ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ಪ್ರಾರಂಭಕ್ಕೆ ಯಾದಗೆರೆ ಗ್ರಾಮಸ್ಥರ ವಿರೋಧ

ಹಶೀಲ್ದಾರ್ ಕೆ.ಮಂಜುನಾಥ ಅವರಿಗೆ ಮನವಿ
Published 10 ಡಿಸೆಂಬರ್ 2023, 4:54 IST
Last Updated 10 ಡಿಸೆಂಬರ್ 2023, 4:54 IST
ಅಕ್ಷರ ಗಾತ್ರ

ಕೊರಟಗೆರೆ: ಕ್ರಷರ್ ಪ್ರಾರಂಭಿಸುವುದನ್ನು ವಿರೋಧಿಸಿ ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಗೆರೆ ಹಾಗೂ ಸುತ್ತಮುತ್ತಲ ಏಳು ಗ್ರಾಮದ ಗ್ರಾಮಸ್ಥರು ತಹಶೀಲ್ದಾರ್ ಕೆ.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

ಕ್ರಷರ್ ಪ್ರಾರಂಭಿಸಲು ಉದ್ದೇಶಿಸಿರುವ ಜಾಗ ಗ್ರಾಮಗಳಿಗೆ ಹೊಂದಿಕೊಂಡಂತಿದೆ. ಒಂದು ವೇಳೆ ಕ್ರಷರ್ ಪ್ರಾರಂಭಿಸಿದರೆ ಸುತ್ತಮುತ್ತಲ ಸುಮಾರು 10 ಹಳ್ಳಿಗಳಿಗೆ ತೊಂದರೆಯಾಗುತ್ತದೆ. ಈ ಜಾಗದ ಕೂಗಳತೆ ದೂರದಲ್ಲೇ ದೇವಸ್ಥಾನ, ಶಾಲೆ ಹಾಗೂ ಕುಡಿಯುವ ನೀರಿನ ಕೊಳವೆ ಬಾವಿ ಕೂಡ ಇವೆ. ಈ ಜಾಗದಲ್ಲಿ ಕ್ರಷರ್ ಪ್ರಾರಂಭವಾದರೆ ಸಾರ್ವಜನಿಕ ಬದುಕಿಗೆ ತೊಂದರೆ ಉಂಟಾಗಲಿದೆ ಎಂದು ಮನವಿ ಮಾಡಿದ್ದಾರೆ.

ಕ್ರಷರ್ ಪ್ರಾರಂಭಿಸುವುದನ್ನು ವಿರೋಧಿಸಿ ಈಗಾಗಲೇ ತಹಶೀಲ್ದಾರ್‌ ಕಚೇರಿಗೆ ಅನೇಕ ಬಾರಿ ಮನವಿ ನೀಡಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೂ ಮತ್ತೆ ಕಲ್ಲು ಗಣಿಗಾರಿಕೆ ಪ್ರಾರಂಭಿಸಲು ಮುಂದಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

‘ನಿಯೋಜಿತ ಜಾಗದ ಕೂಗಳತೆ ದೂರದಲ್ಲೆ ನಮ್ಮ ಮನೆಗಳಿವೆ. ದನ, ಕರ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇವೆ. ಸುತ್ತ ಏಳು ಗ್ರಾಮಗಳಿವೆ. ಇದರಿಂದ ನಮ್ಮ ಹಾಗೂ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಲಿದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕ್ರಷರ್ ಮಾಡಲು ಬಿಡುವುದಿಲ್ಲ. ಒಂದು ವೇಳೆ ಮಾಡಲು ಮುಂದಾದರೆ ನಾವೆಲ್ಲ ವಿಷ ಕುಡಿಯುತ್ತೇವೆ‘ ಎಂದು ಯಾದಗೆರೆ ಗ್ರಾಮಸ್ಥೆ ವರದಮ್ಮ ಎಚ್ಚರಿಸಿದರು.

ಗೋಮಾಳದ ಪಕ್ಕದಲ್ಲಿ ಕ್ರಷರ್ ಮಾಡಲು ಮುಂದಾಗಿದ್ದಾರೆ. ಹತ್ತಾರು ಹಳ್ಳಿಗಳ ಜನರ ಜೀವಕ್ಕೆ ಆಪತ್ತು ಎದುರಾಗಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ರಷರ್ ಮಾಡಲು ಅಧಿಕಾರಿಗಳು ಅನುಮತಿ ನೀಡಬಾರದು ಎಂದು ಗ್ರಾಮದ ಮುನಿಯಪ್ಪ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ್ ಹಾಗೂ ಕಂದಾಯ ಇಲಾಖೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT