ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಬೇಕು

ನೂತನ ಗ್ರಂಥಾಲಯ ಉದ್ಘಾಟಿಸಿ ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ ಶೆಟ್ಟಿ
Last Updated 22 ನವೆಂಬರ್ 2019, 13:47 IST
ಅಕ್ಷರ ಗಾತ್ರ

ಉಡುಪಿ: ಸಮಾಜದಲ್ಲಿ ಭ್ರಷ್ಟಾಚಾರ ಕ್ಯಾನ್ಸರ್‌ನಂತೆ ಹರಡಿಕೊಂಡಿದ್ದು, ಅದನ್ನು ಬುಡದಿಂದಲೇ ಕಿತ್ತುಹಾಕುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕಾರ್ಯಪ್ರವೃತ್ತವಾಗಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನೂತನ ಗ್ರಂಥಾಲಯ ‘ಜ್ಞಾನ ಸಿಂಧು’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲಿಕೆ ಸಮಾಜದಲ್ಲಿ ಬಹಳ ಪ್ರಭಾವ ಬೀರುವ ವೃತ್ತಿಯಾಗಿದೆ. ಬಡವರು, ಕಾರ್ಮಿಕರಿಂದ ಅಧಿಕಾರಿಗಳು, ಮುಖ್ಯಮಂತ್ರಿ, ಪ್ರಧಾನಮಂತ್ರಿಯವರೆಗೆ ಎಲ್ಲರೂ ಕೂಡ ಕಕ್ಷಿದಾರರಾಗಿ ಬರುತ್ತಾರೆ. ವೃತ್ತಿಯಲ್ಲಿ ಆಸಕ್ತಿ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಉತ್ತಮ ವಕೀಲರಾಗಿ ಗೌರವ ಸಂಪಾದಿಸಬಹುದು ಎಂದರು.

ಜ್ಞಾನ ಎಂಬುದು ದೊಡ್ಡ ಶಕ್ತಿ ಮತ್ತು ಬಲ. ಎಲ್ಲ ರೀತಿಯ ಸಂಪತ್ತಿಗಿಂತ ಜ್ಞಾನ ಸಂಪತ್ತು ಬಹಳ ಮೌಲ್ಯಯುತ ಆಸ್ತಿ. ಪುಸ್ತಕಗಳ ಓದಿನಿಂದ ಜ್ಞಾನ ಸಂಪತ್ತು ಪಡೆಯಬಹುದು. ವಿದ್ಯಾರ್ಥಿಗಳು ಕಾಲೇಜು ಅಥವಾ ಸಾರ್ವಜನಿಕ ಗ್ರಂಥಾಲಯಗಳನ್ನು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಈಚೆಗೆ ಗ್ರಂಥಾಲಯಗಳು ಸ್ಮಾರಕಗಳಾಗುತ್ತಿವೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯಗಳ ಕಡೆಗೆ ಸುಳಿಯುತ್ತಿಲ್ಲ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಜ್ಞಾನ ಕೌಶಲ ವೃದ್ಧಿಸಿಕೊಳ್ಳುವ ಕಡೆಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ಕೆಲವೊಂದು ಗ್ರಾಮ ಪಂಚಾಯ್ತಿ ಹಾಗೂ ಗ್ರಾಮ ಲೆಕ್ಕಿಗರ ಸ್ತರದಲ್ಲಿ ಲೋಪದೋಷಗಳಿದ್ದು, ಅದನ್ನು ಶೀಘ್ರವೇ ಸರಿಪಡಿಸಿಕೊಂಡು ಜಿಲ್ಲೆಯಲ್ಲಿ ಅತ್ಯುತ್ತಮ ಆಡಳಿತ ನೀಡಲು ಪ್ರಯತ್ನಿಸಲಾಗುವುದು. ಉಡುಪಿಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಡಿಸಿ ತಿಳಿಸಿದರು.

ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಮಧು ರಾಘವನ್‌, ಮಣಿಪಾಲ ಡಾ.ಟಿಎಂಎ ಪೈ ಫೌಂಡೇಶನ್‌ ಕೋಶಾಧಿಕಾರಿ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್‌ ಕಣಿವೆ ಸ್ವಾಗತಿಸಿದರು. ಶ್ರೀಲಕ್ಷ್ಮೀ ಕಾಮತ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT