ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಎನ್.ಹೊಸಕೋಟೆ: ಸ್ಥಳೀಯ ಸಂಸ್ಥೆ ಅಧಿಕಾರಕ್ಕೆ ಕಸರ‌ತ್ತು

ಗ್ರಾಮಪಂಚಾಯಿತಿಗೆ ಮಾರ್ಚ್‌ 29ರಂದು ಚುನಾವಣೆ
Last Updated 14 ಮಾರ್ಚ್ 2021, 5:05 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಗ್ರಾಮಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಒಟ್ಟು 8 ವಾರ್ಡುಗಳಿಂದ 32 ಸದಸ್ಯರ ಸಂಖ್ಯಾ ಬಲವಿದೆ. 9,139 ಮತದಾರರಿದ್ದು, 11 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಹಿಂದಿನ ಚುನಾವಣೆಯಲ್ಲಿ ಪಕ್ಷದ ಆಂತರಿಕ ಸಮಸ್ಯೆಯಿಂದ ಅಧಿಕಾರದ ಅವಕಾಶ ಕಳೆದುಕೊಂಡಿದ್ದ ಜೆಡಿಎಸ್ ಬೆಂಬಲಿತರು ಈ ಬಾರಿ ಅಧಿಕಾರ ಪಡೆಯುವ ವಿಶ್ವಾಸದಲ್ಲಿದ್ದಾರೆ. ಪಕ್ಷದಲ್ಲಿಯೇ ಪೈಪೋಟಿ ಇದೆ. ಕಾಂಗ್ರೆಸ್ ಬೆಂಬಲಿತರು ಇದುವರೆಗಿನ ಗ್ರಾಮಾಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಅಧಿಕಾರ ಪಡೆಯಲು ಶ್ರಮಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಖಾತೆ ತೆರೆದಿದ್ದ ಬಿಜೆಪಿ ಬೆಂಬಲಿತರು ಕನಿಷ್ಠ 10 ಸ್ಥಾನಗಳನ್ನಾದರೂ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.

ಅಧ್ಯಕ್ಷ ಸ್ಥಾನದ ಮೀಸಲಾತಿ ಅನುಸೂಚಿತ ಪಂಗಡದ ಮಹಿಳೆಗೆ ಘೋಷಣೆಯಾಗಿರುವುದರಿಂದ ಪೈಪೋಟಿ ಬಿರುಸಾಗಿದೆ. ಅಧ್ಯಕ್ಷಗಾದಿಗೇರುವ ಇಚ್ಛೆ ಇರುವವರು ಇತರೆ ವರ್ಗದ ಅಭ್ಯರ್ಥಿಗಳ ಖರ್ಚನ್ನೂ ಭರಿಸುವ ಉತ್ಸಾಹದಲ್ಲಿದ್ದಾರೆ.

5,219 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ 2011ರ ಗಣತಿಯಂತೆ 12,593 ಜನಸಂಖ್ಯೆ ಇದೆ. ಮನೆ ಕಂದಾಯ, ಕಟ್ಟಡಗಳ ಬಾಡಿಗೆ, ನೀರಿನ ಕರ, ಸಂತೆ, ಪ್ರತಿದಿನ ಮಾರುಕಟ್ಟೆ ಮತ್ತು ಹುಣಸೇಮರ ಹರಾಜು, ಪರವಾನಗಿ ಇನ್ನಿತರ ಸ್ಥಳೀಯ ಆದಾಯ ಹಾಗೂ ಸರ್ಕಾರಿ ಅನುದಾನ ಸೇರಿ ₹1 ಕೋಟಿ ವಾರ್ಷಿಕ ಆದಾಯವಿದೆ. 32 ಸಿಬ್ಬಂದಿ ಇದ್ದಾರೆ.

ಪಟ್ಟಣದಲ್ಲಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ಸ್ಥಳಾವಕಾಶ ದೊರೆಯುತ್ತಿಲ್ಲ. ರಿಯಲ್ ಎಸ್ಟೇಟ್ ದಂದೆಯಿಂದಾಗಿ ಸಾಮಾನ್ಯರಿಗೆ ನಿವೇಶನ ಖರೀದಿಗೆ ಸಾಧ್ಯವಾಗುತ್ತಿಲ್ಲ. ಅಕ್ರಮ ನಲ್ಲಿಗಳ ಸಮಸ್ಯೆ, ಅಸಮರ್ಪಕ ನೀರು ಪೂರೈಕೆ ಮತ್ತು ಕಸ ವಿಲೇವಾರಿ, ಚರಂಡಿ ಹಾಗೂ ರಸ್ತೆಗಳ ಒತ್ತುವರಿ, ಪಂಚಾಯಿತಿ ಸ್ಥಳ ಕಬಳಿಕೆ, ಕಚೇರಿ ಭ್ರಷ್ಟಾಚಾರ, ಅನುದಾನ ದುರ್ಬಳಕೆಯಂತಹ ಅನೇಕ ಸಮಸ್ಯೆಗಳಿವೆ. ಅವುಗಳ ನಿವಾರಣೆಗೆ ಒತ್ತು ನೀಡುವ ಸಮರ್ಥ ಸದಸ್ಯರ ಆಯ್ಕೆಯಾಗಬೇಕಿದೆ ಎನ್ನುತ್ತಾರೆ ಗ್ರಾಮದ ಮುಖಂಡರಾದ ದುಗ್ಗಿ ವೆಂಕಟೇಶ್, ಯರ್ರಪ್ಪ, ಪಿ.ನಂದೀಶ್.

ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ತಾಲ್ಲೂಕು ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ. ಗ್ರಾಮದಲ್ಲಿ ಸರ್ಕಾರಿ ವಿಜ್ಞಾನ ಪದವಿ ಪೂರ್ವ ಮತ್ತು ಪದವಿ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜು, ವಸತಿ ನಿಲಯ, ಕ್ರೀಡಾಂಗಣ, ನೇಕಾರಿಕೆ ಕ್ಲಸ್ಟರ್ ಸ್ಥಾಪನೆ, ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು, ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸುವುದು, ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸುವ ಬಗ್ಗೆ ನೂತನವಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರಾದ ಪಿ.ಬಿ.ವಿಶ್ವನಾಥ, ಜಿ.ಎಲ್.ಸೋಮಣ್ಣ, ಬದರಿನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT