ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.‌ಶೆಟ್ಟಿ ನೈಜ ದೇಶ ಸೇವಕ: ಸಚಿವ ಖಾದರ್

41ಸಾವಿರ ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಖಾದರ್
Published 7 ಜುಲೈ 2024, 6:27 IST
Last Updated 7 ಜುಲೈ 2024, 6:27 IST
ಅಕ್ಷರ ಗಾತ್ರ

ಬೈಂದೂರು: ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಎಚ್. ಎಸ್. ಶೆಟ್ಟಿಯವರು ನೀಡಿರುವಂತಹ ಕೊಡುಗೆಗಳು ಬಹಳಷ್ಟು ಇದೆ. ಸಾಮಾನ್ಯ ಜನರ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಅವರನ್ನು ದೇಶದ ಸಂಪತ್ತಾಗಿ ಮಾರ್ಪಡಿಸುವ ಕಾರ್ಯ ನಿಜವಾದ ದೇಶ ಸೇವೆಯಾಗಿದೆ ಎಂದು ವಿಧಾನಸಭಾ ಸಭಾಪತಿ ಯು. ಟಿ. ಖಾದರ್ ಹೇಳಿದರು.

ಇಲ್ಲಿನ ಜೆಎನ್‌ಆರ್ ಸಭಾಂಗಣದಲ್ಲಿ ಶನಿವಾರ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಜಿಲ್ಲೆಯ 350 ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 41ಸಾವಿರ ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭೆ, ಸಂಸತ್ತು ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಮಾಲೋಚಿಸಿದ ಮಾತ್ರಕ್ಕೆ ದೇಶ ಬಲಿಷ್ಠವಾಗುವುದಿಲ್ಲ. ದೇಶ ಬಲಿಷ್ಟವಾಗಬೇಕಾದರೆ ಪ್ರತಿ ತರಗತಿ ಕೋಣೆಯಲ್ಲಿರುವ ಕಲಿಯುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದರು.

ಮುಂದಿನ ಐದು ವರ್ಷದಲ್ಲಿ ಒಟ್ಟು ನೂರು ಕೊರಗ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡಲು ತೀರ್ಮಾನಿಸಿದ್ದು ಅವುಗಳಲ್ಲಿ ಈಗಾಗಲೇ ಹದಿನಾಲ್ಕು ಮನೆಗಳ ಕಾಮಗಾರಿ ಪೂರ್ಣಗೊಂಡಿದೆ.
ಡಾ.ಎಚ್.ಎಸ್.ಶೆಟ್ಟಿ, ಅಧ್ಯಕ್ಷ, ರಾಜೀವ ಶೆಟ್ಟಿ ಚಾರಿಟಬಲ್ ಟ್ರಸ್ಟ್

ಧನವಂತರು ಬಹಳಷ್ಟು ಜನ ಇರುತ್ತಾರೆ ಆದರೆ ಸಮಾಜದ ಹಿತಕ್ಕಾಕ್ಕಾಗಿ ದಾನ ಮಾಡುವಂತಹ ಹೃದಯ ವೈಶಾಲ್ಯತೆ ಕಡಿಮೆ ಜನರಿಗಿರುತ್ತದೆ. ಶೈಕ್ಷಣಿಕ, ಸಾಮಾಜಿಕ ಸೇವೆಯ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡ ಎಚ್. ಎಸ್ ಶೆಟ್ಟಿ ನೈಜ ದೇಶ ಸೇವಕರು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಮಾತನಾಡಿ, ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ಮೂಲಕ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಅದರಲ್ಲೂ ಶೈಕ್ಷಣಿಕವಾಗಿ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಕರ್ಯದ ಪೂರೈಕೆಗೆ ಆದ್ಯತೆ ನೀಡಲಾಗಿದೆ. ದುಡಿಮೆಯ ಒಂದು ಭಾಗವನ್ನು ಟ್ರಸ್ಟ್ ಮೂಲಕ ಸಮಾಜಕ್ಕೆ ನೀಡುವ ಕಾರ್ಯ ನಡೆಯುತ್ತಿದೆ. ಇದರಿಂದ ನೆಮ್ಮದಿ, ಸಂತೃಪ್ತಿಯಿದೆ ಎಂದರು.

ಉಡುಪಿ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ನಮ್ಮ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ವರ್ಷ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷ ಒಟ್ಟು 41 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ ಇದರ ಜೊತೆಗೆ ಕಂಪ್ಯೂಟರ್‌, ಶೌಚಾಲಯ, ಕುಡಿಯುವ ನೀರು, ಕೊಠಡಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ವಿವರಿಸಿದರು.

ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಹಾಗೂ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ್ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ ವಿತರಿಸಲಾಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಾಶಂಸನೆಗೈದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಎಚ್. ನಾಗರಾಜ ಶೆಟ್ಟಿ, ಮೊಳಹಳ್ಳಿ ದಿನೇಶ ಹೆಗ್ಡೆ ಉಪಸ್ಥಿತರಿದ್ದರು. ಸಮೃದ್ದ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳವಳ್ಳಿ ನಿರೂಪಿಸಿದರು. ಶಿಕ್ಷಕ ರಾಜೀವ ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT