ಗುರುವಾರ , ಅಕ್ಟೋಬರ್ 22, 2020
22 °C
ಜಿ.ಪಂ ಅಧ್ಯಕ್ಷೆ ಲತಾಗೆ ಸಿಕ್ಕ ಅವಕಾಶ l ಹೈಕೋರ್ಟ್‌ ಆದೇಶ

ಜಿ.ಪಂ ‘ಅವಿಶ್ವಾಸ’ ಸಭೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಗುರುವಾರ ನಿಗದಿಯಾಗಿದ್ದ ಜಿ.ಪಂ ಸಭೆಯನ್ನು ರದ್ದುಪಡಿಸಲಾಗಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮಾಹಿತಿ ನೀಡಿದ್ದು, ಸಭೆ ರದ್ದುಪಡಿಸಿರುವ ಮಾಹಿತಿಯನ್ನು ಜಿ.ಪಂ ಸದಸ್ಯರಿಗೆ ತಿಳಿಸುವಂತೆ ಸೂಚಿಸಿದ್ದಾರೆ.

ಜಿ.ಪಂ ಅಧ್ಯಕ್ಷೆ ಲತಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ ಅವಿಶ್ವಾಸ ನಿರ್ಣಯ ಪತ್ರಕ್ಕೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಸಹಿ ಮಾಡಿದ್ದರು. ಈ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದರು.

ಜಿ.ಪಂ ಮಹಿಳಾ ಸದಸ್ಯರ ಸಹಿಯನ್ನು ಅವರ ಗಂಡಂದಿರು ಪೋರ್ಜರಿ ಮಾಡಿದ್ದಾರೆ. ಕೆಲ ಸದಸ್ಯರು ಸಹಿ ಮಾಡದಿದ್ದರೂ, ಅವರ ಹೆಸರಿನಲ್ಲಿ ಬೇರೊಬ್ಬರು ಸಹಿ ಮಾಡಿದ್ದಾರೆ. ಹಾಗಾಗಿ ಅವಿಶ್ವಾಸ ನಿರ್ಣಯ ಮಂಡನೆ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅವಿಶ್ವಾಸ ಮಂಡನೆಗೆ ಸಿದ್ಧತೆ ನಡೆಯುತ್ತಿದ್ದಂತೆ ಪತ್ನಿ ಲತಾ ಅಧಿಕಾರ ಉಳಿಸುವ ಸಲುವಾಗಿ ಅವರ ಪತಿ ರವಿಕುಮಾರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ನಾಯಕರಿಂದ ಬೆಂಬಲದ ಭರವಸೆ ಸಿಕ್ಕಿತ್ತು. ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಮಾಡಿದ್ದರೂ ಸಭೆಗೆ ಹಾಜರಾಗದಂತೆ ತಮ್ಮ ಪಕ್ಷದ ಜಿ.ಪಂ ಸದಸ್ಯರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಶಿರಾ ಚುನಾವಣೆ ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದವು.

ಇದಕ್ಕೂ ಮುನ್ನ ಅ. 7ರಂದು ನಡೆಯಬೇಕಿದ್ದ ಅವಿಶ್ವಾಸ ನಿರ್ಣಯ ಮಂಡನೆ ಸಭೆಯನ್ನು ಚುನಾವಣೆ ಕಾರಣಕ್ಕೆ ಅ. 15ಕ್ಕೆ ಮುಂದೂಡಲಾಗಿತ್ತು. ಅಧಿಕಾರದಿಂದ ಕೆಳಗಿಳಿಸುವ ಪಣತೊಟ್ಟಿರುವ ಬಿಜೆಪಿ ಮುಖಂಡರು ಮತ್ತೊಮ್ಮೆ ಸಭೆ ಮುಂದೂಡಿಸುವ ಪ್ರಯತ್ನ ನಡೆಸಿದ್ದರು. ಅದಕ್ಕೂ ಮುನ್ನ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸದ್ಯಕ್ಕಂತೂ ಲತಾ ಅವರಿಗೆ ಜೀವದಾನ ಸಿಕ್ಕಂತಾಗಿದ್ದು, ಅಧಿಕಾರದಲ್ಲಿ ಮುಂದುವರಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು