ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜು ಕೇಂದ್ರ ತೆರೆಯುವುದು ರಾಷ್ಟ್ರ ಪ್ರೇಮವೇ?

ಸಂಪನ್ಮೂಲ ಸಂಗ್ರಹಕ್ಕೆ ಮಾರಕ ಕೆಲಸಕ್ಕೆ ಕೈ ಹಾಕಿದ ಬಿಜೆಪಿ ಸರ್ಕಾರ; ವಿ.ಎಸ್.ಉಗ್ರಪ್ಪ ಆಕ್ರೋಶ
Last Updated 23 ಫೆಬ್ರುವರಿ 2020, 10:19 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಬಿಜೆಪಿ ಸರ್ಕಾರವು ಜೂಜು ಕೇಂದ್ರ ತೆರೆಯುವ ಮತ್ತು ಹೆಂಡ ಮಾರಾಟ ಹೆಚ್ಚಿಸುವ ಕುರಿತು ಚಿಂತಿಸುತ್ತಿದೆ. ಇದೇನಾ ಬಿಜೆಪಿಯ ರಾಷ್ಟ್ರಪ್ರೇಮ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.

ಸಚಿವ ಸಿ.ಟಿ.ರವಿ ಪ್ರವಾಸೋದ್ಯಮ ಇಲಾಖೆಯ ಸಂಪನ್ಮೂಲ ಕ್ರೋಡೀಕರಣ ಹಾಗೂ ವಿದೇಶಿಯರ ಆಕರ್ಷಣೆಗಾಗಿ ಕ್ಯಾಸಿನೊ ಮಾದರಿಯಲ್ಲಿ ಜೂಜು ಕೇಂದ್ರ ತೆರೆಯುವುದಾಗಿ ತಿಳಿಸಿದ್ದಾರೆ. ಅಬಕಾರಿ ಸಚಿವ ಎಚ್.ನಾಗೇಶ್ ಹೆಂಡ ಮಾರಾಟ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಸಂಪನ್ಮೂಲ ಸಂಗ್ರಹಕ್ಕೆ ಯುವಜನರಿಗೆ ಮಾರಕವಾದ ಕೆಲಸಕ್ಕೆ ಕೈ ಹಾಕಿರುವುದು ಖಂಡನೀಯ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದ ಕರಾವಳಿ ತೀರ, ಹಂಪಿ, ಸೋಮನಾಥಪುರ, ಬೇಲೂರು, ಹಳೇಬೀಡುನಂತಹ ಭವ್ಯ ಕಲೆ ಪ್ರಕೃತಿ ಸಂಪತ್ತು ನಮ್ಮಲ್ಲಿ ಇರುವಾಗ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಂಡ, ಜೂಜುಕೇಂದ್ರವೇ ಬೇಕೇ ಎಂದು ಪ್ರಶ್ನಿಸಿದರು. ಸರ್ಕಾರ ಇದೇ ರೀತಿ ಮುಂದುವರಿದರೆ ಜನ ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯದ ನೆರೆ ಸಂತ್ರಸ್ತರಿಗೆ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಶುಕ್ರವಾರ ಸಂತ್ರಸ್ತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ಶಿಕ್ಷಕರಿಗೆ ವೇತನ ನೀಡಲು, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಈಗಾಗಲೇ ದೇಶದ ಮೇಲೆ ₹ 91.1ಲಕ್ಷ ಕೋಟಿ ಸಾಲ ಇದೆ. ಮತ್ತೆ ₹8 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ವಿದೇಶಿಯರ ಶೋಕಿಗಾಗಿ ದೇಶದ ತೆರಿಗೆ ಹಣ ಪೋಲು ಮಾಡುವುದು ಖಂಡನೀಯ. ಇದಕ್ಕೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಪ್ಪು ಅರ್ಥಿಕ ನೀತಿಗಳೇ ಕಾರಣ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಮುಖಂಡರಾದ ನಿರಂಜನ್, ಎಚ್.ಸಿ.ಹನುಮಂತಯ್ಯ, ನರಸೀಯಪ್ಪ, ಮಂಜುನಾಥ್, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT