ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೊಸ ಕಾನೂನುಗಳಿಂದ ನಾಗರಿಕರಿಗೆ ಅಸುರಕ್ಷೆ‌’

ನೂತನ ಕ್ರಿಮಿನಲ್‌ ಕಾನೂನುಗಳ ಸಾಧಕ ಬಾಧಕಗಳ ಕುರಿತು ಸಂವಾದ
Published 25 ಜೂನ್ 2024, 6:33 IST
Last Updated 25 ಜೂನ್ 2024, 6:33 IST
ಅಕ್ಷರ ಗಾತ್ರ

ಉಡುಪಿ: ‘ಭಾರತೀಯ ದಂಡ ಸಂಹಿತೆಗೆ ಬದಲಾಗಿ ಜಾರಿಗೊಳ್ಳಲಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೇರಿದಂತೆ ನೂತನ ಮೂರು ಕಾನೂನುಗಳು ನಾಗರಿಕರಿಗೆ ಅಸುರಕ್ಷೆ ತರುವ ಕಾನೂನುಗಳಾಗಿವೆ’ ಎಂದು ವಕೀಲ ಎಂ. ಶಾಂತಾರಾಮ್‌ ಶೆಟ್ಟಿ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಕೀಲರ ಸಂಘ ಉಡುಪಿ ಹಾಗೂ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಯೋಗದಲ್ಲಿ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೂತನ ಕ್ರಿಮಿನಲ್‌ ಕಾನೂನುಗಳ ಸಾಧಕ ಬಾಧಕಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೊಸ ಕಾನೂನುಗಳಲ್ಲಿ ಶೇ 70 ರಷ್ಟು ಹಿಂದಿನದ್ದೇ ಇದೆ. ಕೆಲವು ಸೆಕ್ಷನ್‌ಗಳನ್ನು ಅನಗತ್ಯವಾಗಿ ಸೇರಿಸಲಾಗಿದೆ. ಹಳೆಯ ಸೆಕ್ಷನ್‌ಗಳನ್ನು ಗೋಜಲು ಮಾಡಲಾಗಿದೆ. ಈಗಿರುವ ಮೂರು ಕಾನೂನುಗಳು ಮೂರು ರತ್ನಗಳಿದ್ದಂತೆ. ಅವುಗಳನ್ನು ಬದಲಾಯಿಸುವಂತೆ ಯಾರೂ ಬೇಡಿಕೆ ಮುಂದಿರಿಸಿರಲಿಲ್ಲ. ಹಳೆಯ ಕಾನೂನುಗಳನ್ನು ಬದಲಾಯಿಸುತ್ತೇವೆ ಎಂದು ಯಾವ ಪಕ್ಷವೂ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರಲಿಲ್ಲ. ಹೀಗಿದ್ದೂ ಹೊಸ ಕಾನೂನುಗಳನ್ನು ಜನರ ಮೇಲೆ ಹೇರಲಾಗುತ್ತಿದೆ’ ಎಂದರು.

ಬ್ರಿಟಿಷರ ಕಾನೂನುಗಳನ್ನು ಬದಲಿಸಿ ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ, ಆದರೆ ಬ್ರಿಟಿಷರು ನಮ್ಮನ್ನು ದಮನಿಸಲು ಕಾನೂನು ತಂದಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಕೆಲವು ಸೆಕ್ಷನ್‌ಗಳ ಅಡಿ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸಬಹುದಿತ್ತು. ಆದರೆ ಅವರಿಗೆ ಮಾನವ ಹಕ್ಕುಗಳ ಬಗ್ಗೆ ಅಪಾರ ಕಾಳಜಿ ಇತ್ತು ಎಂದು ಪ್ರತಿಪಾದಿಸಿದರು.

ಹಳೆಯ ಕಾನೂನುಗಳು ಸರಿ ಇಲ್ಲ ಎಂಬ ಕೂಗು ಎಲ್ಲೂ ಕೇಳಿ ಬಂದಿಲ್ಲ. ಆದರೂ ಹಳೆಯ ಕಾನೂನುಗಳನ್ನು ಬದಲಿಸುತ್ತಿರುವ ಉದ್ದೇಶ ಅರ್ಥವಾಗುತ್ತಿಲ್ಲ. ಮೂರು ಕಾನೂನುಗಳಿಗೆ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆ ಎಂಬುದಾಗಿ ಸಂಸ್ಕೃತದ ಹೆಸರಿಡಲಾಗಿದೆ. ದೇಶದಲ್ಲಿ ಸಂಸ್ಕೃತ ಗೊತ್ತಿರುವವರ ಸಂಖ್ಯೆ ಅಂದಾಜು 24,000 ಆದರೂ ಸರ್ಕಾರ ಇಲ್ಲಿ ಸಂಸ್ಕೃತ ಬಳಸಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.

ಹೊಸ ಕಾನೂನುಗಳ ಪ್ರಕಾರ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯಗಳು ನಡೆದಾಗ, ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ 14 ದಿನಗಳ ಕಾಲಾವಕಾಶ ಇರುತ್ತದೆ. ಹೊಸ ಕಾನೂನುಗಳಲ್ಲಿ ಪೊಲೀಸರಿಗೆ ಬಹಳಷ್ಟು ಅಧಿಕಾರ ನೀಡಲಾಗಿದೆ. ಈ ರೀತಿಯಾದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು. ಸುಪ್ರೀಂ ಕೋರ್ಟ್‌ ನೀಡಿರುವ ಹಲವು ತೀರ್ಪುಗಳನ್ನು ಹೊಸ ಕಾನೂನಿನಲ್ಲಿ ಗಾಳಿಗೆ ತೂರಲಾಗಿದೆ ಎಂದರು.

ಪ್ರತಿಯೊಬ್ಬರಿಗೂ ನ್ಯಾಯ ಪಡೆಯುವ ಹಕ್ಕನ್ನು ಸಂವಿಧಾನವು ನೀಡಿದೆ. ಹೊಸ ಕಾನೂನುಗಳು ಅದನ್ನು ಕಸಿದುಕೊಳ್ಳಲಿದೆ. ಕೆಲವೊಂದು ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರೆ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಹೊಸ ಕಾನೂನುಗಳು ಜನರ ಆ ಹಕ್ಕನ್ನೂ ಕಸಿದುಕೊಂಡಿದೆ ಎಂದರು.

ವಕೀಲಕ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ ಕುಮಾರ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್‌ ಶೆಟ್ಟಿ ಅಲೆವೂರು ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಮೈಕಲ್ ರೊಡ್ರಿಗಸ್ ನಿರೂಪಿಸಿದರು.

ಸಾಕಷ್ಟು ಅಧ್ಯಯನ ಮಾಡಿಲ್ಲ

’ಕಾನೂನು ಸಚಿವಾಲಯವು ಸಾಕಷ್ಟು ಅಧ್ಯಯನ ಮಾಡದೆ ಹೊಸ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್‌ ಶಾನುಭೋಗ್‌ ಹೇಳಿದರು. ಸುಪ್ರೀಂ ಕೋರ್ಟ್ ಹೈಕೋರ್ಟ್‌ ಮತ್ತು ಇತರ ನ್ಯಾಯಾಲಯಗಳಲ್ಲಿ ವಿಲೇವಾರಿಯಾಗದೆ ಬಾಕಿ ಇರುವ ಪ್ರಕರಣಗಳನ್ನು ಪೊಲೀಸ್‌ ಇಲಾಖೆ ನ್ಯಾಯಾಲಯಗಳಲ್ಲಿರುವ ಮೂಲ ಸೌಕರ್ಯ ಕೊರತೆ ಮತ್ತು ಜನರಿಗೆ ಅನುಕೂಲವಾಗುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಹೊಸ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಬೇಕಿತ್ತು ಎಂದೂ ತಿಳಿಸಿದರು. ಹೊಸ ಕಾನೂನುಗಳನ್ನು ಜಾರಿಗೆ ತರುವುದಕ್ಕೂ ಮುನ್ನ ಅದನ್ನು ಜನರ ಮುಂದಿರಿಸಬೇಕಿತ್ತು. ಹಾಗೆ ಮಾಡಿದ್ದರೆ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT