ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲ ಆಟೊ ರಿಕ್ಷಾ ನಿಲ್ದಾಣಗಳಲ್ಲಿ ಬಾಡಿಗೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀರ ಸಂಘಟನೆಯಿಂದ ಬುಧವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಯಿತು.
ಮೋಟಾರ್ ವಾಹನ ಕಾಯ್ದೆ ಹಾಗೂ ಪರವಾನಗಿ ನಿಯಮಗಳಂತೆ ಆಟೋ ಚಾಲಕರ ಉಡುಪಿ ವಲಯದ ಯಾವ ನಿಲ್ದಾಣದಲ್ಲಿ ಬೇಕಾದರೂ ಬಾಡಿಗೆ ಮಾಡಲು ಅವಕಾಶವಿದೆ. ಆದರೆ, ಕೆಲವರು ಎಲ್ಲ ನಿಲ್ದಾಣಗಳಲ್ಲಿ ಬಾಡಿಗೆ ಮಾಡಲು ಬಿಡುತ್ತಿಲ್ಲ. ನಿಗದಿತ ಸ್ಟಾಂಡ್‌ಗಳಲ್ಲಿ ಮಾತ್ರ ಬಾಡಿಗೆ ಮಾಡಬೇಕು ಎಂಬ ನಿಬಂಧನೆ ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ. ಪರಿಣಾಮ ಆಟೋ ರಿಕ್ಷಾ ಚಾಲಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿಗಧಿತ ನಿಲ್ದಾಣದಲ್ಲಿ ಗ್ರಾಹಕರಿಗೆ ಕಾಯುತ್ತಾ ಕುಳಿತರೆ ಜೀವನ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಒಮ್ಮೆ ನಿಲ್ದಾಣದಿಂದ ಗ್ರಾಹಕರನ್ನು ಹತ್ತಿಸಿಕೊಂಡು ಹೋದವರು ಮತ್ತೆ ಅದೇ ನಿಲ್ದಾಣಕ್ಕೆ ಗ್ರಾಹಕರಿಲ್ಲದೆ ಖಾಲಿ ಬರಬೇಕು, ಇದರಿಂದ ಇಂಧನ ಹೆಚ್ಚು ವ್ಯಯವಾಗುವುದರ ಜತೆಗೆ ವಾಹನ ಸವಕಳಿ ಉಂಟಾಗುತ್ತದೆ.
ಎಲ್ಲ ನಿಲ್ದಾಣಗಳಲ್ಲಿ ಬಾಡಿಗೆ ಮಾಡಲು ಅವಕಾಶ ಸಿಕ್ಕರೆ ಹೆಚ್ಚು ಬಾಡಿಗೆ ಲಭ್ಯವಾಗುವುದರ ಜತೆಗೆ ಜೀವನ ನಿರ್ವಹಣೆಯೂ ಸಾಧ್ಯವಾಗಲಿದೆ. ಸಮಸ್ಯೆ ಪರಿಹರಿಸುವಂತೆ ಹಿಂದೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ಮಾಡಿದ ಮನವಿಗೆ ಸ್ಪಂದನೆ ಸಿಗದ ಪರಿಣಾಮ ಧರಣಿ ಆರಂಭಿಸಲಾಗಿದ್ದು ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖಂಡರಾದ ಜಯಂತ್ ಸುವರ್ಣ, ವಿಠಲ ಜತ್ತನ್ನ, ರಾಜೇಶ್ ಸುವರ್ಣ, ಶಿವರಾಮ ಶೆಟ್ಟಿಗಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.