‘ಉಡುಪಿಯಲ್ಲಿ ಸುರಿದಿದ್ದು ಬೂದಿ ಮಳೆ’

7
ಸುರತ್ಕಲ್‌ನ ಎನ್‌ಐಟಿಕೆ ನೀಡಿರುವ ವರದಿಯಲ್ಲಿ ಸ್ಪಷ್ಟ: ಡಾ.ಪಿ.ವಿ.ಭಂಡಾರಿ, ರಾಜಾರಾಂ ತಲ್ಲೂರು

‘ಉಡುಪಿಯಲ್ಲಿ ಸುರಿದಿದ್ದು ಬೂದಿ ಮಳೆ’

Published:
Updated:

ಉಡುಪಿ: ಆಗಸ್ಟ್‌ 3 ಹಾಗೂ 4ರಂದು ನಗರದಲ್ಲಿ ಸುರಿದಿದ್ದು ಬೂದಿಮಿಶ್ರಿತ ಮಳೆ ಎಂದು ಸುರತ್ಕಲ್‌ನ ಎನ್‌ಐಟಿಕೆ ರಾಸಾಯನಿಕ ಎಂಜಿನಿಯರಿಂಗ್ ವಿಭಾಗ ನೀಡಿರುವ ವರದಿಯಲ್ಲಿ ಸ್ಪಷ್ಟವಾಗಿದೆ ಎಂದು ವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಉಡುಪಿ ಪರಿಸರದಲ್ಲಿ ಮಳೆಯ ರೂಪದಲ್ಲಿ ಉದುರಿದ ಬಿಳಿಯ ವಸ್ತುವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ತಪಾಸಣೆ ನಡೆಸಿದ ಎನ್‌ಐಟಿಕೆ ವಿಶ್ಲೇಷಣಾ ವರದಿ ನೀಡಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವರದಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.‌

ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹ ಮಾಡಿದ ಮಾದರಿಯಲ್ಲಿ ಶೇ 71.43 ಬೂದಿ, 12.51 ಫಿಕ್ಸೆಡ್ ಕಾರ್ಬನ್‌, ಶೇ 10.92 ವಲಟೈಲ್‌ ರಾಸಾಯನಿಕಗಳು ಹಾಗೂ ಶೇ 5.09ರಷ್ಟು ತೇವಾಂಶ ಇರುವುದಾಗಿ ವರದಿಯಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದರು.

ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ಅವಘಡಗಳನ್ನು ನಾವು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬೂದಿ ಮಳೆ ಸುರಿದ ಬಗ್ಗೆ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಈ ಪ್ರಕರಣದ ಸುತ್ತಮುತ್ತಲಿನ ಕೈಗಾರಿಕೆಗಳು ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಬಗ್ಗೆ ಸೂಚನೆಗಳನ್ನು ತೋರಿಸುತ್ತಿದೆ ಎಂದು ಅವರು ಆರೋಪಿಸಿದರು.

ಎಂಡೋಸಲ್ಫಾನ್ ಸಮಸ್ಯೆಯನ್ನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕಂಡಿದ್ದೇವೆ. ಸರ್ಕಾರ ಅವರಿಗೆ ಪ್ಯಾಕೇಜ್ ಕೊಟ್ಟು ಕೈತೊಳೆದುಕೊಂಡಿದೆ. ಹಾರುಬೂದಿಯ ವಿಷಯದಲ್ಲೂ ಇದು ಪುನರಾವರ್ತನೆ ಆಗದಿರಲಿ. ಜನಸಾಮಾನ್ಯರಿಗೆ ಬದುಕುವ ಹಕ್ಕುಬೇಕೇ ಹೊರತು ಬದುಕಲಾಗದ ಅಭಿವೃದ್ಧಿ ಬೇಡ ಎಂದು ಅವರು ಸ್ಪಷ್ಟಪಡಿಸಿದರು. 

ಉಡುಪಿ ಜನರ ಮೈಮೇಲೆ ಬೂದಿ ಉದುರಿದಾಗಲೂ ಜನ ಗಟ್ಟಿಯಾಗಿ ಮಾತನಾಡದಿದ್ದರೆ, ನಾಗರಿಕ ಜವಾಬ್ದಾರಿಗಳಿಗೆ ಅಪಚಾರ ಮಾಡಿದಂತೆ. ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳು ತುರ್ತಾಗಿ ಕ್ರಮಕೈಗೊಂಡು ನಾಗರಿಕರಿಗೆ ರಕ್ಷಣೆಯ ಅಭಯ ನೀಡಬೇಕು. ಇಲ್ಲವಾದರೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಬೇಕಾಗುತ್ತದೆ ಎಂದು ಪತ್ರಕರ್ತ ರಾಜಾರಾಂ ತಲ್ಲೂರು ಎಚ್ಚರಿಕೆ ನೀಡಿದರು.

ಪ್ರಕರಣಕ್ಕೆ ಇಂಥವರೇ ಕಾರಣ ಎಂದು ಯಾರ ವಿರುದ್ಧವೂ ಬೊಟ್ಟು ಮಾಡುವುದಿಲ್ಲ. ಆದರೆ, ತಪ್ಪು ಯಾರಿಂದ ಆಗಿದೆ ಎಂಬುದನ್ನು ಪತ್ತೆಹಚ್ಚಬೇಕು. ಸತ್ಯವನ್ನು ಸಾರ್ವಜನಿಕರ ಗಮನಕ್ಕೆ ತರಬೇಕು. ಹಾಗೂ ಇಂತಹ ಘಟನೆಗಳನು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿರುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ರಾಜಾರಾಂ ತಲ್ಲೂರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !