ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅವ್ಯವಸ್ಥೆಯ ತಾಣವಾದ ಹಾಸ್ಟೆಲ್‌

ಅಗತ್ಯ ಸೌಲಭ್ಯಗಳ ಕೊರತೆ;
Published 23 ಮೇ 2024, 4:24 IST
Last Updated 23 ಮೇ 2024, 4:24 IST
ಅಕ್ಷರ ಗಾತ್ರ

ತುಮಕೂರು: ನಗರದ ವೀರಸಾಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆ ತಾಣವಾಗಿದ್ದು, ಸ್ವಚ್ಛತೆ ಇಲ್ಲದೆ, ಅಗತ್ಯ ಸೌಲಭ್ಯ ಸಿಗದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಪ್ರಸ್ತುತ ಹಾಸ್ಟೆಲ್‌ನಲ್ಲಿ 200 ವಿದ್ಯಾರ್ಥಿಗಳಿದ್ದಾರೆ. ಬಿಇಡಿ, ಬಿಕಾಂ, ಎಂಕಾಂ ಸೇರಿದಂತೆ ಇತರೆ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಈ ಹಿಂದೆ ಎಸ್‌.ಎಸ್‌.ಪುರಂನಲ್ಲಿ ನಡೆಯುತ್ತಿದ್ದ ಹಾಸ್ಟೆಲ್‌ಅನ್ನು ಕೆಲವು ವರ್ಷಗಳ ಹಿಂದೆ ವೀರಸಾಗರಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಕಟ್ಟಡ ನಿರ್ಮಿಸಿ, ಉದ್ಘಾಟನೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಬೆಳವಣಿಗೆಯಾಗಿಲ್ಲ. ನಿರ್ವಹಣೆಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿಲ್ಲ.

ಹಲವು ತಿಂಗಳುಗಳಿಂದ ಹಾಸ್ಟೆಲ್‌ನ ಶೌಚಾಲಯ ಸ್ವಚ್ಛಗೊಳಿಸಿಲ್ಲ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿಯೇ ದಿನ ದೂಡುತ್ತಿದ್ದಾರೆ. ಈ ಪರಿಸ್ಥಿತಿ ಕಂಡು ಕೆಲವರು ತಮ್ಮ ಮನೆಗಳಿಗೆ ವಾಪಸ್‌ ಹೋಗಿದ್ದಾರೆ. ದೂರದ ಊರುಗಳಿಂದ ಬಂದವರು ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ.

ನಿಲಯ ಪಾಲಕರು ಎರಡು ಹಾಸ್ಟೆಲ್‌ಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜೀವ್‌ಗಾಂಧಿ ಹಾಸ್ಟೆಲ್‌ ನಿರ್ವಹಣೆಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಎಂಬಂತೆ ಇಲ್ಲಿಗೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳ ಕಷ್ಟ ಆಲಿಸುವವರು ಇಲ್ಲದಂತಾಗಿದೆ. ಇದರಿಂದ ಹಾಸ್ಟೆಲ್‌ ಸಮಸ್ಯೆ ಕೊನೆಯಾಗದೆ ಮತ್ತಷ್ಟು ಆಳವಾಗಿ ಬೇರೂರಿದೆ.

‘ವಿದ್ಯಾರ್ಥಿ ನಿಲಯದಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಉಪ್ಪು, ಖಾರ, ರುಚಿ ಇಲ್ಲದ ಆಹಾರ ನೀಡುತ್ತಿದ್ದಾರೆ. ಮೆನು ಪ್ರಕಾರ ಅಡುಗೆ ಮಾಡುತ್ತಿಲ್ಲ. ನಗರದಿಂದ ಹೊರಗೆ ಹಾಸ್ಟೆಲ್‌ ಇರುವುದರಿಂದ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯ ಕಚೇರಿ ಬಳಿಗೆ ಹೋಗಿ ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಮಾತ್ರ ಒಂದೆರಡು ದಿನ ಸರಿಯಾಗಿರುತ್ತದೆ. ನಂತರ ಮತ್ತೆ ಯಥಾಸ್ಥಿತಿಗೆ ಬರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರಸಾಗರದ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ನ ಶೌಚಾಲಯದಲ್ಲಿ ತ್ಯಾಜ್ಯ
ವೀರಸಾಗರದ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ನ ಶೌಚಾಲಯದಲ್ಲಿ ತ್ಯಾಜ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT