ಸೋಮವಾರ, ಆಗಸ್ಟ್ 2, 2021
26 °C

ಏಕರೂಪ ಪಠ್ಯದಿಂದ ವೈವಿಧ್ಯತೆಗೆ ಪೆಟ್ಟು: ಕೆ.ದೊರೈರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಏಕರೂಪ ಪಠ್ಯಕ್ರಮ ಜಾರಿಗೊಳಿಸಿದರೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆ, ಸ್ಥಳೀಯ ಸಾಂಸ್ಕೃತಿಕ ಬಹುತ್ವಕ್ಕೆ ಧಕ್ಕೆಯಾಗಲಿದೆ. ಇಂತಹ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ಸೇರಿ ವಿದ್ಯಾರ್ಥಿ ಕೇಂದ್ರಿತ ಪಠ್ಯ ರಚನೆಗೆ ಹಾಗೂ ಸ್ಥಳೀಯ ವಿಚಾರಗಳಿಗೆ ಒತ್ತುನೀಡುತ್ತಿದ್ದರು. ಏಕರೂಪ ಪಠ್ಯ ಬಂದರೆ ಸ್ಥಳೀಯ ಸಂಸ್ಕೃತಿ, ಚರಿತ್ರೆ, ಸಾಮಾಜಿಕ ವಿಷಯಗಳು ಮಾಯವಾಗಲಿವೆ ಎಂದು ಜಂಟಿ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಉನ್ನತ ಶಿಕ್ಷಣದಲ್ಲಿ ಏಕರೂಪದ ಪಠ್ಯಕ್ರಮ ಅಳವಡಿಕೆಗೆ ಮುಂದಾಗಿರುವುದು ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಕುತ್ತು ಬರಲಿದೆ. ವಿ.ವಿ.ಗಳಲ್ಲಿರುವ ಪ್ರಾಧ್ಯಾಪಕರು, ಶಿಕ್ಷಣ ತಜ್ಞರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತಾಗುತ್ತದೆ. ವಿ.ವಿ.ಗಳ ವೈವಿಧ್ಯತೆ, ಉನ್ನತ ಶಿಕ್ಷಣದ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ. ಮುಂದೆ ಒಂದು ದೇಶ, ಒಂದು ಪಠ್ಯಕ್ರಮ, ಒಂದು ಪರೀಕ್ಷಾ ವಿಧಾನ ಎಂದಾದರೆ ಗ್ರಾಮೀಣ ಪ್ರದೇಶದ ಕೋಟ್ಯಂತರ ಬಡ ವಿದ್ಯಾರ್ಥಿ ಸಮುದಾಯ ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತವಾಗಲಿದೆ ಎಂದು ಎಚ್ಚರಿಸಿದ್ದಾರೆ.

‘ಒಂದು ಕಡೆ ಕುಳಿತು ಪಠ್ಯಕ್ರಮ ರೂಪಿಸುವುದರಿಂದ ಪ್ರಾದೇಶಿಕ ವೈವಿಧ್ಯ ಮಾಯವಾಗಿ ವಿದ್ಯಾರ್ಥಿಗಳ ಜ್ಞಾನ ವಿಕಾಸ ಕುಂಠಿತಗೊಳ್ಳುತ್ತದೆ. ಏಕರೂಪದ ಪಠ್ಯವೇ ಅವೈಜ್ಞಾನಿಕ. ಯಾವುದೇ ಸರ್ಕಾರಗಳು ತಮ್ಮ ಹಿಡನ್ ಅಜೆಂಡಾವನ್ನು ಪಠ್ಯದಲ್ಲಿ ಅಳವಡಿಸುವುದನ್ನು ಕೈಬಿಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು