ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ತುಮಕೂರಿನಲ್ಲಿ ತಗ್ಗಿದ ಮಾಲಿನ್ಯ

ಮಾಲಿನ್ಯಕಾರಕ ಕಣಗಳ ಪ್ರಮಾಣ ಇಳಿಕೆ; ಹಕ್ಕಿಗಳ ಚಿಲಿಪಿಲಿ ಹೆಚ್ಚಳ
Last Updated 1 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕು ಹರಡುವುದನ್ನು ಹತೋಟಿಗೆ ತರಲು ಜಾರಿ ಮಾಡಿರುವ ಲಾಕ್‌ಡೌನ್ ನಗರದಲ್ಲಿನ ಮಾಲಿನ್ಯ ಪ್ರಮಾಣವನ್ನು ‘ಫುಲ್‌ ಡೌನ್‌’ ಮಾಡಿದೆ.

ನಗರದಲ್ಲಿನ ವಾಹನ ಸಂಚಾರ ದ ಹೊಗೆ, ಸ್ಮಾರ್ಟ್‌ ಸಿಟಿಯ ಕಾಮಗಾರಿಗಳಿಂದ ಏಳುತ್ತಿದ್ದ ದೂಳು ಈಗ ಇಲ್ಲವಾಗಿದೆ. ಇದರಿಂದಾಗಿ ನಗರದಲ್ಲಿ ಸೂಸುವ ಗಾಳಿಯು ಮತ್ತಷ್ಟು ಪರಿಶುದ್ಧವಾಗಿದೆ.

ಬಂದ್‌ನಿಂದಾಗಿ ಮಾಲಿನ್ಯಕಾರಕ ಕಣಗಳ (ಪಾರ್ಟಿಕ್ಯುಲೇಟ್ ಮ್ಯಾಟರ್) ಪ್ರಮಾಣ ತೀರಾ ಕಡಿಮೆ ಆಗಿದೆ.
10 ಮೈಕ್ರೋಮೀಟರ್ ಹಾಗೂ ಅದಕ್ಕಿಂತ ಕಡಿಮೆ ವ್ಯಾಸವುಳ್ಳ ಅಂಶಗಳು (ಪಿ.ಎಂ 10), ದೇಹದೊಳಗೆ ಉಸಿರಾಟದ ಮೂಲಕ ಹೋಗಬಹುದಾದ ಸೂಕ್ಷ್ಮ ಕಣಗಳ (ಪಿ.ಎಂ 2.5) ಪ್ರಮಾಣ ಸಹ ವಾತಾವರಣದಲ್ಲಿ ಗಣನೀಯವಾಗಿ ತಗ್ಗಿದೆ. ಉಸಿರಾಟದ ಕಾಯಿಲೆಗಳನ್ನು ತರಬಹುದಾದ ಕಾರ್ಬನ್‌ ಡೈ ಆಕ್ಸೈಡ್‌, ಕಾರ್ಬನ್‌ ಮೊನಾಕ್ಸೈಡ್‌, ನೈಟ್ರೋಜನ್‌ ಡೈ ಆಕ್ಸೈಡ್‌ ಸಹ ನಗರ ಪರಿಸರದಿಂದ ಬಹುತೇಕ ಮರೆಯಾಗಿವೆ.

ಹೆದ್ದಾರಿಯಲ್ಲಿ ಹಕ್ಕಿಗಳ ಚಿಲಿಪಿಲಿ: ನಗರದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಭಾರಿ ವಾಹನಗಳ ಸದ್ದು, ಹಾರ್ನ್‌ಗಳ ಶಬ್ದ ಈಗ ಕೇಳುತ್ತಿಲ್ಲ. ಬೆಳ್ಳಂಬೆಳಗ್ಗೆ ಕಿವಿಗೊಟ್ಟು ಕೇಳಿದರೆ, ಹೆದ್ದಾರಿಯಲ್ಲಿಯೂ ಈಗ ಹಕ್ಕಿಗಳ ಚಿಲಿಪಿಲಿಯ ಸುಮಧುರ ನಾದ ಕರ್ಣಾನಂದ ನೀಡುತ್ತಿದೆ.

ಸಂಜೆ ವೇಳೆ ಬಾನಂಗಳದತ್ತ ದೃಷ್ಟಿ ಹಾರಿಸಿದರೆ, ನೂರಾರು ಪಕ್ಷಿಗಳ ಸ್ವಚ್ಛಂದ ಹಾರಾಟ ಕಣ್ಮನ ಸೆಳೆಯುತ್ತಿದೆ. ಸೃಷ್ಟಿಸಲಾಗಿರುವ ಈ ಬಲವಂತದನಿಶಬ್ದ ವಾತಾವರಣ, ಪಕ್ಷಿಗಳ ಆವಾಸಕ್ಕೂ ಅನುಕೂಲ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT