ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಕೋವಿಡ್–19 ಗಂಟಲು ದ್ರವ ಸಂಗ್ರಹ: ಮನೆಗಳಿಗೆ ವಾಹನ

ಜಿಲ್ಲೆಯಲ್ಲಿ ವಿನೂತನ ಪ್ರಯೋಗ
Last Updated 3 ಮೇ 2020, 3:17 IST
ಅಕ್ಷರ ಗಾತ್ರ

ಕುಂದಾಪುರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಜನರು ಕೋವಿಡ್‌–19ರ ಸೋಂಕು ಪರೀಕ್ಷೆಗಾಗಿ ನಗರಕ್ಕೆ ಬರುವುದು ಕಷ್ಟವಾಗುತ್ತದೆ, ಹಳ್ಳಿಯ ಜನರಿಗೂ ಈ ಪರೀಕ್ಷೆಯ ಉಪಯೋಗವಾಗಬೇಕು ಎನ್ನುವ ಚಿಂತನೆಯಡಿಯಲ್ಲಿ ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹಕ್ಕೆ ಯೋಜನೆ ರೂಪಿಸಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಹನದ ಮೂಲಕ ಗ್ರಾಮೀಣ ಭಾಗಗಳಿಗೆ ತೆರಳಿ ಗರ್ಭಿಣಿಯರು, ಹಿರಿಯ ನಾಗರಿಕರು, ಹೊರ ಭಾಗದಿಂದ ಊರಿಗೆ ಬಂದಿರುವವರ ಮಾಹಿತಿ ಪಡೆದು ಆದ್ಯತೆಯ ಮೇರೆಗೆ ಅವರಿಂದ ಗಂಟಲು ದ್ರವ ಹಾಗೂ ಮೂಗಿನ ದ್ರವವನ್ನು ಪಡೆದುಕೊಂಡು ಪರೀಕ್ಷೆ ಕಳುಹಿಸುವ ವಿನೂತನ ಯೋಜನೆಯನ್ನು ಕಾರ್ಯಗತಗೊಳಿಸಿದೆ.

ಮಾರುತಿ ಆಮ್ನಿ ವಾಹನವನ್ನು ಸುಸಜ್ಜಿತ ಸಂಚಾರಿ ಪ್ರಯೋಗಾಲಯವಾಗಿ ಸಿದ್ಧಪಡಿಸಲಾಗಿದೆ. ಇಲ್ಲಿ ಸ್ಯಾನಿಟೈಸರ್‌, ಕೈ ತೊಳೆಯಲು ನಲ್ಲಿ, ಲ್ಯಾಬ್‌ ಟೆಕ್ನಿಷಿಯನ್‌ ಕುಳಿತುಕೊಳ್ಳಲು ಆಸನ, ಜನರನ್ನು ಮುಟ್ಟದೆ ಅಂತರ ಕಾಯ್ದುಕೊಂಡು ಗಂಟಲು ದ್ರವ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳು ಇವೆ. ಟೆಕ್ನಿಷಿಯನ್‌ಗೆ ಸುರಕ್ಷಾ ಕವಚವನ್ನು ಒದಗಿಸಲಾಗಿದೆ. ಕಾರಿಗೆ ಅಳವಡಿಸಿದ ಧ್ವನಿವರ್ಧಕದ ಮೂಲಕ ಕೊರೊನಾ ಜಾಗೃತಿ ಸಾರುವ ಕೆಲಸ ನಡೆಯುತ್ತಿದೆ. ವಾಹನದಲ್ಲಿ ಚಾಲಕನಲ್ಲದೆ ಒಬ್ಬರು ಲಾಬ್‌ ಟೆಕ್ನಿಷಿಯನ್‌ ಇರುತ್ತಾರೆ. ಚಾಲಕನ ಸಂಬಳವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಭರಿಸಲಿದೆ. ಪ್ರತಿದಿನ 5 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಗ್ರಹ ಕಾರ್ಯ ನಡೆಯಲಿದೆ. ವಾಹನ ವಿನ್ಯಾಸಗೊಳಿಸಲು ಕುಂದಾಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘ ಆರ್ಥಿಕ ಸಹಕಾರ ನೀಡಿದೆ.

ಜಿಲ್ಲಾಧಿಕಾರಿ ಜಗದೀಶ್‌ ಗುರುವಾರ ಮಣಿಪಾಲದಲ್ಲಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೊಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ಎ.ಸಿ. ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್‌ಚಂದ್ರ ಸೂಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಕಾರ್ಯದರ್ಶಿ ದಿವಾಕರ ಖಾರ್ವಿ, ಡಾ.ನಾಗಭೂಷಣ ಉಡುಪ, ಡಾ.ಕೆ.ಪ್ರೇಮಾನಂದ, ಪ್ರಕಾಶ್ಚಂದ್ರ ಶೆಟ್ಟಿ, ಯು.ರಾಧಾಕೃಷ್ಣ, ಗಣೇಶ್‌ ಶೆಟ್ಟಿ ಮೊಳಹಳ್ಳಿ, ರಮೇಶ್‌ ಶೆಟ್ಟಿ, ಚಂದ್ರಕಾಂತ್‌ ಬಿ. ಇದ್ದರು.

ಕಡಿಮೆ ಖರ್ಚಿನಲ್ಲಿ ಜನಸ್ನೇಹಿ ವ್ಯವಸ್ಥೆಯ ಕಲ್ಪನೆಯನ್ನು ರೂಪಿಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ರಿಂದ 10 ಸ್ಯಾಂಪಲ್‌ ಸಂಗ್ರಹ ಯೋಜನೆ ರೂಪಿಸಿದ್ದೇವೆ. ಜಿಲ್ಲೆಯಲ್ಲಿ ಪ್ರಯೋಗಾಲಯ ಪ್ರಾರಂಭವಾದಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದರು.

ಪ್ರಾರಂಭ ಹಂತದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಹಾಗೂ ಬೈಂದೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ.ಪ್ರೇಮಾನಂದ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನಲ್ಲಿ ಸಂಗ್ರಹ ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT