ಶುಕ್ರವಾರ, ನವೆಂಬರ್ 15, 2019
20 °C
ಬಿಜಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌

ತುಮಕೂರು: ಖಾಸಗಿ ಬಸ್‌ಗೆ ಬೆಂಕಿ, 6  ಮಂದಿಗೆ ಗಾಯ

Published:
Updated:

ಕೋರ (ತುಮಕೂರು ತಾ.): ರಾಷ್ಟ್ರೀಯ ಹೆದ್ದಾರಿ– 4ರಲ್ಲಿ ಊರುಕೆರೆ ಬಳಿ ರಾಯಲ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್‌ಗೆ ಶನಿವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ.

ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ವಿಜಯಪುರದ ಮೂಲದ ನೀಲಮ್ಮ ಎಂಬುವರು ತಮ್ಮ ಸೀಟಿನ ಕೆಳಗಡೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಕಿರುಚಾಡಿದ್ದಾರೆ. ಅವರ ಕಿರುಚಾಟಕ್ಕೆ ಬಸ್‌ನಲ್ಲಿದ್ದ  30ಕ್ಕೂ ಹೆಚ್ಚು ಪ್ರಯಾಣಿಕರು ಎಚ್ಚೆತ್ತು ಬಸ್‌ನಿಂದ ಇಳಿದು, ಜಿಗಿದು ದುರಂತದಿಂದ ಪಾರಾಗಿದ್ದಾರೆ.

‘ಅಪಾಯದಿಂದ ಪಾರಾಗುವ ವೇಳೆ ಯಾದಗಿರಿ ಜಿಲ್ಲೆಯ ಹುಣಸಗಿಯ ಪ್ರಸಾದ್, ಕೆಂಭಾವಿಯ ಅಯೂಬಿ, ವಿಜಯಪುರ ಜಿಲ್ಲೆ ತಾಳಿಕೋಟೆಯ ತೌಸಿಫ್, ಮೆಹಬೂಬ್, ಶಬ್ಬೀರ್ ಮತ್ತು ದಿಲೀಪ್ ಎಂಬುವರು ಗಾಯಗೊಂಡಿದ್ದಾರೆ. ನೀಲಮ್ಮ ಅವರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಡಿವೈಎಸ್ಪಿ ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರುವಬಹುದು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದರು.

ಬಿಜಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಯಲ್ ಟ್ರಾನ್ಸ್ ಪೋರ್ಟ್ ಬಸ್‌ನಲ್ಲಿ ಒಟ್ಟು ಮೂವತ್ತು ಜನ ಪ್ರಯಾಣ ಬೆಳೆಸುತ್ತಿದ್ದರು.

ನಾನು ಮಲಗಿದ್ದೆ. ಬಸ್ ಮೂಲೆ ಸೀಟಿನಲ್ಲಿ ಕುಳಿತಿದ್ದ ಮಹಿಳೆಗೆ ಬೆಂಕಿ ಹೊತ್ತಿಕೊಂಡು ಕಿರುಚಾಡುತ್ತಿದ್ದಾಗ ಎಚ್ಚರವಾಯಿತು. ಬೆಂಕಿ ಬಸ್ ಕಿಟಕಿಗೆ ಅಳವಡಿಸಿದ್ದ ಕರ್ಟನ್‌ಗಳಿಗೆ ಹರಡಿ ಕ್ಷಣಮಾತ್ರದಲ್ಲಿ ವ್ಯಾಪಿಸಿತು. ಗಾಬರಿಯಿಂದ ಬಸ್ ಕಿಟಕಿಯಿಂದ ರಸ್ತೆಗೆ ಜಿಗಿದ ರಭಸಕ್ಕೆ ಕಾಲು ಮುರಿದಿದೆ. ರಾಯಲ್ಸ್ ಟ್ರಾವಲ್ಸ್ ಮಾಲೀಕರು ಇಲ್ಲಿಯವರೆಗೂ ಬಂದು ಯಾರನ್ನೂ ವಿಚಾರಿಸಿಲ್ಲ ಎಂಬುದು ಹುಣಸಗಿಯ ಪ್ರಸಾದ್ ಅವರ ನೋವಿನ ಮಾತು. 

ಗ್ರಾಮಾಂತರ ಸಿಪಿಐ ಬಿ.ಬಿ ಮಧುಸೂಧನ್ ಹಾಗೂ ಪಿಎಸ್ಐ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರತಿಕ್ರಿಯಿಸಿ (+)