ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸರಾಸರಿ ಶೇ 66ರಷ್ಟು ಮತದಾನ

ಸ್ಟ್ರಾಂಗ್ ರೂಮಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ: ಗ್ರಾಮೀಣ ಭಾಗದಲ್ಲಿ ಗರಿಷ್ಠ ಮತದಾನ
Last Updated 13 ಮೇ 2018, 9:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಶನಿವಾರ ಮತದಾನ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಾದ್ಯಂತ ಶೇ 66ರಷ್ಟು ಸರಾಸರಿ ಮತದಾನ ಆಗಿದೆ. 2013ರಲ್ಲಿ ಜಿಲ್ಲೆಯಲ್ಲಿ ಸರಾಸರಿ ಶ 64.92ರಷ್ಟು ಆಗಿತ್ತು. ಈ ಬಾರಿ ಮತದಾನಕ್ಕಾಗಿ ಸ್ವೀಪ್‌ ಸಮಿತಿ ಸಾಕಷ್ಟು ಪ್ರಚಾರ ನಡೆಸಿತ್ತು. ಪರಿಣಾಮವಾಗಿ ಪ್ರಸಕ್ತ ಚುನಾವಣೆಯಲ್ಲಿ ಶೇ 1.8ರಷ್ಟು ಹೆಚ್ಚುವರಿ ಮತದಾನ ಆಗಿದೆ.

ನಾಲ್ಕು ಕ್ಷೇತ್ರಗಳಲ್ಲಿ ಬೆಳಿಗ್ಗೆ 7ರಿಂದ ಮತದಾನ ಆರಂಭಗೊಂಡಿತು. ಯಾದಗಿರಿ ನಗರದಲ್ಲಿ ಬೆಳಿಗ್ಗೆ 8ರಿಂದ 10ಗಂಟೆಯವರೆಗೆ ಹೆಚ್ಚಿನ ಮತದಾರರು ಮತಗಟ್ಟೆಗಳಲ್ಲಿ ಸಾಲಾಗಿ ನಿಂತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು. ಬಿರುಬಿಸಿಲು ಆರಂಭಗೊಳ್ಳುತ್ತಿದ್ದಂತೆ ಮತದಾನ ಪ್ರಕ್ರಿಯೆ ನಿಧಾನಗೊಂಡಿತು.

ಒಬ್ಬೊಬ್ಬ ಮತದಾರರೇ ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬಂತು. ಆದರೆ, ಗ್ರಾಮೀಣ ಭಾಗದಲ್ಲಿನ ಮತಗಟ್ಟೆ ಕೇಂದ್ರಗಳಲ್ಲಿ ಬಿರುಬಿಸಿಲಿನಲ್ಲೂ ಮತದಾರರ ಸಾಲು ಇತ್ತು. ಮತದಾನಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಹಿಡಿದುಕೊಂಡು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮತದಾರರ ಮೇಲೆ ಹಲ್ಲೆ; ಪ್ರತಿಭಟನೆ:

ಶಹಾಪುರ ಕ್ಷೇತ್ರ ವ್ಯಾಪ್ತಿಯ ಖಾನಾಪುರದ ಮತಗಟ್ಟೆ ಕೇಂದ್ರದಲ್ಲಿ ಪೊಲೀಸರು ಮತದಾರರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮತದಾನಕ್ಕೆ ಬಂದ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ ಜನರು ಯಾದಗಿರಿ–ಶಹಾಪುರ ಸಂಪರ್ಕ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕಲ್ಲು ತೂರಾಟ:

ಸುರಪುರ ಕ್ಷೇತ್ರ ವ್ಯಾಪ್ತಿಯ ಚಿಗರಿಹಾಳದಲ್ಲಿ ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳು ಕೆಂಭಾವಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತಕ್ಷಣ ಗ್ರಾಮಕ್ಕೆ ಬಂದಿಳಿದ ಭದ್ರತಾ ಪಡೆಯ ಅರೆಸೇನಾ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿ ತಂದು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಹುಣಸಗಿ ತಾಲ್ಲೂಕಿನ ಯಡಹಳ್ಳಿಯಲ್ಲೂ ಕಲ್ಲು ತೂರಾಟ ನಡೆದಿದೆ. ಅಲ್ಲೂ ಬಿಗಿಭದ್ರತೆ ಒದಗಿಸಿ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮತದಾನ ವಿಳಂಬ:

ಯಾದಗಿರಿಯ ಕೋಲಿವಾಡ ಬಡಾವಣೆಯಲ್ಲಿ, ಸುರಪುರ ಕ್ಷೇತ್ರದಲ್ಲಿನ ಪುರಸಭೆ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕದೋಷದಿಂದಾಗಿ ಅರ್ಧಗಂಟೆ ಮತದಾನ ವಿಳಂಬವಾಯಿತು. ಅದೇ ರೀತಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 7.30ಕ್ಕೆ ಮತದಾನ ಆರಂಭಗೊಂಡಿತು. ಶಹಾಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಹೊಸೂರಿನಲ್ಲೂ ಮತಯಂತ್ರದಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಮತದಾನ ವಿಳಂಬವಾಗಿದೆ.

ಗುರುಮಠಕಲ್‌ ಕ್ಷೇತ್ರ ವ್ಯಾಪ್ತಿಯ ಬಳಿಚಕ್ರ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 175ರಲ್ಲಿ ಹಾಗೂ ಕಾಳೆಬೆಳಗುಂದಿ, ಕೌಳೂರು ಗ್ರಾಮಗಳಲ್ಲಿ ಮತಗಟ್ಟೆ ಸಿಬ್ಬಂದಿ ಇವಿಎಂ ಜೋಡಣಾ ಕಾರ್ಯದಲ್ಲಿ ಮಾಡಿದ ವಿಳಂಬದಿಂದಾಗಿ ಅರ್ಧಗಂಟೆ ಮತದಾನ ವಿಳಂಬವಾಗಿದೆ.

ಮತದಾನ ಆರಂಭ ನಾಲ್ಕು ಗಂಟೆಗಳ ನಂತರ ಸುರಪುರ ಕ್ಷೇತ್ರದಲ್ಲಿ ಶೇ 11ರಷ್ಟು, ಶಹಾಪುರಕ್ಷೇತ್ರದಲ್ಲಿ ಶೇ 13ರಷ್ಟು, ಯಾದಗಿರಿ ಕ್ಷೇತ್ರದಲ್ಲಿ ಶೇ 12 ರಷ್ಟು ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಶೇ 10ರಷ್ಟು ಮತದಾನ ಆಗಿತ್ತು. ಸರಾಸರಿ ಶೇ 24ರಷ್ಟು ಮತದಾನ ನಡೆದಿತ್ತು.

ನಂತರ ಸಂಜೆ 5 ರವರೆಗೆ ಮತದಾರರು ಸುರಪುರದಲ್ಲಿ ಶೇ 54ರಷ್ಟು, ಶಹಾಪುರದಲ್ಲಿ ಶೇ 59ರಷ್ಟು, ಯಾದಗಿರಿಯಲ್ಲಿ ಶೇ 56, ಗುರುಮಠಕಲ್‌ನಲ್ಲಿ ಶೇ 56ರಷ್ಟು ಮತದಾನ ಮಾಡಿದ್ದರು. ಜಿಲ್ಲೆಯಾದ್ಯಂತ ಸರಾಸರಿ ಒಟ್ಟು 57.19ರಷ್ಟು ಮತದಾನ ಆಗಿತ್ತು. ಸಂಜೆ ಮೋಡ ಕವಿದ ವಾತಾವರಣ ಉಂಟಾಗಿ ಬಿರುಬಿಸಿಲು ಕಣ್ಮರೆಯಾಗಿ ತಂಗಾಳಿ ಬೀಸತೊಡಗುತ್ತಿದ್ದಂತೆ ಮತಗಟ್ಟೆ ಕೇಂದ್ರಗಳತ್ತ ಜನರು ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆ ಚುರುಕುಗೊಂಡಿತು.

ಭದ್ರತಾ ಕೊಠಡಿಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ:

ಮತದಾನದ ನಂತರ ಗುರುಮಠಕಲ್, ಯಾದಗಿರಿ, ಸುರಪುರ, ಶಹಾಪುರ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಭದ್ರವಾಗಿ ಇಡಲಾಯಿತು. ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮತಯಂತ್ರಗಳನ್ನು ಜೋಪಾನವಾಗಿ ಜೋಡಿಸಲಾಯಿತು. ನಂತರ ಕೋಣೆಗೆ ಭದ್ರವಾಗಿ ಮುಚ್ಚಿ ಬೀಗಮುದ್ರೆ ಹಾಕಲಾಯಿತು.

ಮತದಾನದ ನಂತರ ಮಗುವಿಗೆ ಜನ್ಮ

ಸುರಪುರ ತಾಲ್ಲೂಕಿನ ಕೊಡೇಕಲ್ ಸಮೀಪದ ವೈಳುಕುಂಟೆ ಗ್ರಾಮದಲ್ಲಿ ಶನಿವಾರ ಗರ್ಭಿಣಿ ಕೊಂತೆಮ್ಮ ಹೆರಿಗೆ ನೋವಿನ ಮಧ್ಯೆಯೂ ಮತದಾನ ಮಾಡಿದ್ದಾರೆ. ನಂತರ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಅದೇ ರೀತಿಯಲ್ಲಿ ತಾಯಿ ಅಗಲಿಕೆಯನ್ನು ನುಂಗಿಕೊಂಡೇ ನೋವಿನ ಮಧ್ಯೆ ನಗನೂರಿನ ಸೋಮಣ್ಣ ಅವರ ಕುಟುಂಬ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಯರಗೋಳದ ಗೋಡೇಕಾರ್ ಕುಟುಂಬ ಸಣ್ಣ ಬಸಣ್ಣ ನಿಧನರಾಗಿದ್ದರು. ಆದರೆ, ಅವರನ್ನು ಕಳೆದುಕೊಂಡಿದ್ದರೂ ಅವರ ಕುಟುಂಬದವರು ಮತದಾನದ ನಂತರ ಅಂತ್ಯಸಂಸ್ಕಾರಕ್ಕೆ ಮುಂದಾಗುವ ಮೂಲಕ ಮತದಾನಕ್ಕೆ ಮಹತ್ವ ನೀಡಿದರು. ಈ ಎಲ್ಲಾ ಘಟನೆಗಳು ಶನಿವಾರ ಮತದಾನ ಸಂದರ್ಭದಲ್ಲಿ ಸಮಾಜಕ್ಕೆ ಮಾದರಿ ಎನಿಸಿದವು.

**
ನೌಕರ ಸಿಬ್ಬಂದಿ ಶಿಬಿರ, ಅಭಿಯಾನ, ಬೀದಿ ನಾಟಕಗಳ ಮೂಲಕ ಮತದಾನ ಜಾಗೃತಿ ಮೂಡಿಸಿದ್ದರಿಂದ ಗರಿಷ್ಠ ಮತದಾನವಾಗಿದೆ
– ಜೆ.ಮಂಜುನಾಥ್,  ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT