ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿಲ್ಲದಿದ್ದರೆ ಕಡೆಗಣಿಸುವ ಅಪಾಯ

ಜಿಲ್ಲಾ ಮಟ್ಟದ ಭೋವಿ ಸಮಾಜದ ಸಮಾವೇಶದಲ್ಲಿ ಸಚಿವ ಅರವಿಂದ ಲಿಂಬಾವಳಿ ಅಭಿಮತ
Last Updated 21 ಫೆಬ್ರುವರಿ 2021, 16:18 IST
ಅಕ್ಷರ ಗಾತ್ರ

ತುಮಕೂರು: ‘ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಇತರೆ ಸಮಾಜದವರು ಹಾಗೂ ಸರ್ಕಾರಗಳು ನಮ್ಮನ್ನು
ಕಡೆಗಣಿಸುವ ಅಪಾಯ ಇದೆ. ಒಗ್ಗೂಡಿದರೆ ಸಾಧನೆ ಸಾಧ್ಯ. ಸಂಘಟನೆ ಮೂಲಕ ಸಮಾಜದ ಶಕ್ತಿ ಹೆಚ್ಚಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನಗರದ ಗಾಜಿನ ಮನೆಯಲ್ಲಿ ನಡೆದ ಜಿಲ್ಲಾ ಮಟ್ಟದ ಭೋವಿ ಸಮಾಜದ ಸಮಾವೇಶ, ಗುರುಸಿದ್ದರಾಮೇಶ್ವರ ಜಯಂತಿ ಹಾಗೂ ಜಿಲ್ಲೆಯ ಭೋವಿ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸಮಾಜದಲ್ಲಿ ಒಗ್ಗಟ್ಟಿರಲಿಲ್ಲ. ಆದರೆ ಈಗ ಜಾಗೃತಿ ಮೂಡುತ್ತಿದೆ. ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದಲೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಯುವ ಸಮುದಾಯ ಈ ದಿಕ್ಕಿನಲ್ಲಿ ಕಾರ್ಯೋನ್ಮುಖ ಆಗಬೇಕು ಎಂದು ಸಲಹೆ ನೀಡಿದರು.

ಸಮಾಜದವರು ಸಂಘಗಳನ್ನು ರಚಿಸಿಕೊಂಡು ಕಲ್ಲು ಒಡೆಯುವ ಕೆಲಸ ಮಾಡಬೇಕು. ಭೋವಿ ಸಮಾಜದವರ ಕಲ್ಲು ಒಡೆಯುವ ಕುಲಕಸುಬಿನ ತೊಂದರೆ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ ಕೆಲವೆಡೆ ಅಡ್ಡಿ ಮಾಡಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ಭೋವಿಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ , ಕಲ್ಲು ಒಡೆಯುವುದು ಭೋವಿ ಸಮಾಜದ ಕುಲಕಸುಬು. ಇದಕ್ಕೆ ಯಂತ್ರಗಳು ಪ್ರತಿಸ್ಪರ್ಧಿ ಆಗಿವೆ. ಸಾವಿರ ಜನ ಮಾಡುವ ಕೆಲಸವನ್ನು ಕ್ಷಣದಲ್ಲಿ ಮಾಡುತ್ತವೆ. ಹೀಗಿದ್ದಾಗ ಕುಲಕಸುಬು ನಂಬಿ ಬದುಕು ನಡೆಸುವುದು ಕಷ್ಟ ಎಂದು ಹೇಳಿದರು.

ಶಿಕ್ಷಣ ಪಡೆದವರು ಉದ್ಯೋಗ ಹುಡುಕುವ ಬದಲು ಸ್ವ ಉದ್ಯೋಗ ಮಾಡಿ. ಇತರರಿಗೂ ಉದ್ಯೋಗ ನೀಡಿ. ಭೋವಿ ಸಮಾಜ ಮುಗ್ದ ಸಮಾಜ. ಹೆಚ್ಚು ಧಾರ್ಮಿಕ ಶೋಷಣೆಗೆ ಒಳಗಾಗುತ್ತಿರುವ ಸಮಾಜ. ವೈಚಾರಿಕತೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿ
ಯರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮೇಶ್ವರರ ವಚನಗಳನ್ನು ಸಮಾಜದವರು ಅಧ್ಯಯನ ಮಾಡಬೇಕು. ಸಾಮಾಜಿಕ, ಧಾರ್ಮಿಕ ಸುಧಾರಣೆಗೆ ಶಿಕ್ಷಣ ಅಡಿಪಾಯ ಆಗುತ್ತದೆ. ಸಿದ್ದರಾಮೇಶ್ವರರ ಜಯಂತಿಮೂಲಕ ಸಮಾಜವನ್ನು ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡ, ರಾಷ್ಟ್ರೀಯ ಭೋವಿ ಪರಿಷತ್ ಅಧ್ಯಕ್ಷ ಎಚ್.ರವಿ ಮಾಕಳಿ, ರಾಜ್ಯ ಅಧ್ಯಕ್ಷ ಆನಂದಪ್ಪ, ಜಿಲ್ಲಾ ಅಧ್ಯಕ್ಷ ಓಂಕಾರ್, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಉಮೇಶ್, ಮುಖಂಡರಾದ ಮುನಿರಾಜು, ಮುನಿಯಪ್ಪ, ಪೆದ್ದರಾಜು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಟೌನ್‌ಹಾಲ್ ವೃತ್ತದಿಂದ ‌ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಸಮುದಾಯದ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT