ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಬ್ಬು ನಾರುತ್ತಿವೆ ಗ್ರಾಮೀಣ ರಸ್ತೆಗಳು

ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ, ಸಾರ್ವಜನಿಕರಿಗೆ ಕಿರಿಕಿರಿ
Last Updated 6 ಡಿಸೆಂಬರ್ 2021, 16:32 IST
ಅಕ್ಷರ ಗಾತ್ರ

ಉಡುಪಿ: ‘ನಮ್ಮ ಊರು, ಸ್ವಚ್ಛ ಊರು’ ಎಂಬ ಘೋಷವಾಕ್ಯದಡಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಿಲ್ಲೆಯನ್ನು ‘ಬ್ಲಾಕ್ ಸ್ಪಾಟ್‌ ಮುಕ್ತ’ಗೊಳಿಸಲು ಜಿಲ್ಲಾ ಪಂಚಾಯಿತಿ ಪಣ ತೊಟ್ಟಿದೆ. ಆದರೆ, ಕೆಲವರು ಜಿಲ್ಲಾ ಪಂಚಾಯಿತಿಯ ಆಶಯಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಉಡುಪಿ ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳು ಗಬ್ಬು ನಾರುತ್ತಿವೆ.

ಪಂದುಬೆಟ್ಟು ರಸ್ತೆ ಬದಿ ತ್ಯಾಜ್ಯ ರಾಶಿ:

ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ಗೆ ಉಡುಪಿಯಿಂದ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

34ನೇ ಅಂಬಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಪಂದುಬೆಟ್ಟು ಗ್ರಾಮದ ರಸ್ತೆಯಲ್ಲಿ ಹಸಿ ಹಾಗೂ ಒಣ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ.

ಮಲ್ಪೆ ಬೀಚ್‌ನ ಸೌಂದರ್ಯ ವೀಕ್ಷಿಸಲು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಮಲ್ಪೆ ಬೀಚ್‌ ಪ್ರವೇಶಕ್ಕೆ ಪಂದುಬೆಟ್ಟು ಮಾರ್ಗದ ಮುಖ್ಯರಸ್ತೆಯಲ್ಲಿಯೇ ಸಾಗಬೇಕಿದ್ದು, ತ್ಯಾಜ್ಯದ ದುರ್ನಾತದಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ.

ಇಲ್ಲಿ ಕಸ ಬಿಸಾಡಬೇಡಿ, ಬಿಸಾಡಿದರೆ ದಂಡ ಹಾಕಲಾಗುವುದು ಎಂಬ ಎಚ್ಚರಿಕೆಯ ಫಲಕದ ಬುಡದಲ್ಲಿಯೇ ರಾಶಿಯಾಗಿ ಕಸ ಬಿದ್ದಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

ಮತ್ತೊಂದೆಡೆ, ಅಂಬಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಿದಿಯೂರು, ಅಂಬಲಪಾಡಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ ಕಾಣುತ್ತದೆ. ಈ ರಸ್ತೆಯಲ್ಲಿ ಹಲವು ನೈಸರ್ಗಿಕ ನಾಗಬನಗಳಿದ್ದು, ಕಿಡಿಗೇಡಿಗಳು ನಾಗಬನದೊಳಗೆಯೇ ಮದ್ಯದ ಬಾಟಲಿ, ತ್ಯಾಜ್ಯವನ್ನು ಎಸೆದಿದ್ದಾರೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ದಾರಿ ಹೋಕರು, ವಾಹನ ಸವಾರರು, ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿದೆ.

ನಗರಗಳಿಗೆ ಕೆಲಸಕ್ಕೆ ಹೋಗುವವರು ಬೆಳಗಿನ ಹೊತ್ತು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಸವನ್ನು ಬಿಸಾಡಿ ಹೋಗುತ್ತಾರೆ. ಕೆಲವರು ಯಾರಿಗೂ ಕಾಣದಂತೆ ರಾತ್ರಿ ತಂದು ಸುರಿಯುತ್ತಾರೆ. ಕಸ ಹಾಕದಂತೆ ಜಾಗೃತಿ ಫಲಕಗಳನ್ನು ಹಾಕಿದ್ದರೂ ಅಲ್ಲಿಯೇ ಬಿಸಾಡಿ ಹೋಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ.

‘ನಮ್ಮ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕಾಳಜಿ ಪ್ರತಿಯೊಬ್ಬರಲ್ಲೂ ಬಂದಾಗ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗಬಹುದು’ ಎನ್ನುತ್ತಾರೆ ಅವರು.

‘ಬ್ಲಾಕ್‌ ಸ್ಪಾಟ್‌ಗಳಲ್ಲಿ ಸಿಬ್ಬಂದಿ ನಿಯೋಜನೆ‍’

ಬೆಳಗಿನ ಜಾವ ವಾಕಿಂಗ್‌ ಬರುವವರು, ಕಚೇರಿಗೆ ಹೋಗುವವರು ಅಂಬಲಪಾಡಿ ಕಿದಿಯೂರು ರಸ್ತೆ ಬದಿಗೆ ಕಸ ಎಸೆದು ಹೋಗುತ್ತಾರೆ. ಕೆಲವರು ರಾತ್ರಿಯ ಹೊತ್ತು ಕಸ ತಂದು ಸುರಿಯುತ್ತಾರೆ. ರಸ್ತೆ ಬದಿ ತ್ಯಾಜ್ಯ ಹಾಕದಂತೆ, ಕಸ ಸಂಗ್ರಹ ಮಾಡುವವರಿಗೇ ಕಸ ಕೊಡುವಂತೆ ಪಂಚಾಯಿತಿಯಿಂದ ನಿರಂತರ ಅರಿವು ಮೂಡಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಬೆಳಗಿನ ಹೊತ್ತು ಪಂಚಾಯಿತಿ ಸಿಬ್ಬಂದಿಯೇ ಕಸ ಹಾಕುವ ಜಾಗಗಳಲ್ಲಿ ನಿಲ್ಲುತ್ತಿದ್ದು, ಕಸ ಹಾಕಿದವರಿಗೆ ದಂಡ ಹಾಕಲಾಗುತ್ತಿದೆ. ಜತೆಗೆ, ಹಾಕಿದ ಕಸವನ್ನು ಅವರಿಂದಲೇ ಎತ್ತಿಸಿ ಸ್ವಚ್ಛಗೊಳಿಸುತ್ತಿದ್ದೇವೆ ಎನ್ನುತ್ತಾರೆ ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT