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ‘ಹೊಗೆ ಮಂಜು ನಿಯಂತ್ರಣ ಮತ್ತು ನಿರ್ವಹಣಾ ಘಟಕ’ ಮಾದರಿ ರೂಪಿಸಿದ್ದಾರೆ ಎಸ್‌ಎಸ್‌ಐಟಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಮನೋಜ್ ಎಂ.ಗೌಡ, ಬಿ. ಮಧುಕರ್, ಬಿ.ವಿ. ಜಯಪ್ರಕಾಶ್ ತಂಡದವರು.

‘ಸಂಚಾರ ದಟ್ಟಣೆ, ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇರುವ ಕಡೆ ಘಟಕ ಅಳವಡಿಸುವುದು. ಘಟಕದಲ್ಲಿ ಅಳವಡಿಸಿದ ಸೆನ್ಸರ್‌ಗಳು ವಾತಾವರಣದಲ್ಲಿನ ಹೊಗೆ ಪ್ರಮಾಣ, ತಕ್ಷಣ ನೀರು ಸಿಂಪರಣೆ ಮಾಡಿ ಅದರ ನಿಯಂತ್ರಣಕ್ಕೆ ತಕ್ಷಣ ಅನುಸರಿಸಬೇಕಾದ ಕ್ರಮಗಳು, ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಎಷ್ಟು ಎಂಬುದನ್ನು ತಿಳಿಸುತ್ತದೆ’ ಎಂದು ತಂಡದ ವಿದ್ಯಾರ್ಥಿಗಳು ವಿವರಿಸುತ್ತಾರೆ.

ಸೋಲಾರ್ ಶಕ್ತಿಯಿಂದ ಬೆಳೆಗಳಿಗೆ ನೀರು ನಿರ್ವಹಣೆ: ತೋಟದಲ್ಲಿನ ಬೆಳೆಗಳಿಗೆ ಎಷ್ಟು ಪ್ರಮಾಣದ ನೀರು ಬೇಕು? ನೀರು ಕಡಿಮೆಯಾದಾಗ ತಕ್ಷಣ ರೈತರಿಗೆ ಮೊಬೈಲ್‌ನಲ್ಲೇ ಮಾಹಿತಿ ನೀಡುವುದು, ಸರ್ಮಪಕ ನೀರು ನಿರ್ವಹಣೆ ವ್ಯವಸ್ಥೆ ಬಗ್ಗೆ ತಿಳಿಸಿಕೊಡುವಂತಹ ಮಾದರಿಯು ಪ್ರದರ್ಶನದಲ್ಲಿ ಗಮನ ಸೆಳೆಯಿತು.

ಸೋಲಾರ್ ವಿದ್ಯುತ್ ತಟ್ಟೆ ಆಧಾರಿತ, 12 ವೊಲ್ಟ್‌ ಬ್ಯಾಟರಿ ಬಳಿಸಿ ಈ ಮಾದರಿಯನ್ನು ರೂಪಿಸಿದ್ದು ಎಸ್‌ಎಸ್‌ಐಟಿ ಕಾಲೇಜಿನ ಎಚ್.ಚೈತ್ರಾ, ಎನ್.ಶ್ರೀನಿವಾಸ್ ಮತ್ತು ನಮೀರಾ.

ಹವಾಮಾನ, ಬೆಳೆಗೆ ತಗಲುವ ವಿಷಕಾರಕ ಅಂಶಗಳು, ನೀರಿನ ಕೊರತೆ, ತೇವಾಂಶ ಕುರಿತ ಮಾಹಿತಿಯನ್ನು ಈ ಮಾದರಿ ರೈತರಿಗೆ ಒದಗಿಸುತ್ತದೆ ಎಂದು ತಂಡದ ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಸೋಲಾರ್ ವಿದ್ಯುತ್ ಆಧಾರಿತ ಸ್ಮಾರ್ಟ್ ಪಾರ್ಕ್: ಇರುವ ಉದ್ಯಾನಗಳನ್ನೇ ಸಮರ್ಪಕವಾಗಿ ನಿರ್ವಹಣೆ ಮಾಡಲು ಆಗದ ಈಗಿನ ವ್ಯವಸ್ಥೆಯಲ್ಲಿ ಸೋಲಾರ್ ವಿದ್ಯುತ್ ಆಧರಿಸಿ ಅಚ್ಚುಕಟ್ಟಾಗಿ ಹೇಗೆ ನಿರ್ವಹಿಸಬಹುದು ಎಂಬ ಆವಿಷ್ಕಾರ ಮಾದರಿಯೂ ಪ್ರದರ್ಶನದಲ್ಲಿ ಇದೆ.

ಇದರ ಹೆಸರು ಸೋಲಾರ್ ಪವರ್ಡ್ ಸ್ಮಾರ್ಟ್ ಪಾರ್ಕ್. ಎಸ್‌ಎಸ್‌ಐಟಿ ಕಾಲೇಜಿನ ಸಂದೀಪ್ ಬಿರಾದಾರ್, ತಿಪ್ಪೇಸ್ವಾಮಿ, ರೇಣು ಮತ್ತು ಚೈತ್ರಾ ಎಂಬ ವಿದ್ಯಾರ್ಥಿಗಳ ತಂಡವು ಈ ಮಾದರಿ ರೂಪಿಸಿದೆ.

ಉದ್ಯಾನದಲ್ಲಿ ಸ್ವಯಂ ನಿಯಂತ್ರಿತ ವಿದ್ಯುತ್ ದೀಪಗಳು ಸೋಲಾರ್ ಆಧಾರಿತ ಸ್ವಯಂ ನಿಯಂತ್ರಿತ ವಿದ್ಯುತ್ ದೀಪಗಳು, ಆಟೊಮ್ಯಾಟಿಕ್ ಗೇಟ್ ಇದ್ದು, ಭದ್ರತಾ ಸಿಬ್ಬಂದಿ ಅಗತ್ಯವೇ ಇಲ್ಲ!

‘ಉದ್ಯಾನದಲ್ಲಿ ವಾಯುವಿಹಾರಕ್ಕೆ ಬಂದಾಗ ವೃದ್ಧರು ಸೇರಿದಂತೆ ಯಾರಿಗಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ತಕ್ಷಣ ಅಂಬುಲೆನ್ಸ್ ಬರುವುದು, ಕಿಸೆಗಳ್ಳತನ, ಅಪಹರಣ ಇನ್ನೇನಾದರೂ ಅಪರಾಧ ಕೃತ್ಯ ನಡೆದಾಗ ಪೊಲೀಸ್ ಕಂಟ್ರೋಲ್ ರೂಂಗೆ ಸಂದೇಶ ರವಾನೆಯಾಗುವುದು, ಬೆಂಕಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ಠಾಣೆಗೆ ಸಂದೇಶ ರವಾನೆಯಾಗುವ ವ್ಯವಸ್ಥೆ ಒಳಗೊಂಡಿದೆ’ ಎಂದು ತಂಡದ ವಿದ್ಯಾರ್ಥಿಗಳು ವಿವರಿಸಿದರು.


ಅದಿರಿನ ತ್ಯಾಜ್ಯದಲ್ಲಿ ರೂಪಗೊಂಡ ಸ್ಲ್ಯಾಬ್: ಕಬ್ಬಿಣ ಅದಿರಿನ ತ್ಯಾಜ್ಯ (ಕಾಸ್ಟ್ ಐರನ್ ಸ್ಲ್ಯಾಗ್) ಮತ್ತು ಎಂ. ಸ್ಯಾಂಡ್ ಬಳಸಿ ಪರಿಸರ ಸ್ನೇಹಿ ಮತ್ತು ಕಡಿಮೆ ಭಾರದ ಸ್ಲ್ಯಾಬ್ ನಿರ್ಮಾಣ ಆವಿಷ್ಕಾರ ಮಾದರಿಯನ್ನು ಎಸ್‌ಎಸ್‌ಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಯರಾದ ಡಿ.ಪಿ.ವಿನುತಾ, ಮಾನಸಾ, ನವೀನ್, ಬಸವರಾಜ್ ಚಿಂಚೋಳಿ ತಂಡದವರು ರೂಪಿಸಿದ್ದಾರೆ.

‘ಇದು ಅತ್ಯಂತ ಕಡಿಮೆ ಭಾರದ, ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಸ್ಲ್ಯಾಬ್. ವಾಹನ ನಿಲುಗಡೆ ಸ್ಥಳ, ಫುಟ್ ಪಾತ್, ಚಾವಣಿಗೆ, ಉದ್ಯಾನಗಳಲ್ಲಿ, ಮನೆ ಆವರಣಗಳಲ್ಲಿ ಬಳಸಬಹುದು. ಇದರ ವಿಶೇಷವೆಂದರೆ ಮಳೆ ನೀರು ಬಿದ್ದಾಗ ಹರಿದು ಹೋಗಲ್ಲ. ಅಲ್ಲಿಯೇ ಇಂಗಿಕೊಳ್ಳುತ್ತದೆ’ ಎಂದು ತಂಡದವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT