ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ರಸ್ತೆಗೆ ಗುಲಾಬಿ ಆಟೊ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಹಾನಗರ ಪಾಲಿಕೆಯು ಮಹಿಳೆಯರ ಸುರಕ್ಷೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಪಿಂಕ್‌ ಆಟೊ ಪರಿಕಲ್ಪನೆಯೂ ಒಂದು.

‘ಮಹಿಳೆಯರಿಂದ ಮಹಿಳೆಯರಿಗಾಗಿ’ ಎನ್ನುವುದು ಈ ಯೋಜನೆಯ ಮುಖ್ಯ ಆಶಯ. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್‌ ಹೊತ್ತಿಗೆ ಮೈತುಂಬ ಗುಲಾಬಿ ಬಣ್ಣ ಹೊದ್ದ ಆಟೊಗಳು ನಗರದಲ್ಲಿ ಸಂಚರಿಸಲಿವೆ. ಹೆಂಗಳೆಯರಿಗೆ ಹಾಗೂ ಮಕ್ಕಳಿಗೆ ಮಾತ್ರ ಅವಕಾಶ ಇರುವ ಆಟೊದಲ್ಲಿ ಚಾಲಕರೂ ಹೆಂಗಸರೇ ಎನ್ನುವುದು ವಿಶೇಷ. ಸುರಕ್ಷತೆಯ ದೃಷ್ಟಿಯಿಂದ ಆಟೊದಲ್ಲಿ ಸಿಸಿಟಿವಿ, ಜಿಪಿಎಸ್‌ ಟ್ರ್ಯಾಕರ್‌ ಕೂಡ ಇರಲಿದೆ.

‘ಮಹಿಳಾ ಸಬಲೀಕರಣದ ಬಗೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಹೀಗಾಗಿ ಯಾವೆಲ್ಲಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ನೀಡಬಹುದು ಎಂದು ಯೋಚಿಸಿದಾಗ ಪಿಂಕ್‌ ಆಟೊ ಪರಿಕಲ್ಪನೆ ಹುಟ್ಟಿಕೊಂಡಿತು. ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವ ಉದ್ದೇಶವೂ ಇದರಲ್ಲಿದೆ. ಸೂರ್ಯ ಮುಳುಗಿದ ನಂತರ ಹೆಣ್ಣುಮಕ್ಕಳು ಕ್ಯಾಬ್‌ ಅಥವಾ ಆಟೊಗಳಲ್ಲಿ ಓಡಾಡಲು ಹೆದರುತ್ತಾರೆ. ಚಾಲಕರ ಸ್ಥಾನದಲ್ಲಿಯೂ ಹೆಂಗಸರೇ ಇದ್ದರೆ ಮಹಿಳೆಯರು ನಿರ್ಭಯವಾಗಿ ಓಡಾಡಬಹುದು. ಇತ್ತೀಚೆಗೆ ಮಹಿಳಾ ಕ್ಯಾಬ್‌ ಸೇವೆಗಳೂ ಇವೆ, ಮಹಿಳಾ ಚಾಲಕರೂ ಇದ್ದಾರೆ. ಈ ಪ್ರವೃತ್ತಿಯನ್ನು ಹೆಚ್ಚಿಸುವುದು ನಮ್ಮ ಕಲ್ಪನೆಯ ಮೂಲ ಉದ್ದೇಶ’ ಎಂದು ವಿವರಿಸುತ್ತಾರೆ ಬಿಬಿಎಂಪಿ ಮಹಿಳಾ ಅಭಿವೃದ್ಧಿ ಯೋಜನೆಯ ವಿಶೇಷ ಆಯುಕ್ತೆ ಎಂ.ವಿ. ಸಾವಿತ್ರಿ.

‘ಚಾಲಕರಾಗಿ ಚಾಲನಾ ಪರವಾನಗಿ ಇರುವವರನ್ನೇ ನೇಮಕ ಮಾಡಿಕೊಳ್ಳಬೇಕು. ವಲಯ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಹೆಚ್ಚು ಜನರು ಆಸಕ್ತಿ ತೋರದಿದ್ದರೆ ಕೆಎಸ್‌ಆರ್‌ಟಿಸಿಯಲ್ಲಿ ತರಬೇತಿ ಪಡೆದು ಆಯ್ಕೆ ಆಗದೇ ಇರುವವರ ಪೈಕಿ ಯಾರಾದರೂ ಆಸಕ್ತರು ಇದ್ದಾರೆಯೇ ಗುರುತಿಸಿ, ಅವಕಾಶ ಕೊಡುತ್ತೇವೆ. ಈ ಯೋಜನೆಗೆ ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಮಹಿಳೆಯರ ಪ್ರತಿಕ್ರಿಯೆ ಸದ್ಯಕ್ಕೆ ಇಲ್ಲ. ಪ್ರತಿಕ್ರಿಯೆ ಬಂದ ನಂತರವೇ ಎಷ್ಟು ಆಟೊ ಎಂದು ನಿರ್ಧರಿಸುತ್ತೇವೆ. ಸದ್ಯಕ್ಕೆ ವಾರ್ಡ್‌ ಒಂದಕ್ಕೆ ಮೂರು ಪಿಂಕ್‌ ಆಟೊ ನೀಡಬೇಕು ಎಂದುಕೊಂಡಿದ್ದೇವೆ. ಪ್ರತಿಕ್ರಿಯೆ ಗಮನಿಸಿ ಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ವಿವರಿಸಿದರು ಅವರು.

ನೊಯಿಡಾ, ಗುರುಗ್ರಾಮ, ಗಾಜಿಯಾಬಾದ್‌, ಅಸ್ಸಾಂಗಳಲ್ಲಿ ಈಗಾಗಲೇ ಪಿಂಕ್‌ ಆಟೊಗಳು ಓಡುತ್ತಿವೆ. ಅಲ್ಲಿಯೂ ಮಿಶ್ರ ಪ್ರತಿಕ್ರಿಯೆ ಇದೆ.

‘ಹೆಣ್ಣು ಮಕ್ಕಳು ಆಟೊ ಚಾಲನೆ ಮಾಡುವುದು ಎನ್ನುವುದು ಬೆಂಗಳೂರಿಗೆ ಹೊಸ ಪರಿಕಲ್ಪನೆಯೇ. ಕೆಲವರಾದರೂ ಆಟೊ ಚಾಲನೆ ಮಾಡಲು ಪ್ರಾರಂಭಿಸಿದರೆ ನಂತರ ಇನ್ನೊಂದಿಷ್ಟು ಮಹಿಳೆಯರು ಆಸಕ್ತಿ ತೋರಬಹುದು. ಪಿಂಕ್‌ ಆಟೊ ಪರಿಕಲ್ಪನೆಯಲ್ಲಿ ಸಮಯವನ್ನೇನು ನಿಗದಿ ಮಾಡಿಲ್ಲ. ಅವರವರ ಸಾಮರ್ಥ್ಯ, ಅನುಕೂಲಕ್ಕನುಗುಣವಾಗಿ ಅವರೇ ಸಮಯವನ್ನು ನಿಗದಿ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಓಲಾ, ಊಬರ್‌ ಜೊತೆಯೂ ಟೈಅಪ್‌ ಮಾಡಿ ಆನ್‌ಲೈನ್‌ ಬುಕಿಂಗ್‌ಗೆ ಅವಕಾಶ ನೀಡುವ ಯೋಚನೆಯೂ ಇದೆ’ ಎಂದು ಮಾಹಿತಿ ನೀಡುತ್ತಾರೆ ಅವರು.

*******
ಚಿಂತೆ ಇಲ್ಲದೆ ಓಡಾಡಬಹುದು
ನಗರದಲ್ಲಿ ಹೆಣ್ಣುಮಕ್ಕಳೇ ಆಟೊ ಓಡಿಸುವ ಯೋಜನೆ ಬರಲಿದೆ ಎಂದು ಕೇಳಿದ್ದೇನೆ. ಅದು ಬಂದರೆ ಖಂಡಿತ ಸಹಾಯವಾಗುತ್ತದೆ. ನಗರದಲ್ಲಿ ವೃತ್ತಿನಿರತ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ. ಸಮಯದ ನಿರ್ಬಂಧ ಇಲ್ಲದೇ ಓಡಾಡಬೇಕಾಗುತ್ತದೆ. ಹೀಗಿದ್ದಾಗ ಕ್ಯಾಬ್‌ ಇಲ್ಲವೇ ಆಟೊದಲ್ಲಿ ಓಡಾಡುವುದು ಅನಿವಾರ್ಯ. ಅಂಥ ಸಂದರ್ಭದಲ್ಲಿ ಭಯವಿಟ್ಟುಕೊಂಡೇ ಓಡಾಡುತ್ತೇವೆ. ಹೆಣ್ಣುಮಕ್ಕಳೇ ಇದ್ದರೆ ಸುರಕ್ಷತಾ ಭಾವ ಇರುತ್ತದೆ. ಅಲ್ಲದೆ ಭಯವಿಲ್ಲದೆ ಮಕ್ಕಳನ್ನೂ ರಿಕ್ಷಾದಲ್ಲಿ ಶಾಲೆಗೆ ಕಳುಹಿಸಬಹುದು.
– ಸರಿತಾ, ಇಂಡಿಯನ್‌ ಅಕಾಡೆಮಿ ಡಿಗ್ರಿ ಕಾಲೇಜ್‌, ಗ್ರಂಥ ಪಾಲಕಿ

ತಂತ್ರಜ್ಞಾನ ತಂದ ನಿರಾಳತೆ
ಪಿಂಕ್‌ ಆಟೊ ಪರಿಕಲ್ಪನೆ ಸ್ವಾಗತಾರ್ಹ. ಈಗಾಗಲೇ ಜಿಪಿಎಸ್‌ ಟ್ರ್ಯಾಕರ್‌ಗಳಿರುವ ಆಟೊ, ಕ್ಯಾಬ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಹೀಗಾಗಿ ಪಿಂಕ್‌ ಆಟೊ ಪರಿಕಲ್ಪನೆ ಹೊಸದು ಎನಿಸುತ್ತಿಲ್ಲ, ತುಂಬಾ ಸಹಾಯವಾಗುತ್ತದೆ ಎಂದೂ ಅನಿಸುತ್ತಿಲ್ಲ. ಆದರೆ ಹೆಣ್ಣುಮಕ್ಕಳೇ ಚಾಲಕಿಯರು ಇರುವುದರಿಂದ ಸ್ವಲ್ಪ ನಿರಾಳ ಭಾವ ಖಂಡಿತ ಫೀಲ್‌ ಆಗುತ್ತದೆ. ತಂತ್ರಜ್ಞಾನದ ದೃಷ್ಟಿಯಿಂದ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮನುಷ್ಯನ ನಡವಳಿಕೆ ಬಗೆಗೆ ತುಸು ಭಯ ಇದ್ದೇ ಇರುತ್ತದೆ. ಸಂಚರಿಸುವ ದಾರಿಗುಂಟ ಚಾಲಕರಾಗಿ ಮಹಿಳೆಯರೇ ಸಾಥ್‌ ನೀಡುತ್ತಾರೆ ಎಂದರೆ ಖುಷಿಯೇ.
– ಲಕ್ಷ್ಮಿ ರಮೇಶ್‌, ಶಿಕ್ಷಕಿ, ಅಕ್ಷರ ಅಂತರರಾಷ್ಟ್ರೀಯ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT