ಕಲ್ಲು ಗಣಿಗಾರಿಕೆ: ಅನ್ನದ ಮೇಲೆ ದೂಳು

7
ಉಪಮುಖ್ಯಮಂತ್ರಿ ಮಾತಿಗೂ ಕಿಮ್ಮತ್ತು ನೀಡದ ಅಧಿಕಾರಿಗಳು

ಕಲ್ಲು ಗಣಿಗಾರಿಕೆ: ಅನ್ನದ ಮೇಲೆ ದೂಳು

Published:
Updated:
Prajavani

ತೋವಿನಕೆರೆ: ತಟ್ಟೆಯಲ್ಲಿ ಅನ್ನ ಹಾಕಿಕೊಂಡು ತಿನ್ನಬೇಕು ಎನ್ನುವಷ್ಟರಲ್ಲಿ ಕಲ್ಲಿನ ಪುಡಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯಿಂದ ಎದ್ದ ದೂಳು ಅನ್ನದ ತಟ್ಟೆಯಲ್ಲಿತ್ತು. ಅನ್ನ ತಿನ್ನಲೂ ಆಗದೆ, ಬಿಸಾಡಲು ಆಗದ ಸ್ಥಿತಿ!

ತೋವಿನಕೆರೆ- ನೆಲಹಾಳ್ ರಸ್ತೆಯಲ್ಲಿ ಅನೇಕ ತಿಂಗಳಿನಿಂದ ನಿತ್ಯ ಕಂಡು ಬರುತ್ತಿರುವ ದೃಶ್ಯವಿದು. 

ಚನ್ನರಾಯನ ದುರ್ಗ ಹೋಬಳಿ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಕ್ಕೆಗುಟ್ಟೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬಂಡೆಗಳಿಗೆ ಮದ್ದುಗಳನ್ನು ಇಟ್ಟು ಸಿಡಿಸಲಾಗುತ್ತಿದೆ. ಪ್ರತಿ ದಿನ ನೂರಾರು ಲಾರಿಗಳು ಕಲ್ಲು ಪುಡಿ ತುಂಬಿಕೊಂಡು ತೋವಿನಕೆರೆ ಮೂಲಕ ದೂಳು ಎಬ್ಬಿಸಿಕೊಂಡು ಸಾಗುತ್ತವೆ. ಈ ಗಣಿಗಾರಿಕೆಯಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಒಂದೆರಡಲ್ಲ. ಜನ– ಜಾನುವಾರು, ಬೆಳೆಗಳ ಮೇಲೆ, ಕಡೆಗೆ ತಿನ್ನುವ ಅನ್ನದ ಮೇಲು ದುಷ್ಪರಿಣಾಮ ಬೀರುತ್ತಿದೆ.

ಈ ರಸ್ತೆಯಲ್ಲಿ ನಿತ್ಯ ವಿಪರೀತವಾಗಿ ಲಾರಿಗಳು ಕಲ್ಲಿನ ಪುಡಿ ತುಂಬಿಕೊಂಡು ಓಡಾಡುತ್ತವೆ. ಲಾರಿಗಳು ಸಾಗುವ ಸಮಯದಲ್ಲಿ ಎದ್ದ ದೂಳು ರಸ್ತೆ ಅಕ್ಕ ಪಕ್ಕದ ಅಂಗಡಿಗಳು, ಹೋಟೆಲ್‌ಗಳು ಮತ್ತು ಮನೆಗೆ ನುಗ್ಗುತ್ತದೆ. ದೂಳು ಮಿಶ್ರಿತ ಆಹಾರ ತಿನ್ನಲಾಗದ ಸ್ಥಿತಿ ಜನರದ್ದು. ರಸ್ತೆ ಬದಿ ವರ್ತಕರು ದೂಳು ಮಿಶ್ರಿತ ಗಾಳಿ ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಜೋನಿಗರಹಳ್ಳಿ ಪ್ರಾಥಮಿಕ ಶಾಲೆ ರಸ್ತೆ ಪಕ್ಕದಲ್ಲಿದೆ. ಶಾಲೆ ಬಿಡುವ ಸಮಯದಲ್ಲಿ ನಿಧಾನವಾಗಿ ಹೋಗುವ ಮನಸ್ಥಿತಿಯಲ್ಲಿ ಲಾರಿ ಚಾಲಕರು ಇರುವುದಿಲ್ಲ. ಯಾವ ಸಮಯದಲ್ಲಿ ಏನು ಆಗುತ್ತದೋ ಎನ್ನುವ ಭಯದಲ್ಲಿ ಪೋಷಕರು ದಿನ ನೂಕುತ್ತಿದ್ದಾರೆ.

‘ತೋವಿನಕೆರೆ ಬಸ್ ನಿಲ್ದಾಣದಲ್ಲಿರುವ ಹೋಟೆಲ್‌ಗಳ ವರ್ತಕರು, ರಸ್ತೆಗೆ ಹೊಂದಿಕೊಂಡಿರುವ ಶಾಂತಿ ನಗರದ ಮನೆಗಳಲ್ಲಿನ ಮಾಲೀಕರು ಅನೇಕ ಸಲ ಲಾರಿಗಳನ್ನು ತಡೆದು ಪ್ರತಿಭಟಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಪೊಲೀಸ್, ಆರ್‌ಟಿಒ ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳುತ್ತವೆ ಎಂದು ಭರವಸೆ ನೀಡಿದರೆ ಹೊರತು ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಪ್ರತಿಭಟನೆ ಮಾಡಿದರೆ ಸಿದ್ಧ ಉತ್ತರಗಳನ್ನು ನೀಡುವರು’ ಎನ್ನುತ್ತಾರೆ ಬಸ್ ನಿಲ್ದಾಣದ ವ್ಯಾಪಾರಿಗಳು.

‘ನಾಲ್ಕು ಕ್ರಷರ್‌ಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ. ಎರಡು ಕಿ.ಮೀ ವ್ಯಾಪ್ತಿಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಲ್ಲು ಪುಡಿ ತುಂಬಿದ ಲಾರಿಗಳಿಂದ ತೋವಿನಕೆರೆವರೆಗೂ ಬೈಕ್‌ ವಾಹನಗಳು ಸಂಚಾರ ಮಾಡುವುದು ಕಷ್ಟ’ ಎಂದು ದೂರುತ್ತಾರೆ ಶಂಬೋನಹಳ್ಳಿ ಗ್ರಾಮದ ಪ್ರಸನ್ನಕುಮಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !