ಸಮುದ್ರಕ್ಕಿಳಿಯಲಿವೆ ಎಲೆಕ್ಟ್ರಿಕ್‌ ಮೋಟಾರ್ ಚಾಲಿತ ಬೋಟ್‌ಗಳು

7
ಮಲ್ಪೆ ಕಡಲ ತೀರದಲ್ಲಿ ಪ್ರಾತ್ಯಕ್ಷಿಕೆ; ಜರ್ಮನ್‌ ಕಂಪೆನಿಯಿಂದ ಮೋಟಾರ್ ತಯಾರಿಕೆ

ಸಮುದ್ರಕ್ಕಿಳಿಯಲಿವೆ ಎಲೆಕ್ಟ್ರಿಕ್‌ ಮೋಟಾರ್ ಚಾಲಿತ ಬೋಟ್‌ಗಳು

Published:
Updated:
ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್ ಮೋಟಾರ್ ಬೋಟ್‌

ಉಡುಪಿ: ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್‌ ಮೋಟಾರ್ ಮೀನುಗಾರಿಕಾ ಬೋಟ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಾಗಿ ನಿಂತಿವೆ. ಜರ್ಮನ್ ಮೂಲದ ಟಾರ್ಕಿಡೊ ಕಂಪೆನಿಯು ಮೀನುಗಾರಿಕೆ ಬೋಟ್‌ಗಳಿಗೆ ಬಳಸುವ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಮೋಟಾರ್‌ಗಳನ್ನು ತಯಾರಿಸಿದ್ದು, ಬುಧವಾರ ಮಲ್ಪೆ ಬಂದರಿನಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿತು.

ಬೋಟ್‌ಗಳ ಗಾತ್ರಕ್ಕೆ ಅನುಗುಣವಾಗಿ 1 ಎಚ್‌ಪಿಯಿಂದ 120 ಎಚ್‌ಪಿ ಸಾಮರ್ಥ್ಯದವರೆಗಿನ ಮೋಟಾರ್‌ಗಳು ಲಭ್ಯವಿದೆ. ಸಧ್ಯ ಕಂಪೆನಿಯ ಉತ್ಪನ್ನಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ವರ್ಷಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಾಗುವುದು ಎಂದು ಟೊರ್ಕಿಡೊ ಕಂಪೆನಿಯ ಭಾರತೀಯ ಪಾಲುದಾರ ಹರಿಶಂಕರ್ ಬಾಲಾಜಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವಂತೆ ಜಾಗೃತಿ ಮೂಡಿಸುತ್ತಿದ್ದು, ಇದರ ಭಾಗವಾಗಿ ಈಗಾಗಲೇ ಎಲೆಕ್ಟ್ರಿಕಲ್ ಕಾರುಗಳು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಂಡಿವೆ. ಕೆಲವೇ ವರ್ಷಗಳಲ್ಲಿ ಸಮುದ್ರದೊಳಗೆ ಡೀಸೆಲ್‌, ಸೀಮೆಎಣ್ಣೆ ಚಾಲಿತ ಎಂಜಿನ್‌ಗಳ ಬದಲಾಗಿ ಬ್ಯಾಟರಿ ಚಾಲಿತ ಎಂಜಿನ್‌ಗಳ ಬೋಟ್‌ಗಳನ್ನು ಕಾಣಬಹುದು ಎಂದರು.

ಎಲೆಕ್ಟ್ರಿಕ್‌ ಮೋಟಾರ್‌ ಪರಿಸರ ಸ್ನೇಹಿ ತಂತ್ರಜ್ಞಾನವಾಗಿದ್ದು, ಹೊಗೆ ಉಗುಳುವುದಿಲ್ಲ. ಕರ್ಕಶ ಶಬ್ಧ ಮಾಡುವುದಿಲ್ಲ. ಮುಖ್ಯವಾಗಿ ಸಮುದ್ರವನ್ನು ಕಲುಷಿತಗೊಳಿಸುವುದಿಲ್ಲ. ಮೋಟಾರ್‌ಗಳಿಗೆ ಬಳಸಿರುವು ಬ್ಯಾಟರಿಯನ್ನು ಲೀಥಿಯಂನಿಂದ ತಯಾರಿಸಲಾಗಿದ್ದು, ಹೆಚ್ಚು ಇಂಧನ ಕ್ಷಮತೆಯನ್ನು ಹೊಂದಿದೆ. ಮೀನುಗಾರಿಕೆಗೆ ಸಾಗುವ ದೂರವನ್ನು ಆಧರಿಸಿ ಹೆಚ್ಚುವರಿ ಬ್ಯಾಟರಿಗಳನ್ನು ಬೋಟ್‌ಗಳಲ್ಲಿ ಸಾಗಿಸಬಹುದು ಎಂದು ಬಾಲಾಜಿ ಮಾಹಿತಿ ನೀಡಿದರು.

ಬ್ಯಾಟರಿ ಯಾವ ಪ್ರಮಾಣದಲ್ಲಿ ಚಾರ್ಚ್‌ ಆಗಿದೆ. ಸಮುದ್ರದಲ್ಲಿ ಎಷ್ಟು ನಾಟಿಕಲ್‌ ಮೈಲು ಸಾಗಬಹುದು. ವೇಗ, ಬ್ಯಾಟರಿ ಎಷ್ಟು ಕಾಲದವರೆಗೆ ಬರುತ್ತದೆ, ಹೀಗೆ, ಎಲ್ಲ ವಿವರಗಳನ್ನು ಪಡೆಯಬಹುದು. ಶೇ 10ರಷ್ಟು ಬ್ಯಾಟರಿಯಲ್ಲೂ ಸರಾಗವಾಗಿ ಬೋಟ್‌ಗಳನ್ನು ಚಲಾಯಿಸಬಹುದು ಎಂದು ತಿಳಿಸಿದರು.

ಸಾಮಾನ್ಯವಾಗಿ 10 ಎಚ್‌ಪಿ ಸಾಮರ್ಥ್ಯದ ಮೋಟಾರ್‌ ಬ್ಯಾಟರಿಯನ್ನು ಪೂರ್ತಿ ಚಾರ್ಚ್‌ ಮಾಡಿದರೆ, 54 ಕಿ.ಮೀ ಸಾಗಬಹುದು. ವೇಗ ಹಾಗೂ ಬೋಟ್‌ನ ಭಾರದ ಮೇಲೆ ಇಂಧನ ಕ್ಷಮತೆ ನಿರ್ಧಾರವಾಗುತ್ತದೆ. ಡೀಸೆಲ್‌ ಹಾಗೂ ಸೀಮೆಎಣ್ಣೆ ಬಳಕೆಗೆ ಹೋಲಿಸಿದರೆ, ಮೀನುಗಾರರಿಗೆ ಆರ್ಥಿಕ ಹೊರೆ ಕಡಿಮೆಯಾಗುವುದು ಖಚಿತ. 10 ಎಚ್‌ಪಿ ಸಾಮರ್ಥ್ಯದ ಮೋಟಾರ್‌ ಬೆಲೆ ₹ 7.5 ಲಕ್ಷವಾಗುತ್ತದೆ. ದುಬಾರಿ ಎನಿಸಿದರೂ ನಿರ್ವಹಣಾ ವೆಚ್ಚ ತೀರಾ ಕಡಿಮೆ ಎಂದರು.

ಸಧ್ಯ ಪ್ರಾಯೋಗಿಕವಾಗಿ ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಚೆನ್ನೈನಲ್ಲಿ ಕಂಪೆನಿಯ ಕೇಂದ್ರ ಕಚೇರಿಯಿದ್ದು, ಬೇಡಿಕೆಗೆ ತಕ್ಕಂತೆ ಮೋಟಾರ್‌ಗಳನ್ನು ಪೂರೈಸಲಾಗುವುದು. ಮೀನುಗಾರಿಕಾ ಸಚಿವರಾದ ವೆಂಕಟರಾವ್ ನಾಡಗೌಡ ಅವರೂ ಮೋಟಾರ್‌ಗಳ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ್ದಾರೆ ಎಂದರು.

ಅತ್ಯುತ್ತಮ ಜರ್ಮನ್‌ ತಂತ್ರಜ್ಞಾನದ ಮೋಟಾರ್‌ಗಳು ದೀರ್ಘಕಾಲ ಬಾಳಿಕೆ ಬರಲಿವೆ. ಮಾರಾಟದ ಬಳಿಕವೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದ್ದು, ತಜ್ಞ ಎಂಜಿನಿಯರ್‌ಗಳು ತುರ್ತಾಗಿ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ. ಅಗತ್ಯಬಿದ್ದರೆ ಬಿಡಿಭಾಗಗಳನ್ನು ತರಿಸಿಕೊಡಲಾಗುವುದು. ಬ್ಯಾಟರಿಗೆ 10 ವರ್ಷಗಳ ವಾರಂಟಿ ಸಹ ಇದೆ ಎಂದು ಬಾಲಾಜಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !