ತಾಯಿಯ ಭೇಟಿಯಾದ ಬನ್ನಂಜೆ ರಾಜ

7
ಬೆಳಿಗ್ಗಿನಿಂದ ಸಂಜೆವರೆಗೂ ಮನೆಯಲ್ಲಿಯೇ ವಾಸ್ತವ್ಯ: ಬಿಗಿ ಪೊಲೀಸ್ ಭದ್ರತೆ

ತಾಯಿಯ ಭೇಟಿಯಾದ ಬನ್ನಂಜೆ ರಾಜ

Published:
Updated:
ಕುಖ್ಯಾತ ರೌಡಿ ಬನ್ನಂಜೆ ರಾಜನನ್ನು ಸೋಮವಾರ ಬೆಳಿಗ್ಗೆ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿರುವ ತಾಯಿಯ ಮನೆಗೆ ಕರೆತರಲಾಯಿತು

ಉಡುಪಿ: ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕುಖ್ಯಾತ ರೌಡಿ ಬನ್ನಂಜೆ ರಾಜನನ್ನು ಸೋಮವಾರ ಬೆಳಿಗ್ಗೆ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿರುವ ತಾಯಿಯ ಮನೆಗೆ ಕರೆತರಲಾಯಿತು.

ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಯೋಗಕ್ಷೇಮ ವಿಚಾರಿಸಲು ಈಚೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ಬನ್ನಂಜೆ ರಾಜನಿಗೆ ಒಂದು ದಿನದ ಕಾಲಾವಕಾಶ ನೀಡಿತ್ತು. ಅದರಂತೆ, ಭಾನುವಾರ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬನ್ನಂಜೆ ರಾಜನನ್ನು ಸಂಜೆವೇಳೆಗೆ ಉಡುಪಿಗೆ ಕರೆತರಲಾಗಿತ್ತು. ಸೋಮವಾರ ಬೆಳಿಗ್ಗೆ 6ಕ್ಕೆ ಕಲ್ಮಾಡಿಯ ತಾಯಿಯ ಮನೆಗೆ ಕರೆದೊಯ್ಯಲಾಯಿತು.

ಮನೆಗೆ ತೆರಳಿದ ಕೂಡಲೇ ತಾಯಿಯ ಆರೋಗ್ಯ ವಿಚಾರಿಸಿದ ಬನ್ನಂಜೆ, ಬಳಿಕ ಸಹೋದರರು ಬಂಧುಗಳ ಜತೆ ಕೆಲಹೊತ್ತು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಬನ್ನಂಜೆ ರಾಜನನ್ನು ನೋಡಲು ಅಕ್ಕಪಕ್ಕದವರು ಮನೆಯ ಹೊರಗೆ ಕುತೂಹಲದಿಂದ ನಿಂತಿದ್ದ ದೃಶ್ಯ ಕಂಡುಬಂತು. ಮನೆಯ ಸುತ್ತಲೂ ಬಿಗಿ ಭದ್ರತೆ ಮಾಡಲಾಗಿತ್ತು. ಕುಟುಂಬ ಸದಸ್ಯರನ್ನು ಬಿಟ್ಟರೆ ಯಾರಿಗೂ ಮನೆಯ ಒಳಗೆ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ತಾಯಿಯ ಮನೆಯಲ್ಲಿರಲು ನ್ಯಾಯಾಲಯ ಅವಕಾಶ ಕೊಟ್ಟಿದ್ದ ಹಿನ್ನೆಲೆಯಲ್ಲಿ ಸಂಜೆ ಬನ್ನಂಜೆ ರಾಜನನ್ನು ಉಡುಪಿ ನಗರ ಠಾಣೆಗೆ ಕರೆತರಲಾಯಿತು. ಮಂಗಳವಾರ ಬೆಳಿಗ್ಗೆ ಮತ್ತೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !