ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ಸೀಫಾ ಸಿನಿಮಾಗೆ ಚಿಕ್ಕನಾಯಕನಹಳ್ಳಿ ‘ಆತ್ಮ’

Last Updated 2 ಫೆಬ್ರುವರಿ 2014, 6:04 IST
ಅಕ್ಷರ ಗಾತ್ರ

ದೃಶ್ಯ ಮಾಧ್ಯಮದ ಶಕ್ತಿ ಅಗಾಧ. ಚಲನಚಿತ್ರ­ಗಳಲ್ಲಿ ಸೆರೆಯಾದ ಎಷ್ಟೋ ಊರಿನ ಸೊಬಗು ನಂತರ ಪ್ರವಾಸಿ ತಾಣಗಳಾಗಿವೆ. ನೋಡುಗರ ಬಾಯಿ ಮಾತಿನಿಂದಲೇ ಪ್ರಚಾರ ಪಡೆದು ಖ್ಯಾತಿ ಗಳಿಸಿವೆ.

 ಈ ಬಾರಿ ಅಂಥ ಸರದಿ ಚಿಕ್ಕನಾಯಕನಹಳ್ಳಿಯ­ದಾಗುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಚಲನ­ಚಿತ್ರೋತ್ಸವದಲ್ಲಿ ಮನ್ನಣೆ ಪಡೆದ ‘ಮುನ್ಸೀಫಾ’ ಚಿತ್ರ ನೋಡಿದವರನ್ನು ಸ್ಥಳಗಳು ಕುರ್ಚಿ ತುದಿಯಲ್ಲಿ ಕೂರುವಂತೆ ಮಾಡಿವೆ.

ಬೆಂಗಳೂರಿನಲ್ಲಿ ಈಚೆಗೆ ಮುಕ್ತಾಯವಾದ 6ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಮುನ್ಸೀಫಾ’ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಗಿಟ್ಟಿಸಿತು. ಈ ಪ್ರಶಸ್ತಿ ಗರಿಮೆಯ ಒಂದು ಪಾಲು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೂ ಸಲ್ಲುತ್ತದೆ. ಈ ಸಿನಿಮಾ ಪೂರ್ತಿ ಚಿತ್ರೀಕರಣವಾಗಿರುವುದು ತಾಲ್ಲೂಕಿನ ವಿವಿಧ ಭಾಗಗಳಲ್ಲಿ.

ಈ ಸಿನಿಮಾ ಕ್ಯಾಮೆರಾ ಹಿಂದೆ ಜಾದೂ ಮಾಡಿರುವುದು ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್. ಅವರು ಮೂಲತಃ ತಾಲ್ಲೂಕಿನ ಕಂದಿಕೆರೆಯವರು. ಇನ್ನೂ ಮುಖ್ಯ ಪಾತ್ರಧಾರಿ ಅಚ್ಯುತಕುಮಾರ್‌ ನೆರೆಯ ತಿಪಟೂರಿನವರು.

ಸ್ಥಳೀಯ ಕಲಾವಿದ ಗೌಸ್, ಶಿಲ್ಪಿ ವಿಶ್ವನಾಥ್್, ತೆಂಗುಮನೆ ಲೋಕೇಶ್ ಮತ್ತವರ ತಂಡ ಅದ್ಭುತ ಎನಿಸುವಂಥ ಸೆಟ್‌ ವರ್ಕ್ ಮಾಡಿದೆ. ಕಲಾವಿದ ಕೃಷ್ಣಾಚಾರ್, ಗಂಗಾಧರ್ ಮಗ್ಗದಮನೆ ಸೇರಿ­ದಂತೆ ಹಲ ಸ್ಥಳೀಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಜೀವಂತ­ವಿರುವ ದೇಸಿ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಸ್ಮಾರಕ ಸುಂದರವಾಗಿ ಅನಾವರಣಗೊಂಡಿವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಕೋರ್ಟ್ ಆಗಿದ್ದು, ಈಗ ಶಾಲೆಯಾಗಿರುವ ಹುಳಿಯಾರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೋರ್ಟ್ ದೃಶ್ಯಗಳನ್ನು  ಸೆರೆ ಹಿಡಿಯಲಾಗಿದೆ. ಮುನ್ಸೀಫಾನ ಬಾಲ್ಯವನ್ನು ಬಡಕೆಗುಡ್ಲು, ಬ್ಯಾಲದಕೆರೆಯಲ್ಲಿ ಹಾಗೂ ಯೌವನದ ಕಾಲಘಟ್ಟವನ್ನು ಕೆಂಕೆರೆ­ಯಲ್ಲಿ ಚಿತ್ರೀಕರಿಸಲಾಗಿದೆ. ಚಿಕ್ಕನಾಯಕನಹಳ್ಳಿ ಊರಬಾಗಿಲು, ಪಂಕಜನಹಳ್ಳಿ ದೇವಸ್ಥಾನ, ಹಂದನಕೆರೆ ಸೋಪಾನದ ಬಾವಿ ಕಂಡರೆ ಇಂಥ ಸೊಬಗಿನ ತಾಣಗಳು ನಮ್ಮೂರಿನಲ್ಲಿವೆಯೇ ಎಂದು ಅಚ್ಚರಿ ಪಡುವಂತೆ ಮೂಡಿಬಂದಿವೆ.

ಮೂಲ ಕತೆ ಮಂಗಳೂರಿನ ಬಾಗಲೋಡಿ ದೇವರಾಯರದು. ಸ್ವಾತಂತ್ರ್ಯ ಪೂರ್ವದಲ್ಲಿ ನಡೆ­ಯು­ವಂಥದ್ದು. ಬಾಲ್ಯದ ಸ್ವಚ್ಛಂದ ಅನುಭವ­ದೊಂದಿಗೆ ತನ್ನ ಅಂತಃಪ್ರಜ್ಞೆಯನು ರೂಪಿಸಿಕೊಂಡ ನ್ಯಾಯಾಧೀಶನೊಬ್ಬ ನ್ಯಾಯದಾನದ ಸಂದರ್ಭ­ದಲ್ಲಿ ಎದುರಿಸುವ ಸಂದಿಗ್ಧಗಳನ್ನು ಕತೆ ತೆರೆದಿಡು­ತ್ತದೆ. ಎಸ್‌ಎಲ್‌ಎನ್ ಟಾಕೀಸ್ ಮಾಲೀಕ ಜಯ­ಪ್ರಸಾದ್ ಚಿತ್ರವನ್ನು ಈ ತಿಂಗಳಲ್ಲಿ ಹುಳಿಯಾರು, ಚಿಕ್ಕನಾಯಕನಹಳ್ಳಿಯಲ್ಲಿ ಬಿಡುಗಡೆ ಮಾಡಿಸಲು ನಿರ್ಧರಿಸಿದ್ದಾರೆ.

ಮಲೆನಾಡ ಕತೆಗಾರ; ಬಯಲುಸೀಮೆ ಲೊಕೇಷನ್
‘ಮಲೆನಾಡ ಬರಹಗಾರನ ಕತೆಯನ್ನು ಬಯಲು ಸೀಮೆಯಲ್ಲಿ ಚಿತ್ರೀಕರಿಸುವ ಮನಸು ಮಾಡಿದ್ದರ ಉದ್ದೇಶ ಏನು?’ ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ ನಿರ್ದೇಶಕ ಉಮಾಶಂಕರ್ ಸ್ವಾಮಿ ನೀಡಿದ ಉತ್ತರ ಹೀಗಿತ್ತು.

‘ಚಿಕ್ಕನಾಯಕನಹಳ್ಳಿಯನ್ನೇ ಆಯ್ಕೆ ಮಾಡಿ­ಕೊಳ್ಳಲು ಎರಡು ಕಾರಣ. ಮೊದಲನೆಯದು ಕಥಾ ನಾಯಕ ತನ್ನ ಬಾಲ್ಯವನ್ನು ಬಯಲು­ಸೀಮೆಯಲ್ಲಿ ಕಳೆಯುತ್ತಾನೆ. ಭೀಕರ ಬರ ತಲೆ­ದೋರಿದಾಗ ಮಲೆನಾಡಿನ ಕಡೆ ಗುಳೆ ಹೋಗು­ತ್ತಾನೆ. ಈ ತಾಲ್ಲೂಕು ಬಯಲುಸೀಮೆ, ಅರೆ ಮಲೆ­ನಾಡನ್ನು ಬೆಸೆಯುವ ಕೊಂಡಿಯಂತಿದೆ. ಹುಳಿ­ಯಾರು, ಹಂದನಕೆರೆ ಹೋಬಳಿ ಬಯಲು­ಸೀಮೆ ಗಡುಸುತನ ಉಳಿಸಿಕೊಂಡಿದ್ದರೆ, ಕಂದಿಕೆರೆ–ಶೆಟ್ಟಿಕೆರೆ ಭಾಗ ಅರೆ ಮಲೆನಾಡಿನ ಸೆರಗಿಗೆ ಬೆಸೆದುಕೊಂಡಿದೆ.

‘ಎರಡನೆಯದಾಗಿ ಪಶುಸಂಗೋಪನೆ ಕತೆ­ಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಲೆನಾಡ ಗಿಡ್ಡಗಳನ್ನು ಬಳಸಿಕೊಂಡು ಪಶುಪಾಲನೆ    ವೈಭ­ವದ ಕಾವ್ಯ ಕಟ್ಟಿಕೊಡುವುದು ಸಾಧ್ಯವಿರ­ಲಿಲ್ಲ. ಈ ಭಾಗದಲ್ಲಿ ಸಿಗುವ ಎತ್ತರ ನಿಲುವಿನ ಹಳ್ಳಿಕಾರ್‌ ತಳಿ ಮತ್ತು ಗುಡ್ಡಗಾಡಿಗೆ ಅಂಟಿ­ಕೊಂಡಿ­ರುವ ಬಡಕೆಗುಡ್ಲು, ದಸೂಡಿ, ದಬ್ಬಕುಂಟೆ, ರಂಗನಕೆರೆ, ಸೋಮನಹಳ್ಳಿ, ಗಾಣ-­ಧಾಳ್, ಗುರುವಾಪುರ, ಮೇಲನಹಳ್ಳಿ, ತಿಮ್ಮನ­-ಹಳ್ಳಿ, ಗಂಟೆಹಳ್ಳಿ, ಅಜ್ಜಿಗುಡ್ಲು, ಮದನಮಡು, ತೀರ್ಥಪುರ, ಯರೇಕಟ್ಟೆ ಭಾಗದಲ್ಲಿ ಇನ್ನೂ ಜೀವಂತವಾಗಿರುವ ತುರುಮಂದೆ, ತೊಂಡಿಮನೆ ಸಂಸ್ಕೃತಿ ಮೂಲಕ ಅಪಾರ ದೇಸಿ ಜ್ಞಾನವನ್ನು ತಮ್ಮ ಒಡಲಲ್ಲಿ ಹುದುಗಿಸಿಟ್ಟುಕೊಂಡಿವೆ.’

ಸಿನಿಮಾಟೋಗ್ರಫಿ ಮಾಂತ್ರಿಕ ಭಾಸ್ಕರ್‌
ಕನ್ನಡದ ನಿಮಯ್ ಘೋಷ್ (ದಿ.ಸತ್ಯಜಿತ್ ರೇ ಖಾಸಾ ಕ್ಯಾಮೆರಾ ಮ್ಯಾನ್) ಎಂದೇ ಖ್ಯಾತರಾದ ಜಿ.ಎಸ್.ಭಾಸ್ಕರ್ ‘ಮುನ್ಸೀಫಾ’­ಗಾಗಿ ಕ್ಯಾಮೆರಾ ಹಿಂದೆ ದುಡಿದಿದ್ದಾರೆ.

ಭಾಸ್ಕರ್ ಅವರು ಕೆ.ಕೆ.ಮಹಾಜನ್, ಎ.ಕೆ.ಬೀರ್‌ ಶಿಷ್ಯ. ಮೊದಲು ಕ್ಯಾಮೆರಾ ಹಿಡಿದದ್ದು ಎ.ಕೆ.ಬೀರ್ ಸಹಾಯಕನಾಗಿ ರಿಚರ್ಡ್ ಅಟೆನ್‌ಬರೋನ ‘ಗಾಂಧಿ’ ಚಿತ್ರಕ್ಕೆ. ಸ್ವತಂತ್ರವಾಗಿ ಕ್ಯಾಮೆರಾ ನಿರ್ವಹಿಸಿದ ಮೊದಲ ಚಿತ್ರ ವಿಶ್ವ ವಿಖ್ಯಾತ ನಿರ್ದೇಶಕಿ ಸಾಯಿ ಪರಾಂಜಪೆಯ ‘ಪಪೀಹಾ’ ಚಿತ್ರಕ್ಕೆ. ಅವರ ‘ಸಾಜಾ’, ‘ದಿಶಾ’, ನಾಗೇಶ್ ಕುಕನೂರ್‌ರ ‘ಹೈದ್ರಾಬಾದ್‌ ಬ್ಲೂಸ್’, ಗಿರೀಶ್ ಕಾಸರವಳ್ಳಿ ಅವರ ‘ಬಣ್ಣದ ವೇಷ’, ‘ತಬರನ ಕತೆ’, ಸದಾನಂದ ಸುವರ್ಣಾರ ‘ಕುಬಿ ಮತ್ತು ಇಯಾಲ’, ಎಂ.ಎಸ್.ಸತ್ಯು ಅವರ ‘ಗಳಿಗೆ’, ‘ಇಜ್ಜೋಡು’, ಟಿ.ಎಸ್.ನಾಗಾಭರಣರ ‘ನಾಗಮಂಡಲ’, ‘ನೀಲಾ’ ಚಿತ್ರಗಳಲ್ಲಿ ಭಾಸ್ಕರ್ ಕೈಚಳಕ ಮೆರೆದಿದ್ದಾರೆ. ಇಂಥ ಖ್ಯಾತ ಕ್ಯಾಮೆರಾ ಮ್ಯಾನ್ ‘ಮುನ್ಸೀಫಾ’ ಕಣ್ಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT