ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ದಿಬ್ಬ ಕುಸಿದು ಯುವಕ ಸಾವು

ಶಿರಾ: ಅಕ್ರಮ ಮರಳು ದಂಧೆಗೆ ಬಲಿ-ಪ್ರತಿಭಟನೆ
Last Updated 23 ಜನವರಿ 2013, 9:00 IST
ಅಕ್ಷರ ಗಾತ್ರ

ಶಿರಾ: ಮದಲೂರು ಕೆರೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ಒಬ್ಬ ಅಮಾಯಕ ಯುವಕನ ಬಲಿ ತೆಗೆದುಕೊಂಡಿದೆ.
ಆಳದ ಗಣಿಯಿಂದ ಮರಳು ತುಂಬಲು ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗಿದ್ದ ಅದೇ ಗ್ರಾಮದ ಮಂಜುನಾಥ (24)ನ ಮೇಲೆ ಮೇಲ್ಪದರದ ಮಣ್ಣು ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೋಮವಾರ ರಾತ್ರಿ ಸುಮಾರು 7-8 ಗಂಟೆಯಲ್ಲಿ ಘಟನೆ ನಡೆದಿದ್ದು, ಅಕ್ರಮ ದಂಧೆಯಲ್ಲಿ ತೊಡಗಿದ್ದ ಇತರರು ಪಾರಾಗಿದ್ದಾರೆ. ಜೆಸಿಬಿ ಚಾಲಕ ಅದರ ಗಾಜು ಹೊಡೆದು ಈಚೆ ಬಂದು ಬದುಕುಳಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆದರೆ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ದಲಿತ ಯುವಕ ಮಂಜುನಾಥ ಪಾರಾಗಲು ಆಗದೆ ಅಲ್ಲಿಯೇ ಸಾವನ್ನಪ್ಪಿದ್ದಾನೆ. ಮಂಜುನಾಥನಿಗೆ ತಂದೆ-ತಾಯಿ ಇರಲಿಲ್ಲ. ತಂಗಿಯೊಬ್ಬಳು ಇದ್ದಳು ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಜೆಸಿಬಿ ಮಾಲೀಕ ನೆರೆಯ ಆಂಧ್ರದ ದೊಕ್ಕಲಹಳ್ಳಿ ಮಹೇಶ್, ಮಂಜುನಾಥ್‌ನನ್ನು ಆ ಕೆಲಸಕ್ಕೆ ಹಚ್ಚಿದ್ದ ತಿಮ್ಮಪ್ಪ, ಮಹೇಶ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಯಾರದೆಂದು ಪತ್ತೆಯಾಗಿಲ್ಲ ಎಂದು ಸಿಪಿಐ ಪ್ರಹ್ಲಾದ್ ತಿಳಿಸಿದ್ದಾರೆ.

ಮರಳು ದಂಧೆಗೆ ಶಾಸಕರ ಕುಮ್ಮಕ್ಕು: ಆರೋಪ
ಶಿರಾ: ತಾಲ್ಲೂಕಿನಲ್ಲಿ ಊಹೆಗೂ ನಿಲುಕದಂತೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಶಾಸಕರ ಸಹಕಾರವಿದೆ ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ಗಂಭೀರ ಆರೋಪ ಮಾಡಿದರು.

ಮದಲೂರು ಕೆರೆಯ ಅಕ್ರಮ ಮರಳು ದಂಧೆಗೆ ದಲಿತ ಯುವಕ ಮಂಜುನಾಥನ ಬಲಿ ಖಂಡಿಸಿ ಮಂಗಳವಾರ ಜೆಡಿಎಸ್ ಹಾಗೂ ದಲಿತ ಸಂಘಟನೆಗಳು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆಸಿದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮರಳು ದಂಧೆ ನಡೆಸುವವರಿಗೂ ಅಧಿಕಾರಿಗಳ ನಡುವೆ ಒಳ ಒಪ್ಪಂದವಿದೆ. ಶಾಸಕರ ಸಹಕಾರವಿಲ್ಲದೆ ಇಷ್ಟು ಪ್ರಮಾಣದ ದಂಧೆ ಬೆಳೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ಈ ಸಮಯದಲ್ಲಿ ಮರಳು ಮಾಫಿಯಾ, ಅದನ್ನು ತಡೆಯಲು ವಿಫಲವಾಗಿರುವ ಶಾಸಕರ ಕಾರ್ಯವೈಖರಿ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿದರು.

ಮೃತನ ಸಂಸ್ಕಾರಕ್ಕೆಂದು ಮೃತನ ಸಂಬಂಧಿಕರಿಗೆ ರೂ.10ಸಾವಿರ ರೂಪಾಯಿ ಜೆಡಿಎಸ್‌ನಿಂದ ವಿತರಿಸಲಾಯಿತು. ಧರಣಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮಿಕಾಂತ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅರೇಹಳ್ಳಿಬಾಬು, ಎಸ್‌ಸಿ ಘಟಕದ ಅಧ್ಯಕ್ಷ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ಬಾಂಬೆ ರಾಜಣ್ಣ, ಹಂದಿಕುಂಟೆ ಚಂದ್ರಶೇಖರ್ ಮತ್ತಿತರರು ಇದ್ದರು.

ಆಗ್ರಹ: ತಾಲ್ಲೂಕಿನಲ್ಲಿ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಿದ್ದರೂ; ತಲೆಕೆಡಿಸಿಕೊಳ್ಳದ ಶಾಸಕ ಟಿ.ಬಿ.ಜಯಚಂದ್ರ ದಲಿತ ಯುವಕ ಮಂಜುನಾಥನ ಸಾವಿನ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾದಿಗ ದಂಡೋರ ಕಾರ್ಯಾಧ್ಯಕ್ಷ ಭೂತರಾಜು ಒತ್ತಾಯಿಸಿದ್ದಾರೆ.

ಅವ್ಯಾಹತವಾಗಿ ಸಾಗುತ್ತಿರುವ ಮರಳುದಂಧೆಗೆ ಅವಕಾಶ ನೀಡುತ್ತಿರುವ ತಾಲ್ಲೂಕು ಆಡಳಿತ ಕೂಡಲೇ ಮರಳು ದಂಧೆ ನಿಲ್ಲಿಸಬೇಕು. ಮೃತನ ಕುಟುಂಬಕ್ಕೆ 10 ಲಕ್ಷ ರೂಪಾಯಿ, 5 ಎಕರೆ ಜಮೀನು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT