ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೊರೆ ಕಾಣಿಕೆ

ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ‘ಸುಮೇಧ’ ಉಗ್ರಾಣ ಉದ್ಘಾಟಿಸಿದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Last Updated 11 ಜನವರಿ 2022, 12:50 IST
ಅಕ್ಷರ ಗಾತ್ರ

ಉಡುಪಿ: ಹೊರೆ ಕಾಣಿಕೆಯು ಚಿಕ್ಕದಿರಲಿ ದೊಡ್ಡದಿರಲಿ ಎಲ್ಲವೂ ಭಗವಂತನಿಗೆ ‍ಪ್ರಿಯವಾಗುತ್ತದೆ, ಭಕ್ತರಿಗೆ ಶ್ರೇಯಸ್ಸು ಲಭಿಸುತ್ತದೆ ಎಂದು ಭಾವಿ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳು ಹೇಳಿದರು.

ಮಂಗಳವಾರ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ‘ಸುಮೇಧ’ ಹೊರೆ ಕಾಣಿಕೆ ಉಗ್ರಾಣವನ್ನು ಉದ್ಘಾಟಿಸಿದ ಶ್ರೀಗಳು, ‘ಕುಚೇಲ ನೀಡಿದ ಇಡಿ ಅವಲಕ್ಕಿಯೂ ಕೃಷ್ಣನಿಗೆ ಬಹಳ ಪ್ರಿಯವಾಗಿತ್ತು. ಹಾಗೆಯೇ ಭಕ್ತರು ಕಿರು ಕಾಣಿಕೆ ಸಲ್ಲಿಸಿದರೂ ಕೃಷ್ಣ ಸ್ವೀಕರಿಸುತ್ತಾನೆ.ಭಕ್ತರು ಸಲ್ಲಿಸುವ ಸಣ್ಣ ಕಾಣಿಕೆಯೂ ಲೆಕ್ಕವಿರಬೇಕು. ಎಲ್ಲವೂ ಭಕ್ತರಿಗೆ ವಿನಿಯೋಗಬೇಕು ಎಂದರು.

ಕಿದಿಯೂರು ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಕಲ್ಸಂಕ ಗಿರಿಜಾ ಸಿಲ್ಕ್ಸ್‌ನ ರಾಜಾರಾಮ್ ಪೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್, ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು, ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಚೈತನ್ಯ ಇದ್ದರು.

ಮೊದಲ ಹೊರೆಕಾಣಿಕೆ ಸಲ್ಲಿಕೆ:

ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಉಡುಪಿ ಜಿಲ್ಲಾ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ನಿಂದ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಜೋಡುಕಟ್ಟೆಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ವ್ಯಾಪ್ತಿಯ ಉಡುಪಿ, ಬ್ರಹ್ಮಾವರ, ಕಾರ್ಕಳ, ಮೂಡುಬಿದಿರೆ, ಕುಂದಾಪುರ, ಬೈಂದೂರು ತಾಲ್ಲೂಕಿನ ವ್ಯಾಪ್ತಿಯ 70,000ಕ್ಕಿಂತಲೂ ಹೆಚ್ಚಿನ ಸಂಘದ ಸದಸ್ಯರು ಹೊರೆಕಾಣಿಕೆ ಸಲ್ಲಿಸಿದ್ದಾರೆ. ಅಜ್ಜರಕಾಡು ಮೈದಾನದಿಂದ ಕೃಷ್ಣ ಮಠದವರೆಗೆ ಭವ್ಯವಾದ ಮೆರವಣಿಗೆಯಲ್ಲಿ ಹೊರೆ ಕಾಣಿಕೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮರ್ಪಿಸಲಾಗಿರುವ ಹೊರೆಕಾಣಿಕೆಯನ್ನು ಮಠಕ್ಕೆ ಹಸಿದು ಬರುವ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣೆಗೆ ಉಪಯೋಗಿಸಲಾಗುವುದು. ಇಷ್ಟು ದೊಡ್ಡಮಟ್ಟದ ಹೊರೆ ಕಾಣಿಕೆ ಸಮರ್ಪಣೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಹೊರೆ ಕಾಣಿಕೆಯಲ್ಲಿ ಏನಿತ್ತು...

ಹೊರೆಕಾಣಿಕೆಯಲ್ಲಿ 45.5 ಟನ್ ಅಕ್ಕಿ, 1,31,163 ತೆಂಗಿನಕಾಯಿ, 18.6 ಟನ್ ಬೆಲ್ಲ, 4.5 ಟನ್ ಸಕ್ಕರೆ, 26,770 ಬಾಳೆಎಲೆ, 343 ಬಾಳೆ ಗೊನೆ, 1,063 ಸಿಯಾಳ, 6.5 ಟನ್ ತರಕಾರಿ, 7.5 ಟನ್ ಗೆಡ್ಡೆ ಗೆಣಸು, ಬೇಳೆ, ಅಡಿಕೆ, ಅವಲಕ್ಕಿ, ಎಣ್ಣೆ, ತುಪ್ಪ, ಅಕ್ಕಿಮುಡಿ, ರವೆ, ಉಪ್ಪು,‌ ಹಾಳೆ ತಟ್ಟೆ, ದೀಪದ ಎಣ್ಣೆ, ಹಿಂಗಾರ, ಹಣ್ಣು ಹಂಪಲುಗಳನ್ನು ಸಮರ್ಪಿಸಲಾಯಿತು.

ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ ರಘುಪತಿ ಭಟ್, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜಿಲ್ಲಾ ನಿರ್ದೇಶಕ ಗಣೇಶ್, ತಾಲ್ಲೂಕು ನಿರ್ದೇಶಕ ರಾಮ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT