ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಾಗಿ ದಂಡಿನಶಿವರ ಗ್ರಾಮಸ್ಥರ ಪರದಾಟ

ಕೊಂಡ್ಲಿ ಕ್ರಾಸ್‍ ಮಾರ್ಗದಲ್ಲಿ ಇಲ್ಲ ನಿಗದಿತ ಸಂಚಾರ: ಸಮಯಕ್ಕೆ ಸರಿಯಾಗಿ ಬಾರದ ಬಸ್‌
Last Updated 9 ಜನವರಿ 2023, 6:16 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ - ಕೊಂಡ್ಲಿ ಕ್ರಾಸ್‍ ಮಾರ್ಗದ ಮತ್ತು ದಂಡಿನಶಿವರ ಹೋಬಳಿಯ ಗ್ರಾಮಗಳಿಗೆ ಸೂಕ್ತ ಬಸ್‍ ಸೌಕರ್ಯವಿಲ್ಲದೆ ಹಾಗೂ ಸಮಯಕ್ಕೆ ಸರಿಯಾಗಿ ಬಸ್‍ ಬರದೆ ವಿದ್ಯಾರ್ಥಿಗಳು, ಗ್ರಾಮಸ್ಥರು, ನೌಕರರು ಪರದಾಡುವಂತಾಗಿದೆ.

ಸಾರ್ವಜನಿಕ ಆಸ್ಪತ್ರೆ, ವಿವಿಧ ಬ್ಯಾಂಕ್, ಹೊನ್ನಾದೇವಿ ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಕೊಬ್ಬರಿ ಅಂಗಡಿ, ರಸಗೊಬ್ಬರದ ಅಂಗಡಿ, ಮೆಡಿಕಲ್‌ ಶಾಪ್‌ಗಳಿಗೆ, ಅಂಚೆ ಕಚೇರಿ, ಬೆಸ್ಕಾಂ ಕಚೇರಿ, ನಾಡ ಕಚೇರಿ, ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಪೊಲೀಸ್‍ ಸ್ಟೇಷನ್, ಮಾರುಕಟ್ಟೆ, ಕೃಷಿ ಸಾಮಗ್ರಿ, ದಿನನಿತ್ಯದ ವಸ್ತುಗಳ ಕೊಳ್ಳಲು ಸಾಕಷ್ಟು ಹಳ್ಳಿಗಳಿಂದ ದಂಡಿನಶಿವರ ಹೋಬಳಿ ಕೇಂದ್ರಕ್ಕೆ ಹೋಗಲು ಸಕಾಲಕ್ಕೆ ಬಸ್‌ ಸೌಲಭ್ಯವಿಲ್ಲ.

ಬೆಂಗಳೂರು, ತುಮಕೂರು, ತಿಪಟೂರು, ಅರಸೀಕೆರೆ, ಶಿವಮೊಗ್ಗ, ಭದ್ರಾವತಿ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಚಿಕ್ಕಮಗಳೂರು ಮೊದಲಾದ ಸ್ಥಳಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಪ್ರತಿನಿತ್ಯ ಅಮ್ಮಸಂದ್ರ ರೈಲ್ವೆ ಸ್ಟೇಷನ್‌ಗೆಗೆ ಬರಲು ರೈಲು ಬರುವ ಸಮಯಕ್ಕೆ ಬಸ್‌ ವ್ಯವಸ್ಥೆ ಇಲ್ಲದಾಗಿದೆ ಎನ್ನುತ್ತಾರೆ ಪ್ರಯಾಣಿಕ ನಟೇಶ್‍.

ಇದೇ ಮಾರ್ಗದಲ್ಲಿ ಮೈಸೆಂಕೋ ಸಿಮೆಂಟ್‌ ಕಾರ್ಖಾನೆಯೂ ಸಹ ಇದ್ದು ಹೆಚ್ಚಿನ ಜನ ಸಂಚಾರವಿದೆ. ಜತೆಗೆ ಪ್ಯಾಕ್ಟರಿ ಕೆಲಸಕ್ಕೆ ಹೋಗುವವರಿಗೂ ನಿಗದಿತ ಸಮಯಕ್ಕೆ ಬಸ್‌ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ.

ದಂಡಿನಶಿವರ ಮತ್ತು ಸಂಪಿಗೆ ವ್ಯಾಪ್ತಿಯ ಭಾಗಶಃ ಗ್ರಾಮಗಳು ತೆಂಗು ಮತ್ತು ಅಡಿಕೆಯನ್ನು ಬೆಳೆಯುವುದರಿಂದ ಆರ್ಥಿಕ ವಹಿವಾಟಿನ ಆಯಕಟ್ಟಿನ ವ್ಯಾಪಾರಿ ಕೇಂದ್ರವೂ ಆಗಿದೆ. ಹೆಚ್ಚಿನ ಜನ ಸಂಪರ್ಕವನ್ನು ಹೊಂದಿದ್ದು ಅದಕ್ಕೆ ಅನುಗುಣವಾಗಿ ಸಾರಿಗೆ ವ್ಯವಸ್ಥೆ ಇದ್ದರೆ ಈ ಹೋಬಳಿ ಆರ್ಥಿಕವಾಗಿ ಇನ್ನೂ ಅಭಿವೃದ್ಧಿಯಾಗಲಿದೆ ಎನ್ನುತ್ತಾರೆ ಸ್ಥಳೀಯ ಮುಖಂಡ ರಾಜ್‌ ಕುಮಾರ್.

ದಂಡಿನಶಿವರ ಹೋಬಳಿ ವ್ಯಾಪ್ತಿಯ ಅರಕೆರೆ, ಸಿದ್ದಾಪುರ, ಹರಿಗೊಂಡನ ಹಳ್ಳಿ, ಬಳ್ಳೆಕಟ್ಟೆ, ಹೊಸೂರು, ಡಿ.ಹೊಸಹಳ್ಳಿ, ಯಲದಬಾಗಿ, ದುಂಡಾ, ಹೆಗ್ಗೆರೆ, ಮಾರಸಂದ್ರ, ಹಟ್ಟಿಯಳ‍್ಳಿ, ರಾಗದೇವನ ಹಳ್ಳಿ, ತಳವಾರನ ಹಳ್ಳಿ, ದ್ಯಾಮಸಂದ್ರ, ಮಾಸ್ತಿಗೊಂಡನ ಹಳ್ಳಿ, ಹಂಪಲಾಪುರ, ಮಾರ್ತಮ್ಮನ ಹಳ‍್ಳಿ, ಟಿ.ಪಾಳ್ಯ, ಕುರುಬರಹಳ್ಳಿ ಬ್ಯಾಲಾ, ಬಸಾಪುರ, ಸಿಂಗಸಂದ್ರ, ಟಿ.ಪಾಳ್ಯ ಇನ್ನೂ ಅನೇಕ ಗ್ರಾಮಗಳಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕರು, ದಂಡಿನಶಿವರ, ಸಂಪಿಗೆ, ತುರುವೇಕೆರೆ, ತಿಪಟೂರು, ಗುಬ್ಬಿ, ಕೆ.ಬಿ.ಕ್ರಾಸ್‌ ಗೆ ಹೋಗಲು ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ.

‘ನಮ್ಮ ಹಳ‍್ಳಿಯಿಂದ ಹೋಬಳಿ ಕೇಂದ್ರಕ್ಕೆ ಹೋಗಲು ಕಷ್ಟ. ದ್ವಿಚಕ್ರವಾಹನ ಇದ್ದವರು ಹೇಗೋ ಹೋಗುತ್ತಾರೆ. ವಾಹನ ಇಲ್ಲದವರು ಪಾಡೇನು’ ಎಂದು ಕುರುಬರಹಳ‍್ಳಿ ವೆಂಕಟೇಶ್‌ ಸಮಸ್ಯೆ ತೋಡಿಕೊಂಡರು.

ಇನ್ನೂ ಹೋಬಳಿಯಿಂದ ಕೆಲಸ ಕಾರ್ಯ ಮುಗಿಸಿಕೊಂಡು ತಮ್ಮ ಊರುಗಳಿಗೆ ಹೋಗಲು ಸೂಕ್ತ ಸಮಯಕ್ಕೆ ಬಸ್‌ ಕೂಡ ಇಲ್ಲ ಎನ್ನುತ್ತಾರೆ ಬೀಸ್ನಹಳ್ಳಿ ರಾಮಣ್ಣ.

ತುರುವೇಕೆರೆ ಘಟಕದಿಂದ ಮಧ್ಯಾಹ್ನ ಮತ್ತು ಬೆಳಿಗ್ಗೆ ಮಾಚೇನಹಳ್ಳಿ, ಹುಲ್ಲೇಕೆರೆ, ದಂಡಿನಶಿವರ, ಸಂಪಿಗೆ, ಟಿ.ಪಾಳ್ಯ ಮಾರ್ಗವಾಗಿ ಕಲ್ಲೂರ್ ಕ್ರಾಸ್‌ ಗೆ ಬಸ್‌ ಸಂಚಾರವಿಲ್ಲ.

‘ನಿಟ್ಟೂರು, ಗುಬ್ಬಿ, ತುಮಕೂರು ಮಾರ್ಗವಾಗಿ ತಾಲ್ಲೂಕಿನ ಸಂಪಿಗೆಗೆ, ದಂಡಿನಶಿವರ ಹೋಗುವ ಬಸ್‌ ಹೆಚ್ಚಬೇಕಿದೆ’ ಎನ್ನುತ್ತಾರೆ ಸಂಪಿಗೆ ಯೋಗೀಶ್‍,

ತುಮಕೂರು ಕೆಎಸ್‌ ಆರ್‌ ಟಿಸಿ ಘಟಕದಿಂದ ಗುಬ್ಬಿ, ನಿಟ್ಟೂರು, ದೊಡ್ಡಗುಣಿ, ಕೊಂಡ್ಲಿ ಕ್ರಾಸ್‌ ಮಾರ್ಗವಾಗಿ ದಂಡಿನಶಿವರಕ್ಕೆ ಮತ್ತು ತಿಪಟೂರು ಘಟಕದಿಂದ ಈಚನೂರು, ಕರಡಾಳು, ಕೊಟ್ಟಿಗೇಹಳ್ಳಿ, ಅರಳಗುಪ್ಪೆ, ಎ.ಹೊಸಹಳ್ಳಿ, ಬಾಣಸಂದ್ರ ಮಾರ್ಗವಾಗಿ ದಂಡಿನಶಿವರಕ್ಕೆ, ಕೆ.ಬಿ.ಕ್ರಾಸ್‌ ನಿಂದ ಕೊಂಡ್ಲಿಕ್ರಾಸ್‌ ದಂಡಿನಶಿವರ ಮಾರ್ಗವಾಗಿ ತುರುವೇಕೆರೆಗೆ ಹಾಗೂ ಕೊಂಡ್ಲಿ ಕ್ರಾಸ್‌, ದಂಡಿನಶಿವರ, ತುರುವೇಕೆರೆ ಮಾರ್ಗವಾಗಿ ಮಾಯಸಂದ್ರಕ್ಕೆ ದಿನಕ್ಕೆ ಎರಡು ಬಾರಿ ಬಸ್‌ ಓಡಿಸಬೇಕಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT