‘ಹೆಲ್ತ್ ಕಾರ್ಡ್ ಇರದಿದ್ದರೂ ಬಿಪಿಎಲ್ ಕಾರ್ಡ್ ಸಾಕು’

ಉಡುಪಿ: ‘ಕರ್ನಾಟಕ ಆರೋಗ್ಯ ಶ್ರೀ’ ಯೋಜನೆಯಡಿ ಹೆಲ್ತ್ ಕಾರ್ಡ್ ಪಡೆದುಕೊಳ್ಳದವರು ಬಿಪಿಎಲ್ ಕಾರ್ಡ್ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ತ್ ಕಾರ್ಡ್ ಇಲ್ಲದ ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದೆ. ಈ ಸಂಬಂಧ ಈಚೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಹೆಲ್ತ್ ಕಾರ್ಡ್ ಇರದವರು ಬಿಪಿಎಲ್ ಕಾರ್ಡ್ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಸಂಬಂಧ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಗರ್ಭಿಣಿಯರಿಗೆ ‘ಮಾತೃಶ್ರೀ’ ಯೋಜನೆ ಮುಂದುವರಿಯಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಗರ್ಭಿಣಿಯರಿಗೆ ಮಾಸಿಕ ₹ 2,000 ಭತ್ಯೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಉಡುಪಿಯಲ್ಲಿ ಈಚೆಗೆ ಬೂದಿಮಿಶ್ರಿತ ಮಳೆ ಸುರಿದ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ‘ಯುಪಿಸಿಎಲ್ ಕಂಪೆನಿಯಿಂದ ಪರಿಸರಕ್ಕೆ ಹಾನಿಯಾಗಿದ್ದರೆ, ತಾಂತ್ರಿಕ ಸಮಿತಿ ನೀಡುವ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ಜಾರಕಿಹೊಳಿ ಸಹೋದರರ ಹಾಗೂ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವಿನ ವೈಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ಬಿದ್ದುಹೋಗುತ್ತದೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ನನ್ನ ಜತೆ ಎಲ್ಲರ ಬಾಂಧವ್ಯ ಸುಮಧುರವಾಗಿದೆ. ಸರ್ಕಾರ ಸುಭದ್ರವಾಗಿದೆ. ಬೆಳಗಾವಿಯಲ್ಲಿ ಯಾರ ಬಣಕ್ಕೂ ಜಯವಾಗಿಲ್ಲ; ಕಾಂಗ್ರೆಸ್ಗೆ ಜಯವಾಗಿದೆ ಎಂದರು.
ಸರ್ಕಾರ ಸಂಕಷ್ಟದಲ್ಲಿದ್ದರೆ ಬೆಂಗಳೂರಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸುತ್ತಿದ್ದೆ. ಉಡುಪಿಗೆ ಬಂದು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿರಲಿಲ್ಲ. ಮಾಧ್ಯಮಗಳು ಸರ್ಕಾರ ಬೀಳುತ್ತದೆ ಎಂದು ಹೇಳಿದರೆ, ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
**
‘ತನಿಖೆ ನಡೆಯುತ್ತಿದೆ’
ಶಿರೂರು ಲಕ್ಷ್ಮೀವರ ತೀರ್ಥರ ಅನುಮಾನಾಸ್ಪದ ಸಾವಿನ ಪ್ರಕರಣ ತನಿಖಾ ಹಂತದಲ್ಲಿದ್ದು, ಮಾಧ್ಯಮಗಳಿಗೆ ವಿವರ ನೀಡಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಅವರ ಕೊಲೆ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಂಡ ಕಠಿಣ ತನಿಖಾ ಕ್ರಮಗಳಿಂದ ಸತ್ಯ ಬಯಲಿಗೆ ಬರುತ್ತಿದೆ. ಹಾಗೆಯೇ ಶಿರೂರು ಶ್ರೀಗಳ ಪ್ರಕರಣದಲ್ಲಿ ತನಿಖೆ ಮುಗಿದ ಬಳಿಕ ಸತ್ಯಾಂಶವನ್ನು ಜನರ ಮುಂದಿಡುವುದಾಗಿ ಕುಮಾರಸ್ವಾಮಿ ಹೇಳಿದರು.
**
ಬೆಳಗಾವಿಯಲ್ಲಿ ಯಾರ ಬಣಕ್ಕೂ ಜಯವಾಗಿಲ್ಲ; ಕಾಂಗ್ರೆಸ್ಗೆ ಜಯವಾಗಿದೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.