ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಮೊಟ್ಟೆ, ಕೋಳಿ ಮಾಂಸ ದುಬಾರಿ

Published 17 ಮೇ 2024, 6:56 IST
Last Updated 17 ಮೇ 2024, 6:56 IST
ಅಕ್ಷರ ಗಾತ್ರ

ಉಡುಪಿ: ಬಿಸಿಲಿನ ಧಗೆಯ ತೀವ್ರತೆಗೆ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಮೊಟ್ಟೆ ಹಾಗೂ ಮಾಂಸದ ದರ ವಿಪರೀತ ಹೆಚ್ಚಳವಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಲ್ಲಿ ಮೊಟ್ಟೆಯ ದರ ಬರೋಬ್ಬರಿ ₹1 ಹೆಚ್ಚಳವಾಗಿದೆ. ₹6.50ಕ್ಕೆ ಸಿಗುತ್ತಿದ್ದ ಮೊಟ್ಟೆ ₹7.50ಕ್ಕೆ ಮುಟ್ಟಿದೆ.

ಬೆಲೆ ಏರಿಕೆಗೆ ಕಾರಣ: ಉಡುಪಿ ಜಿಲ್ಲೆಯ ಬೇಡಿಕೆಯ ಬಹುಪಾಲು ಕೋಳಿ ಮೊಟ್ಟೆ ದಾವಣಗೆರೆ, ಮೈಸೂರು, ತಮಿಳುನಾಡು, ಆಂಧ್ರಪ್ರದೇಶ ಭಾಗಗಳಿಂದ ಪೂರೈಕೆಯಾಗುತ್ತದೆ. ಈ ವರ್ಷ ಅಧಿಕ ತಾಪಮಾನ ಇರುವುದರಿಂದ ಬಿಸಿಲಿನ ತಾಪ ತಾಳಲಾರದೆ ಪೌಲ್ಟ್ರಿಗಳಲ್ಲಿ ಮೊಟ್ಟೆ ಉತ್ಪಾದಿಸುವ ಕೋಳಿಗಳ ಸಾವು ಹೆಚ್ಚಾಗಿದೆ.

ಮೊಟ್ಟೆ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ ಪರಿಣಾಮ ಮೊಟ್ಟೆಗಳ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ. ಬೇಡಿಕೆಯಷ್ಟು ಮೊಟ್ಟೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ದರವೂ ಹೆಚ್ಚಾಗಿದೆ ಎನ್ನುತ್ತಾರೆ ಪೌಲ್ಟ್ರಿ ಉದ್ಯಮದಲ್ಲಿ ಕೆಲಸ ಮಾಡುವ ಧೀರಜ್‌.

ತಿಂಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹6 ದರ ಇತ್ತು. ಸದ್ಯ ₹7.50ಕ್ಕೆ ಮಾರಾಟವಾಗುತ್ತಿದೆ. ತಿಂಗಳಲ್ಲಿ ₹1.50 ದರ ಹೆಚ್ಚಳವಾಗಿರುವುದು ಹೊರೆಯಾಗಿದೆ ಎನ್ನುತ್ತಾರೆ ಗ್ರಾಹಕರು.

ಕೋಳಿ ಮಾಂಸವೂ ದುಬಾರಿ: ಮೊಟ್ಟೆ ಮಾತ್ರವಲ್ಲ ಕೋಳಿ ಮಾಂಸವೂ ದುಬಾರಿಯಾಗಿದೆ. ತಿಂಗಳ ಹಿಂದೆ ಚರ್ಮ ರಹಿತ ಬ್ರಾಯ್ಲರ್ ಕೋಳಿ ಕೆ.ಜಿಗೆ ₹260 ಇತ್ತು. ಪ್ರಸ್ತುತ ಕೆ.ಜಿಗೆ ₹300 ಮುಟ್ಟಿದೆ. ಚರ್ಮ ಸಹಿತ ಕೋಳಿ ಕೆ.ಜಿಗೆ ₹280 ಇದೆ. ಕರಾವಳಿಯಲ್ಲಿ ಮೀನಿನ ಹೊರತಾಗಿ ಹೆಚ್ಚು ಬಳಕೆಯಲ್ಲಿರುವ ಕೋಳಿ ಮಾಂಸ ಹಾಗೂ ಮೊಟ್ಟೆ ದರ ಹೆಚ್ಚಳವಾಗಿರುವುದು ಆರ್ಥಿಕ ಹೊರೆಯಾಗಿದೆ ಎನ್ನುತ್ತಾರೆ ಗ್ರಾಹಕರಾದ ಲಾವಣ್ಯ.

ಈ ವರ್ಷ ಸಮುದ್ರದಲ್ಲಿ ಮೀನಿನ ಅಲಭ್ಯತೆಯಿಂದಾಗಿ ಮೀನಿನ ದರ ಗಗನಕ್ಕೇರಿದೆ. ಈಗ ಕೋಳಿ ಮಾಂಸ, ಮೊಟ್ಟೆಯ ದರವೂ ಹೆಚ್ಚಾಗಿರುವುದು ಮಾಂಸ ಪ್ರಿಯರಲ್ಲಿ ನಿರಾಶೆ ಮೂಡಿಸಿದೆ ಎನ್ನುತ್ತಾರೆ ಗ್ರಾಹಕ ವಿಶ್ವನಾಥ್‌ ಶೆಟ್ಟಿ.

ಮಾಂಸಾಹಾರ ದರ ಹೆಚ್ಚಳ: ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಮಾಂಸಾಹಾರ ಹಾಗೂ ಮೀನಿನ ಹೋಟೆಲ್‌ಗಳಿದ್ದು ಮೀನು, ಕೋಳಿ, ಕುರಿ, ಮೊಟ್ಟೆ ದರ ಹೆಚ್ಚಳದ ಬಿಸಿ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಮಾಂಸಾಹಾರ ಹಾಗೂ ಮೀನಿನ ಹೋಟೆಲ್‌ಗಳಲ್ಲಿ ಬಹುತೇಕ ಖಾದ್ಯಗಳ ದರದಲ್ಲಿ ಅಲ್ಪ ಹೆಚ್ಚಳವಾಗಿದೆ.

ಕೋಳಿ ಮಾಂಸ ಹಾಗೂ ಮೊಟ್ಟೆಯ ದಿನ ನಿರಂತರವಾಗಿ ಹೆಚ್ಚಳವಾಗುತ್ತಿರುವುದರಿಂದ ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಉದ್ಯಮಿ ಸಂಜೀವ್‌ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT