ಭಾನುವಾರ, ಸೆಪ್ಟೆಂಬರ್ 22, 2019
27 °C
ಉದ್ಘಾಟನೆ ನಂತರ ಒಮ್ಮೆಯೂ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದ ಕಟ್ಟಡ

ಸಾಮರ್ಥ್ಯ ಕಳೆದುಕೊಂಡ ತುಮಕೂರು ‘ಸೌಧ’

Published:
Updated:
Prajavani

ಕೊರಟಗೆರೆ: ಪಟ್ಟಣದ ಹೃದಯ ಭಾಗದಲ್ಲಿ 2011-12 ಸಾಲಿನಲ್ಲಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾಮರ್ಥ್ಯ ಸೌಧ ನಿರ್ವಹಣೆ ಕೊರತೆಯಿಂದ ದಿನೇ ದಿನೇ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ.

ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತು ತರಬೇತಿ ನೀಡುವ ಉದ್ದೇಶದಿಂದ ನಿರ್ಮಾಣವಾದ ಈ ಸೌಧಕ್ಕೆ ಉದ್ಘಾಟನೆಗೊಂಡ ನಂತರ ಹಾಕಿದ ಬೀಗ ಇಲ್ಲಿವರೆಗೂ ತೆರೆದಿಲ್ಲ. ಉದ್ದೇಶಿತ ಕಾರ್ಯಕ್ಕೆ ಕಟ್ಟಡ ಬಳಕೆಯಾಗಿಲ್ಲ.

ಸದ್ಯ ತಾಲ್ಲೂಕು ಪಂಚಾಯಿತಿಯಲ್ಲಿನ ನಿರುಪಯುಕ್ತ ವಸ್ತುಗಳನ್ನು ತುಂಬುವ ಗೋದಾಮಾಗಿ ಪರಿವರ್ತನೆಯಾಗಿದೆ. ಕಟ್ಟಡದ ಕೆಲವು ಕೊಠಡಿಗಳಿಗೆ ಬೀಗ ಹಾಕದ ಕಾರಣ ಅನೈತಿಕ ಚಟುವಟಿಕೆ ತಾಣವೂ ಆಗಿದೆ. ಕಟ್ಟಡ ಬಳಕೆಯಾಗದ ಕಾರಣ ಕಿಟಕಿ, ಬಾಗಿಲುಗಳು ಕಿಡಿಗೇಡಿಗಳ ಪುಂಡಾಟಿಕೆಗೆ ಬಲಿಯಾಗಿವೆ. ಮಳೆ ನೀರು ಕಟ್ಟಡದ ತುಂಬ ನಿಲ್ಲುವಂತಾಗಿದೆ.

ತರಬೇತಿ ನಡೆಯುತ್ತಿದೆ ಎಂಬುದನ್ನು ತೋರಿಸಲು ಹಳೆಯದೊಂದು ಟಿ.ವಿ. ಹಾಗೂ ಮುರಿದ ಚೇರುಗಳನ್ನು ಇಟ್ಟು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕಣ್ಣು ಒರೆಸುವ ಕೆಲಸ ಮಾಡಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

ಭೂತ ಬಂಗಲೆಯಲ್ಲಿನಂತೆ ಬೃಹದಾಕಾರವಾಗಿ ಕಟ್ಟಿರುವ ಹಾಸು, ನೆಲದ ಮೇಲೆ ಚಿಂದಿಯಾಗಿ ಬಿದ್ದಿರುವ ಹಳೇ ಕಾಗದದ ಚೂರು, ಕಾಲಿಟ್ಟಾಕ್ಷಣ ಏಳುವ ದೂಳು ಸಾಮರ್ಥ್ಯ ಸೌಧದ ಅಸಾಮರ್ಥ್ಯಕ್ಕೆ ಸಾಕ್ಷಿಯಂತಿದೆ.

ಕಟ್ಟಡ ನಿರ್ಮಾಣವಾದ ನಂತರ ಅಗತ್ಯ ಪೀಠೋಪಕರಣ ಖರೀದಿಗಾಗಿ ಬಿಡುಗಡೆಯಾಗಿದ್ದ ₹ 1.82 ಲಕ್ಷ ವಾಪಸ್ಸಾಗಿದೆ. ಕಟ್ಟಡ ಒಂದು ದಿನ ಬಳಕೆಯಾಗದಿದ್ದರೂ 2016ರಲ್ಲಿ ದುರಸ್ತಿಗಾಗಿ ₹ 50 ಸಾವಿರ ಬಿಡುಗಡೆಯಾಗಿದೆ. ದುರಸ್ತಿಯಾಗದಿದ್ದರೂ ಹಣ ಮಾತ್ರ ಖರ್ಚಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಕಟ್ಟಡ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗುವಂತೆ ನಿಗಾವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

Post Comments (+)