ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಎಸ್‌ಡಿಪಿಐ ಒಳ ಒಪ್ಪಂದ ಜಗಜ್ಜಾಹೀರು; ಕುಯಿಲಾಡಿ

Last Updated 18 ಮಾರ್ಚ್ 2023, 14:28 IST
ಅಕ್ಷರ ಗಾತ್ರ

ಉಡುಪಿ: ದೇಶ ವಿರೋಧಿ ಮಾನಸಿಕತೆಯ ಮುಸ್ಲಿಂ ಮೂಲಭೂತವಾದಿ ಸಂಘಟನೆ ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದ್ದು, ಮತದಾರರು ಕಾಂಗ್ರೆಸ್ಸಿನ ಷಡ್ಯಂತ್ರ ಮತ್ತು ಆಮಿಷಗಳಿಗೆ ಬಲಿಯಾಗಬಾರದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ದೂರಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡುವಂತೆ ಕಾಂಗ್ರೆಸ್ಸಿನ ರಾಜ್ಯ ಮುಖಂಡರು ಪ್ರಯತ್ನಿಸಿರುವುದನ್ನು ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿಯೇ ಬಹಿರಂಗಪಡಿಸಿದ್ದು ಕಾಂಗ್ರೆಸ್ಸಿನ ಮುಖವಾಡ ಕಳಚಿ ಬಿದ್ದಿದೆ. ಎಸ್‌ಪಿಪಿಐ ಸಹಿತ ದೇಶ ವಿರೋಧಿ ಮತಾಂಧ ಸಂಘಟನೆಗಳನ್ನು ಬೆಳೆಸಿರುವುದು ಕಾಂಗ್ರೆಸ್ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಾವಧಿಯಲ್ಲಿ 1,600ಕ್ಕೂ ಹೆಚ್ಚು ಪಿಎಫ್ಐ, ಎಸ್‌ಡಿಪಿಐ, ಕೆಎಫ್‌ಡಿ ಕಾರ್ಯಕರ್ತರ ಬಂಧನ ಮುಕ್ತಗೊಳಿಸಿ, 175 ಪ್ರಕರಣಗಳನ್ನು ವಜಾಗೊಳಿಸಿದ್ದಾರೆ. ಬಳಿಕ ರಾಜ್ಯದಾದ್ಯಂತ ನಡೆದ ಸರಣಿ ಗಲಭೆಗಳು, ಹಿಂದೂ ಕಾರ್ಯಕರ್ತರ ಹತ್ಯೆ ಕಾಂಗ್ರೆಸ್ಸಿನ ಕುಟಿಲ ನೀತಿಗೆ ಜ್ವಲಂತ ಉದಾಹರಣೆಯಾಗಿದೆ.

ಎಸ್‌ಡಿಪಿಐ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ಮುಖಂಡರು ಸಮರ್ಥಿಸುತ್ತಿರುವುದು ಹಾಗೂ ಉಡುಪಿ ಜಿಲ್ಲೆಯಲ್ಲಿ ಹಿಂದೆ ಸಮಾನ ನಾಗರಿಕ ಸಂಹಿತೆ ಜಾರಿ ವಿರುದ್ದ ಎಸ್‌ಡಿಪಿಐ ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿರುವುದು ಕಾಂಗ್ರೆಸ್ಸಿನ ದ್ವಂದ್ವ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಳ್ಳು ಭರವಸೆಗಳ ಮೂಲಕ ಜನತೆಯಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್ ದೇಶದಾದ್ಯಂತ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತಕ್ಕೆ ಸೀಮಿತವಾಗಿದೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಸವಾಲಾಗಿರುವ ದೇಶ ವಿರೋಧಿ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT