ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ಆಲೋಚನೆ ಸೀಮಿತ ಅಲ್ಲ’

ರಾಣಿ ಚನ್ನಮ್ಮ ವಿ.ವಿಯಲ್ಲಿ ನಡೆದ ಕಾರ್ಯಕ್ರಮ
Last Updated 6 ಮೇ 2018, 7:04 IST
ಅಕ್ಷರ ಗಾತ್ರ

ಬೆಳಗಾವಿ: ‘ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಆಲೋಚನೆಗಳು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವು ಸರ್ವರ ಶ್ರೇಯೋಭಿವೃದ್ಧಿಗೆ ಕಾರಣವಾಗಿವೆ’ ಎಂದು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ಡಾ.ಬಾಬಾಸಾಹೇಬ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಮಹಾಜನ ಶ್ರೀಕೃಷ್ಣ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಸಮಾಜಕಲ್ಯಾಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘21ನೇ ಶತಮಾನದಲ್ಲಿ ಅಂಬೇಡ್ಕರ್‌ ಆಲೋಚನೆಗಳ ಪ್ರಸ್ತುತತೆ’ ವಿಷಯ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಅವರ ದೂರದೃಷ್ಟಿಯಿಂದಾಗಿ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಅವರು ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ವಿಶ್ವದ ಆಸ್ತಿ ಹಾಗೂ ಮಹಾಮಾನವತಾವಾದಿ ಅವರು. ಶೋಷಣೆಗೊಳಪಟ್ಟಿದ್ದ ಜನರಿಗೆ ಬೆಳಕು ತೋರಿದ ಮಹಾಜ್ಯೋತಿ’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಮಾತನಾಡಿ, ‘ಅಂಬೇಡ್ಕರ್‌ ಸಾಧನೆ, ಜೀವನ ಹಾಗೂ ಹೋರಾಟ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ವಿಶ್ವದ ಮಹಾ ಬುದ್ಧಿವಂತರಲ್ಲಿ ಒಬ್ಬರಾಗಿದ್ದ ಅವರು ನಿಸ್ವಾರ್ಥ ಬದುಕು ನಡೆಸಿದರು. ಎಲ್ಲ ಕಾಲಕ್ಕೂ ಅವರು ಅಮರರಾಗಿ ಉಳಿಯುತ್ತಾರೆ’ ಎಂದರು.

ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮುನಿರಾಜು, ‘ಬೆಳಗಾವಿ ಹಾಗೂ ಧಾರವಾಡದಲ್ಲಿ ಓಡಾಡಿದ ಅಂಬೇಡ್ಕರ್‌ ಈ ಪ್ರದೇಶವನ್ನು ಪೂಣ್ಯಭೂಮಿಯನ್ನಾಗಿಸಿದ್ದಾರೆ. ಹಿಂಸೆ ದ್ವೇಷಿಸುತ್ತಾ ಅಹಿಂಸಾ ಮಾರ್ಗದಲ್ಲಿ ಸ್ವತಂತ್ರ, ಸಮಾನತೆ ಪಡೆದುಕೊಳ್ಳಬೇಕು. ಶೋಷಣೆಮುಕ್ತ ಬದುಕು ಕಟ್ಟಿಕೊಳ್ಳಬೇಕೆಂದು ತೋರಿಸಿಕೊಟ್ಟವರು’ ಎಂದು ಸ್ಮರಿಸಿದರು.ಪ್ರೊ.ಸಾಬಣ್ಣ ತಳವಾರ, ಪ್ರೊ.ವಿನೋದ ಗಾಯಕವಾಡ ಮತ್ತು ಪ್ರೊ.ಎಸ್‌.ಒ. ಹಲಸಗಿ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಗಳು ನಡೆದವು. ಪ್ರೊ.ಲಿಂಗಪ್ಪ ಗೋನಾಳ, ಪ್ರೊ.ಆನಂದ ಮೆನಸೆ, ಪ್ರೊ.ಸುನೀತಾ ಸಾಗೋಲೆ, ಪ್ರೊ.ಶೀಲಾಧರ ಮುಗಳಿ, ಪ್ರೊ.ಎಚ್.ಬಿ. ಕೋಲಕಾರ ಮಾತನಾಡಿದರು.

ಪ್ರೊ.ಚಂದ್ರಕಾಂತ ವಾಘಮಾರೆ ಸ್ವಾಗತಿಸಿದರು. ಹುಚ್ಚೇಗೌಡ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಚಂದ್ರಿಕಾ ವಂದಿಸಿದರು. ಪೂಜಾ ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ.ರಂಗರಾಜ ವನದುರ್ಗ ಅಧ್ಯಕ್ಷತೆ ವಹಿಸಿದ್ದರು. ಮೈಜುದ್ದೀನ್‌ ಮುತಾವಲಿ ಸ್ವಾಗತಿಸಿದರು. ಸಾಹುಕಾರ ಕಾಂಬಳೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT