ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮಗಾರಿ ನಿರ್ಲಕ್ಷ್ಯದಿಂದ ಅನಾಹುತವಾದರೆ ಕ್ರಿಮಿನಲ್‌ ಕೇಸ್‌: ಜಿಲ್ಲಾಧಿಕಾರಿ

Published 4 ಮೇ 2024, 15:39 IST
Last Updated 4 ಮೇ 2024, 15:39 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ‘ಎ’ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾದಂತೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿ ನಂತರವಷ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಅಂಡರ್‌ಪಾಸ್ ರಸ್ತೆ ಕಾಮಗಾರಿಯಿಂದ ಸ್ಥಳೀಯರಿಗೆ, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ.

ಕಾಮಗಾರಿಯಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆಯೂ ದೂರುಗಳಿವೆ. ಕೂಡಲೇ ಹೆದ್ದಾರಿ ಇಲಾಖೆ ಅಧಿಕಾರಿಗಳು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು.

ಅಂಡರ್‌ಪಾಸ್ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ಮಾತ್ರವಲ್ಲ; ಸ್ಥಳೀಯರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂತೆಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಿರುವ ಸಾರ್ವಜನಿಕರು, ದಿನನಿತ್ಯದ ವ್ಯವಹಾರಗಳಿಗೆ ನಗರಗಳ ಕಡೆಗೆ ಬರುವವರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ  ವಿದ್ಯಾರ್ಥಿಗಳು ರಸ್ತೆ ದಾಟಲು ಕಿ.ಮೀಟರ್ ದೂರ ನಡೆದುಕೊಂಡು ಹೋಗುವ ಅನಿವಾರ್ಯತೆ ಉಂಟಾಗಿದೆ. ಪಾದಚಾರಿಗಳು ರಸ್ತೆ ದಾಟಲು ತಾತ್ಕಾಲಿಕ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ಗುತ್ತಿಗೆದಾರರು ಅಥವಾ ಎಂಜಿನಿಯರ್‌ಗಳ ನಿರ್ಲಕ್ಷದಿಂದ ರಸ್ತೆ ಅಪಘಾತಗಳು ಸಂಭವಿಸಿದರೆ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಹನಗಳು ಯಾವ ಮಾರ್ಗದಲ್ಲಿ ಚಲಿಸಬೇಕು, ವೇಗ ಎಷ್ಟಿರಬೇಕು, ಕಾಮಗಾರಿ ಎಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ವಾಹನ ಸವಾರರಿಗೆ ಎದ್ದು ಕಾಣುವ ರೀತಿಯಲ್ಲಿ ಅಳವಡಿಸಬೇಕು. ಮುಂದಿನ ತಿಂಗಳು ಮಳೆಗಾಲ ಆರಂಭವಾಗುವ ಸಾಧ್ಯತೆಗಳಿದ್ದು, ಕಾಮಗಾರಿಗಳಿಗೆ ಅಡ್ಡಿಯಾಗುವ ಆತಂಕವಿದ್ದು ಸಂಚಾರ ವ್ಯತ್ಯಯವಾಗಲಿದೆ. ಈಗಿನಿಂದಲೇ ಅಗತ್ಯ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಇಂದ್ರಾಳಿ ರೈಲ್ವೆ ಬ್ರಿಡ್ಜ್‌ ಮೇಲ್ಸೇತುವೆ ಕಾಮಗಾರಿಗೆ ಬಂದಿರುವ ಕಬ್ಬಿಣದ ಗರ್ಡರ್‌ಗಳ ಜೋಡಣೆ ಕಾರ್ಯ ಕೂಡಲೇ ಪ್ರಾರಂಭಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ಹೆದ್ದಾರಿ ಕಾಮಗಾರಿಗೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಉಪ ವಿಭಾಗಾಧಿಕಾರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಪೂರ್ಣಗೊಳಿಸಿ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.

ಪರ್ಕಳ ಸಮೀಪದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣವಿದ್ದು ಶೀಘ್ರ ಇತ್ಯರ್ಥಪಡಿಸಲು ನ್ಯಾಯವಾದಿಗಳ ಜೊತೆ ಚರ್ಚಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭ ಉಪ ವಿಭಾಗಾಧಿಕಾರಿ ರಶ್ಮಿ, ಉಡುಪಿ ತಹಶೀಲ್ದಾರ್ ಗುರುರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಮೊಹಮದ್ ಅಜ್ಮಿ ಇದ್ದರು.

ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ: ಎಸ್‌ಪಿ
ಕಾಮಗಾರಿ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪ್ರಾಣಕ್ಕೆ ಸಂಚಾರಕ ಬರುವ ಸಂಭವಗಳು ಹೆಚ್ಚಾಗಿರುತ್ತವೆ. ಪ್ರಾಣಹಾನಿಯಾಗದಂತೆ ಎಚ್ಚರವಹಿಸಿ ಕಾಮಗಾರಿ ಮಾಡಬೇಕು. ನಿರ್ಲಕ್ಷ್ಯದಿಂದ ಅನಾಹುತ ಸಂಬಂಧಿಸಿದರೆ ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲೆ ಪ್ರಕರಣ ದಾಖಲಿಸಲಾಗುವುದು. ಪ್ರಕರಣ ದಾಖಲಿಸಲು ಪೊಲೀಸರು ನಿರ್ಲಕ್ಷಿಸಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್‌ಪಿ ಡಾ.ಕೆ. ಅರುಣ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT