ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗಳ ನಿರ್ವಹಣೆ: ಸೇವಾ ಮನೋಭಾ ಇರಲಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಣಿ ದಯಾ ಸಂಘದ ವಿಶೇಷ ಸಭೆ
Last Updated 28 ಸೆಪ್ಟೆಂಬರ್ 2021, 14:48 IST
ಅಕ್ಷರ ಗಾತ್ರ

ಉಡುಪಿ: ಪ್ರತಿಫಲ ಬಯಸದೆ ಸೇವಾ ಮನೋಭಾವದಿಂದ ಗೋಶಾಲೆಗಳಲ್ಲಿನ ಗೋವುಗಳ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಸೋಮವಾರ ಕಚೇರಿಯಲ್ಲಿ ನಡೆದ ಪ್ರಾಣಿ ದಯಾ ಸಂಘದ ವಿಶೇಷ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಹಾಗೂ ಸಂರಕ್ಷಣಾ ಕಾನೂನು ಜಾರಿಗೆ ತಂದಿದ್ದು, ಗೋರಕ್ಷಣೆಗೆ ಜಿಲ್ಲೆಗೊಂದು ಗೋಶಾಲೆ ಆರಂಭಿಸಲು ಮುಂದಾಗಿದೆ. ಪ್ರತಿ ಜಿಲ್ಲೆಗೆ ಮೊದಲ ಹಂತದಲ್ಲಿ ₹ 24 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಮುಂದೆ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಸಿಗಲಿದೆ ಎಂದರು.

ಜಿಲ್ಲೆಯಲ್ಲಿರುವ ದಾನಿಗಳ ಹಾಗೂ ಸಾರ್ವಜನಿಕರ ಸಹಕಾರ ಪಡೆದು ಗೋಶಾಲೆಗಳನ್ನು ನಿರ್ವಹಣೆ ಮಾಡಬೇಕು. ಸರ್ಕಾರ ಗೋವುಗಳ ನಿರ್ವಹಣೆಗೆ ದಿನಕ್ಕೆ ₹ 17.50 ನಿಗದಿಪಡಿಸಿದೆ. ಆದರೆ, ಈ ಹಣ ನಿರ್ವಹಣೆಗೆ ಸಾಲುವುದಿಲ್ಲ ಎಂದು ಈಗಾಗಲೇ ಸಂಘ ಸಂಸ್ಥೆಗಳಿಂದ ಬೇಡಿಕೆ ಬಂದಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಜಿಲ್ಲೆಯಲ್ಲಿ 2,52,724 ಗೋವುಗಳಿದ್ದು, ಅವುಗಳಲ್ಲಿ ಶೇ 0.75ರಷ್ಟು ಅಂದರೆ, 2,000 ಜಾನುವಾರುಗಳಿಗೆ ಸ್ಥಳಾವಕಾಶ ಇರುವಂತೆ ಗೋಶಾಲೆಗಳನ್ನು ತೆರೆಯಬೇಕು. ಕಡ್ಡಾಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ದೈನಂದಿನ ಚಟುವಟಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅ.2ರಿಂದ ಅಪ್‌ಲೋಡ್ ಮಾಡಬೇಕು ಎಂದರು.

ಗೋಶಾಲೆಗಳಲ್ಲಿ ಜನಿಸುವ ಕರು ಹಾಗೂ ಉತ್ಪತ್ತಿಯಾಗುವ ಉತ್ಪನ್ನಗಳನ್ನು ಮಾರಾಟ ಮಾಡಿ ಗೋಶಾಲೆಗಳ ಸುಸ್ಥಿರ ನಿರ್ವಹಣೆ ಹಾಗೂ ಸಂಪನ್ಮೂಲ ಕ್ರೂಢೀಕರಣ ಮಾಡಬೇಕು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಾನುವಾರು ನೋಡಿಕೊಳ್ಳಲು ಮುಂದೆ ಬಂದರೆ ಅವಕಾಶ ನೀಡಲಾಗುವುದು. ಗೋಶಾಲೆಗಳಲ್ಲಿ ಜಾನುವಾರು ಮರಣ ಹೊಂದಿದಲ್ಲಿ ಸ್ಥಳೀಯ ಪಶು ವೈದ್ಯಾದಿಕಾರಿಯಿಂದ ಪ್ರಮಾಣಪತ್ರ ಪಡೆದು ದಾಖಲೆ ಸಂಗ್ರಹಿಸಿಟ್ಟಿರಬೇಕು ಎಂದರು.

ಕಾಡು ಪ್ರಾಣಿಗಳಿಂದ ಜಾನುವಾರು ರಕ್ಷಣೆಗೆ ಅಗತ್ಯವಿರುವ ಕಡೆಗಳಲ್ಲಿ ಸೋಲಾರ್ ದೀಪಗಳ ವ್ಯವ್ಥೆಯನ್ನು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯಿಂದ ಮಾಡಬೇಕು ಎಂದರು.

ಸಭೆಯಲ್ಲಿ ಕಾರ್ಕಳದ ಅಭಿನಂದನ ಗೋಶಾಲೆಯ ಕೆ. ಮಾದೇವ, ಕುಂದಾಪುರದ ಶಿರೂರಿನ ನಂದಗೋಕುಲ ಚಾರಿಟೇಬಲ್ ಟ್ರಸ್ಟ್‌ನ ಸುರೇಶ ಅವಭೃತ, ನೀಲಾವರ ಗೋಶಾಲೆಯ ಟ್ರಸ್ಟಿ ಹಾಗೂ ಡಾ.ಸರ್ವೋತ್ತಮ ಉಡುಪ, ಕುಮಾರ್ ಕಾಂಚನ್ ಗೋಶಾಲೆಗಳ ನಿರ್ವಹಣೆಯ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಶಂಕರ್ ಶೆಟ್ಟಿ, ಪ್ರಾಣಿದಯಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ದೀನಾನಾಥ ವಸಂತ್ ಬಿಜೂರ, ಸುಧೀರ್ ಕಾಂಚನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT