ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹೇಳುವುದೇ ಸುಲಭ: ನ್ಯಾಯಾಧೀಶ

Published 5 ಡಿಸೆಂಬರ್ 2023, 6:48 IST
Last Updated 5 ಡಿಸೆಂಬರ್ 2023, 6:48 IST
ಅಕ್ಷರ ಗಾತ್ರ

ತುಮಕೂರು: ಜೀವನದಲ್ಲಿ ಸತ್ಯ ಹೇಳುವುದು ಸುಲಭ. ಸುಳ್ಳು ಹೇಳುವುದು ಕಷ್ಟ. ಒಮ್ಮೆ ಸುಳ್ಳು ಹೇಳಿದರೆ, ಅದನ್ನು ಮುಚ್ಚಿ ಹಾಕಲು ಒಂದರ ಮೇಲೊಂದು ಸುಳ್ಳು ಹೇಳುತ್ತಲೇ ಹೋಗಬೇಕಾಗುತ್ತದೆ. ಮಕ್ಕಳು ಸತ್ಯ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಬಿ.ಜಯಂತಕುಮಾರ್ ಸಲಹೆ ಮಾಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆಗಳ ಸೊಸೈಟಿ, ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಪ್ರಚಲಿತದಲ್ಲಿರುವ ಕಾನೂನುಗಳ ಬಗ್ಗೆ ಅರಿವಿರಬೇಕು. ಅದನ್ನು ಬೇರೆಯವರಿಗೂ ತಿಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ದೂರ ಮಾಡಲು ಸಾಧ್ಯ. ಬಾಲ ಕಾರ್ಮಿಕರನ್ನು ಕಂಡಾಗ ಅವರಿಗೆ ತಿಳಿವಳಿಕೆ ನೀಡಿ, ಅವರು ಸಹ ವಿದ್ಯಾವಂತರಾಗಲು ಇರುವ ಅವಕಾಶಗಳ ಬಗ್ಗೆ ತಿಳಿಸಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ‘16 ವರ್ಷದ ಒಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದರೆ 2 ವರ್ಷಗಳ ವರೆಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ದುಡಿಯುವ ವರ್ಗ ತನ್ನ ಮಕ್ಕಳ ಜತೆಗೆ, ವಯಸ್ಕರನ್ನು ನೋಡಿಕೊಳ್ಳುವ ಗುರುತರ ಜವಾಬ್ದಾರಿ ಇದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನಿಸಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ತೇಜಾವತಿ, ಕಾರ್ಮಿಕ ನಿರೀಕ್ಷಕ ನಾಗಭೂಷಣ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT